ಶಿಕಾರಿಪುರದಿಂದಲೇ ವಿಜಯೇಂದ್ರ ಸ್ಪರ್ಧೆ: ಪುತ್ರನಿಗಾಗಿ ಯಡಿಯೂರಪ್ಪ ಕ್ಷೇತ್ರ ತ್ಯಾಗ; ಬಿಎಸ್ ವೈ ಹಠಾತ್ ನಿರ್ಧಾರ ಚರ್ಚೆಗೆ ಗ್ರಾಸ!
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ರಾಜಕೀಯ ಭವಿಷ್ಯದ ವಿಚಾರವಾಗಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ತಾವು ಹಲವು ದಶಕಗಳಿಂದ ಸ್ಪರ್ಧೆ ಮಾಡುತ್ತಿರುವ ಶಿಕಾರಿಪುರ ಕ್ಷೇತ್ರವನ್ನು ಪುತ್ರ ವಿಜಯೇಂದ್ರಗೆ ಬಿಟ್ಟುಕೊಡುತ್ತಿದ್ದೇನೆ ಎಂದು ಘೋಷಿಸಿದ್ದಾರೆ.
ನಾನು ಕ್ಷೇತ್ರ ಬಿಟ್ಟುಕೊಡುತ್ತಿರುವುದರಿಂದ ಶಿಕಾರಿಪುರದಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ. ಮೈಸೂರು ಭಾಗದಲ್ಲಿ ವಿಜಯೇಂದ್ರ ಸ್ಪರ್ಧೆಗೆ ಒತ್ತಡವಿದೆ. ಆದರೆ, ಇಲ್ಲಿ ಸ್ಥಾನ ತೆರವಾಗುವುದರಿಂದ ಅವರು ಸ್ಪರ್ಧಿಸುತ್ತಾರೆ ಎಂದರು.
ಅಂಜನಾಪುರ ಜಲಾಶಯಕ್ಕೆ ಬಾಗಿನ ಸಲ್ಲಿಸಿದ ಬಳಿಕ ಮಾತನಾಡಿದ ಬಿಎಸ್ವೈ, ನಾನು ಕ್ಷೇತ್ರ ಬಿಟ್ಟುಕೊಡುತ್ತಿರುವುದರಿಂದ ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ. ಕ್ಷೇತ್ರದ ಜನತೆ ನನಗಿಂತ ಹೆಚ್ಚಿನ ಅಂತರದಲ್ಲಿ ವಿಜಯೇಂದ್ರ ಅವರಿಗೆ ಗೆಲುವು ತಂದುಕೊಡಬೇಕು ಎಂದು ಮನವಿ ಮಾಡಿದರು.
ಈ ಸಂಬಂಧ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ತಮ್ಮ ತಂದೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಯಾವ ರೀತಿ ಮಾರ್ಗದರ್ಶನ ಮಾಡುತ್ತಾರೆ. ಪಕ್ಷ ನಾಯಕರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಅದರಂತೆ ನಡೆಯುತ್ತೇನೆ ಎಂದು ಹೇಳಿದ್ದಾರೆ.
ಈ ಹಿಂದೆಯೂ ಪಕ್ಷ ಕಟ್ಟುವ ಕಾರ್ಯವನ್ನು ಮಾಡಿದ್ದೇನೆ. ಮುಂದೆಯು ನನ್ನ ಕಾರ್ಯ ಮುಂದುವರಿಯುತ್ತದೆ. ಶಿಕಾರಿಪುರ ಸ್ಪರ್ಧೆ ಬಗ್ಗೆ ತಂದೆಯವರನ್ನು ಕೇಳುವ ಪ್ರಶ್ನೆಯೇ ಉದ್ಭವಿಸಿರಲಿಲ್ಲ. ಕ್ಷೇತ್ರ ಜನರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಒತ್ತಾಯ ಮಾಡಿದ್ದರು. ಆದ್ದರಿಂದ ಈ ಬಗ್ಗೆ ನಿರ್ಧಾರ ಮಾಡಿದ್ದಾರೆ. ಯಡಿಯೂರಪ್ಪ ಅವರಿಗೆ ನಿವೃತ್ತಿ ಎಂಬುವುದೇ ಇಲ್ಲ, ಏಕೆಂದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡೋ ಸಂದರ್ಭದಲ್ಲೂ ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವು ತಂದುಕೊಟ್ಟು ಅಧಿಕಾರಕ್ಕೆ ತರುವ ಕಾರ್ಯವನ್ನು ಮುಂದುವರಿಸುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ.