'ಮುಂದಿನ ಸಿಎಂ ಹೇಳಿಕೆ ಮೊದಲು ಕೊಟ್ಟವರೇ ಅವರು, ನಾವು ಮುಂದುವರಿಸಿಕೊಂಡು ಹೋದೆವು': ಜಮೀರ್ ಅಹ್ಮದ್ ತಿರುಗೇಟು

ಕಾಂಗ್ರೆಸ್ ನಲ್ಲಿ 'ಸಿಎಂ ಕುರ್ಚಿ ಕಾದಾಟ' ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ನಾಯಕರ ಟಾಕ್ ವಾರ್ ಜೋರಾಗಿದೆ. ಸಿದ್ದರಾಮೋತ್ಸವ ದಿನ ಹತ್ತಿರ ಬರುತ್ತಿದ್ದಂತೆ ಅದು ಜೋರಾಗಿದೆ.  
ಜಮೀರ್ ಅಹ್ಮದ್ ಖಾನ್
ಜಮೀರ್ ಅಹ್ಮದ್ ಖಾನ್

ದಾವಣಗೆರೆ: ಕಾಂಗ್ರೆಸ್ ನಲ್ಲಿ 'ಸಿಎಂ ಕುರ್ಚಿ ಕಾದಾಟ' ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ನಾಯಕರ ಟಾಕ್ ವಾರ್ ಜೋರಾಗಿದೆ. ಸಿದ್ದರಾಮೋತ್ಸವ ದಿನ ಹತ್ತಿರ ಬರುತ್ತಿದ್ದಂತೆ ಅದು ಜೋರಾಗಿದೆ.  ನಾಯಕರ ಬಗ್ಗೆ ನಿಮಗೆ ಅಭಿಮಾನವಿದ್ದರೆ ಮೊದಲು ಬಾಯಿ ಮುಚ್ಚಿಕೊಂಡು ಪಕ್ಷಕ್ಕಾಗಿ ಕೆಲಸ ಮಾಡಿ, ಕಾಂಗ್ರೆಸ್ ಪಕ್ಷದತ್ತ ಜನರನ್ನು ಸೆಳೆಯುವ, ಕರೆತರುವ ಕೆಲಸ ಮೊದಲು ಮಾಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ಬೆಳಗ್ಗೆ ನೀಡಿದ್ದ ಹೇಳಿಕೆಗೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ತಿರುಗೇಟು ನೀಡಿದ್ದಾರೆ.

ದಾವಣಗೆರೆಯಲ್ಲಿಂದು ಮಾತನಾಡಿದ ಅವರು, ನಮ್ಮ ಕೆಪಿಸಿಸಿ ಅಧ್ಯಕ್ಷರು ಸಿಟ್ಟು ಮಾಡಿಕೊಂಡರೆ ನಾನು ಏನು ಮಾಡುವುದಕ್ಕಾಗುತ್ತದೆ? ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ, ನಮ್ಮ ಪಕ್ಷ ಹೈಕಮಾಂಡ್ ಪಕ್ಷ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ತೀರ್ಮಾನ ಮಾಡುತ್ತಾರೆ. ಸಿದ್ದರಾಮಯ್ಯನವರು ಮುಂದಿನ ಮುಖ್ಯಮಂತ್ರಿಯಾಗಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಸಂವಿಧಾನದಲ್ಲಿ ನನ್ನ ಅಭಿಪ್ರಾಯ ಹೇಳಲು ನನಗೆ ಸ್ವಾತಂತ್ರ್ಯವಿದೆ, ನನ್ನ ಅಭಿಪ್ರಾಯ ಹೇಳುವುದು ತಪ್ಪೇನಿಲ್ಲ, ಪಕ್ಷದ ಅಧ್ಯಕ್ಷರಿಗೆ ನಾನು ಗೌರವ ಕೊಡುತ್ತೇನೆ ಎಂದು ತಿರುಗೇಟು ನೀಡಿದರು.

ಆಗಸ್ಟ್ 3ರಂದು ದಾವಣಗೆರೆಯಲ್ಲಿ ಸಿದ್ದರಾಮೋತ್ಸವವನ್ನು ಕಾಂಗ್ರೆಸ್ ನಾಯಕರು, ಸಿದ್ದರಾಮಯ್ಯ ಬೆಂಬಲಿಗರು ಆಯೋಜಿಸುತ್ತಿದ್ದು  ಅದಕ್ಕೆ ಸಂಬಂಧಪಟ್ಟಂತೆ ದಾವಣಗೆರೆಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.ಅದರಲ್ಲಿ ಮತ್ತೆ ಡಿ ಕೆ ಶಿವಕುಮಾರ್ ಹೇಳಿದ್ದ ಮಾತಿನ ಬಗ್ಗೆ ಪತ್ರಕರ್ತರು ಜಮೀರ್ ಅಹ್ಮದ್ ಅವರಲ್ಲಿ ಪ್ರಶ್ನೆ ಕೇಳಿದರು. 

ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಬಗ್ಗೆ ಮೊದಲು ಹೇಳಿಕೆ ಕೊಟ್ಟವರು ಡಿ ಕೆ ಶಿವಕುಮಾರ್ ಅವರಲ್ಲವೇ, ಒಕ್ಕಲಿಗ ಸಮಾವೇಶದಲ್ಲಿ ಬಹಿರಂಗವಾಗಿಯೇ ಹೇಳಿದರು. ಅಧ್ಯಕ್ಷರು ಹೇಳಿದ ನಂತರ ನಾವೆಲ್ಲ ಹೇಳಿದೆವಷ್ಟೆ. ಅದಕ್ಕೆ ಮೊದಲು ಯಾರೂ ಹೇಳಲಿಲ್ಲ. ಎಲ್ಲರಿಗೂ ಮುಖ್ಯಮಂತ್ರಿಯಾಗಬೇಕೆಂದು ಆಸೆಯಿರುತ್ತದೆ. ಶೇಕಡಾ 15ರಷ್ಟಿರುವ ಮುಸ್ಲಿಮರಿಗೂ ಅವಕಾಶ ಸಿಗಬೇಕು, ಎಲ್ಲಾ ಸಮುದಾಯದವರು ಸೇರಿ ಅವಕಾಶ ಮಾಡಿಕೊಡಬೇಕು ಎಂದರು.

ಪಕ್ಷ ಪೂಜೆ ಜೊತೆಗೆ ವ್ಯಕ್ತಿ ಪೂಜೆಯನ್ನೂ ಮಾಡಬೇಕಾಗುತ್ತದೆ. ಡಿ ಕೆ ಶಿವಕುಮಾರ್ ಅವರ ಲೆವೆಲ್ ದೊಡ್ಡದಿರಬಹುದು, ಅವರೇ ದೊಡ್ಡವರಾಗಲಿ, ಸಿದ್ದರಾಮಯ್ಯನವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ನೀಡಿದ್ದ ಕಾರ್ಯಕ್ರಮಗಳನ್ನು ಮೆಚ್ಚಿ ಜನರೇ ಅವರು ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಿದ್ದಾರೆ ಎಂದರು.

ಮೊದಲು ಕಾಂಗ್ರೆಸ್ ಆ ಮೇಲೆ ಸಿದ್ದರಾಮಯ್ಯ: ಮೊದಲು ಕಾಂಗ್ರೆಸ್, ಆ ಮೇಲೆ ಸಿದ್ದರಾಮಯ್ಯ, ಅದು ಹೈಕಮಾಂಡ್ ಗೂ ಗೊತ್ತಿದೆ, ಮುಂದಿನ ಬಾರಿ ಕಾಂಗ್ರೆಸ್  ಅಧಿಕಾರಕ್ಕೆ ಬಂದರೆ ಯಾರು ಸಿಎಂ ಎಂದು ಹೈಕಮಾಂಡ್ ತೀರ್ಮಾನ ಮಾಡುತ್ತಾರೆ ಎಂದರು.

ಸಿದ್ದರಾಮಯ್ಯನರು ಹಿರಿಯ ನಾಯಕರು, 50 ವರ್ಷಕ್ಕೂ ಹೆಚ್ಚು ಕಾಲ ರಾಜಕೀಯದಲ್ಲಿ ಕಳೆದಿದ್ದು ಇದುವರೆಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿಲ್ಲ, ನಾಲ್ಕೈದು ತಿಂಗಳಿನಿಂದ ಅವರ ಅಭಿಮಾನಿಗಳು 75 ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಅದ್ದೂರಿಯಾಗಿ ಆಚರಿಸಬೇಕೆಂದು ಒತ್ತಾಯಿಸುತ್ತಿದ್ದಾರೆ, ಹಾಗಾಗಿ ಆಚರಿಸುತ್ತಿದ್ದೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com