ವಿಜಯೇಂದ್ರಗೆ ಟಿಕೆಟ್ ನೀಡುವ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತೆ: ಸಿಎಂ ಬೊಮ್ಮಾಯಿ, ಆರ್. ಅಶೋಕ್

ಬಿವೈ ವಿಜಯೇಂದ್ರ ಬಗ್ಗೆ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಟಿಕೆಟ್ ನೀಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೀರ್ಮಾನ ಮಾಡ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು...
ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಬಿವೈ ವಿಜಯೇಂದ್ರ ಬಗ್ಗೆ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಟಿಕೆಟ್ ನೀಡುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತೀರ್ಮಾನ ಮಾಡ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ಹೇಳಿದ್ದಾರೆ.

ಬಿ.ವೈ.ವಿಜಯೇಂದ್ರರಿಗೆ ಶಿಕಾರಿಪುರ ಕ್ಷೇತ್ರ ಬಿಟ್ಟುಕೊಡುತ್ತೇನೆಂದು ನಿನ್ನೆ ಯಡಿಯೂರಪ್ಪನವರು ಸಲಹೆ ನೀಡಿದ್ದಾರಷ್ಟೇ. ಕ್ಷೇತ್ರದ ಜನ ಪದೇ ಪದೇ ಹೇಳ್ತಾ ಇದ್ರು. ಹಾಗಾಗಿ ಯಡಿಯೂರಪ್ಪನವರು ನೆನ್ನೆ ಆ ಹೇಳಿಕೆ ನೀಡಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ವಿಜಯೇಂದ್ರ ಬಗ್ಗೆ ಮಾತ್ರವಲ್ಲ, ಇಡೀ ರಾಜ್ಯದ ಬಗ್ಗೆ ಮೋದಿ, ಅಮಿತ್ ಶಾ ತೀರ್ಮಾನ ಮಾಡ್ತಾರೆ. ಯಡಿಯೂರಪ್ಪ ಅಂದ್ರೆ ಒಂದು ದೊಡ್ಡ ಶಕ್ತಿ.  ನಾಲ್ಕು ದಶಕಗಳಿಂದ ಯಡಿಯೂರಪ್ಪ ಇದ್ದಾರೆ. ಯಡಿಯೂರಪ್ಪ ಹೇಳಿಕೆಯಿಂದ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಲ್ಲ. ಅವರು ಸಿಎಂ ಸ್ಥಾನದಿಂದ ಇಳಿದಾಗಲೇ ಇಕ್ಕಟ್ಟು ಸೃಷ್ಟಿ ಮಾಡಲಿಲ್ಲ. ಈಗ ಸೃಷ್ಟಿ ಮಾಡ್ತಾರಾ ಎಂದು ಪ್ರಶ್ನಿಸಿದರು.

ಯಡಿಯೂರಪ್ಪನವರು ತಮಗೆ ಅನಿಸಿದ್ದನ್ನು ಮಾಧ್ಯಮದ ಮುಂದೆ ಹೇಳ್ತಾರೆ. ಆ ಕ್ಷಣ ಕ್ಷೇತ್ರದ ಜನರ ಒತ್ತಾಯಕ್ಕೆ ಮಣಿದು ಯಡಿಯೂರಪ್ಪ ಹಾಗೆ ಹೇಳಿದ್ದಾರೆ. ಅದು ಸಲಹೆ ಅಷ್ಟೇ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಇನ್ನೂ ಯಾರಿಗೆ ಟಿಕೆಟ್ ಕೊಡಬೇಕು, ಯಾರಿಗೆ ಟಿಕೆಟ್ ಕೊಡಬಾರದೆಂದು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಹೇಳಿದ್ದಾರೆ.

ಗಟ್ಟಿಯಾದ ಹೈಕಮಾಂಡ್ ನಮ್ಮದು. ಯಾರಿಗೆ ಟಿಕೆಟ್ ಕೊಡ್ಬೇಕು, ಕೊಡಬಾರದೆಂದು ನಮ್ಮ ಹೈಕಮಾಂಡ್ ತೀರ್ಮಾನಿಸುತ್ತೆ. ನಾವು ಸಿಎಂ ಬಿಎಸ್ ವೈ ಭೇಟಿ ಮಾಡಿದ್ವಿ. ಅವರು ನಗುನಗುತ್ತಲೇ ಮಾತನಾಡಿದ್ರು. ದೊಡ್ಡ ದೊಡ್ಡ ರ್ಯಾಲಿ ಮಾಡೋಣ ಎಂದಿದ್ದಾರೆ. ದೊಡ್ಡಬಳ್ಳಾಪುರ ರ್ಯಾಲಿ ಅನೌನ್ಸ್ ಮಾಡಿದ್ದೇನೆ. ಮುಂದೆ ಯಾವ್ಯಾವ ಜಿಲ್ಲೆಯಲ್ಲಿ ಮಾಡಬೇಕೆಂಬುದರ ಬಗ್ಗೆಯೂ ಮಾತನಾಡ್ತೇನೆ. ನನ್ನ ಜೀವವೇ ಬಿಜೆಪಿ ಅಂತ ಹೇಳ್ತಿದ್ದಾರೆ ಎಂದರು.

ಕಾಂಗ್ರೆಸ್ ಮುಗಿಸೋಕೆ ಜಮೀರ್ ಗೆ ಸುಪಾರಿ ಕೊಟ್ಟಿದ್ದೀರ ಎಂಬ ಪ್ರಶ್ನೆಗೆ, ಬಹಳಷ್ಟು ಜನರಿಗೆ ನಾವು ಸುಪಾರಿ ಕೊಟ್ಟಿದ್ದೇವೆ. ನೋಡ್ತಾ ಇರಿ ಯಾರ್ಯಾರು ಬರ್ತಾರೆಂದು. ಕಾಂಗ್ರೆಸ್ ನಲ್ಲಿ ಮನೆಯೊಂದು ಮೂರು ಬಾಗಿಲು ಆಗಿದೆ. ಕಾಂಗ್ರೆಸ್ ನವರು ಮೊದಲು ಅವರದನ್ನ ಸರಿಪಡಿಸಿಕೊಳ್ಳಲಿ ಎಂದು ಕಾಂಗ್ರೆಸ್ ನಾಯಕರಿಗೆ ಸಚಿವ ಆರ್. ಅಶೋಕ್ ತಿರುಗೇಟು ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com