ಸಿದ್ದರಾಮಯ್ಯನವರಿಗೆ ಬಾಯಿ ಬಿದ್ದು ಹೋಗಿದೆಯೇ? ಮಹಾದೇವಪ್ಪ ಅವರಿಗೆ ಮಾತು ಬರುವುದಿಲ್ಲವೇ?
ಸಿದ್ದರಾಮಯ್ಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿ ಈಗ ಖಾಲಿ ಕುಳಿತಿರುವ ಡಾ.ಎಚ್.ಸಿ. ಮಹಾದೇವಪ್ಪ ಅವರ ಪಂಥಾಹ್ವಾನ ಸ್ವೀಕರಿಸಿದ್ದೇನೆ.
Published: 15th June 2022 12:09 PM | Last Updated: 15th June 2022 01:05 PM | A+A A-

ಸಿದ್ದರಾಮಯ್ಯ ಮತ್ತು ಮಹಾದೇವಪ್ಪ
ಮೈಸೂರು: ಸಿದ್ದರಾಮಯ್ಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸಿ ಈಗ ಖಾಲಿ ಕುಳಿತಿರುವ ಡಾ. ಎಚ್.ಸಿ.ಮಹಾದೇವಪ್ಪ ಅವರ ಪಂಥಾಹ್ವಾನ ಸ್ವೀಕರಿಸಿದ್ದೇನೆ. ಚರ್ಚೆಗೆ ಸಿದ್ಧವಿದ್ದೇನೆ' ಎಂದು ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಮೈಸೂರು ಅಭಿವೃದ್ಧಿ ವಿಷಯದಲ್ಲಿ ಸಂಸದ ಪ್ರತಾಪ ಸಿಂಹ ಬಹಿರಂಗ ಚರ್ಚೆಗೆ ಬರಲಿ, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಅವರನ್ನು ಕಳುಹಿಸುತ್ತೇನೆ ಎಂಬ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸಂಸದ ಪ್ರತಾಪ ಸಿಂಹ, ಸಿದ್ದರಾಮಯ್ಯ ಹಾಗೂ ಮಹಾದೇವಪ್ಪ ಜಾಗ, ಸಮಯ ನಿಗದಿಪಡಿಸಿ 48 ಗಂಟೆಗಳ ಮುನ್ನ ನನಗೆ ತಿಳಿಸಲಿ. ನಾನು ಏಕಾಂಗಿಯಾಗಿ ಬರುತ್ತೇನೆ, ಮಾಧ್ಯಮದವರ ಎದುರು ಚರ್ಚಿಸೋಣ ಎಂದು ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ವಕ್ತಾರರೊಬ್ಬರನ್ನು ಕಳುಹಿಸುತ್ತೇವೆ ಎನ್ನುವ ಸಿದ್ದರಾಮಯ್ಯ ಅವರಿಗೆ ಬಾಯಿ ಬಿದ್ದು ಹೋಗಿದೆಯೇ? ಮಹಾದೇವಪ್ಪ ಅವರಿಗೆ ಮಾತು ಬರುವುದಿಲ್ಲವೇ? ಅರ್ಧ ಗಂಟೆ ಸಮಯ ಮಾಡಿಕೊಳ್ಳಲಿ. ನಾನೂ ಒಬ್ಬ ಜನಪ್ರತಿನಿಧಿ. ನನ್ನ ಜೊತೆ ಚರ್ಚೆಗೆ ಅರ್ಧ ಗಂಟೆ ಸಮಯ ಮಾಡಿಕೊಳ್ಳಲಿ. ಏಕೆ ಬರುವುದಿಲ್ಲ? ನಿಮಗೆ ಸ್ವಾಭಿಮಾನ, ಅಹಂ ಅಡ್ಡಿ ಬರುತ್ತಿದೆಯೇ? ಎಂದು ಸಿದ್ದರಾಮಯ್ಯ ಅವರನ್ನು ಕೇಳಿದರು.
ಇದನ್ನೂ ಓದಿ: ವಕೀಲರ ಬಗ್ಗೆ ಅಪಾರ ಗೌರವವಿದೆ, ಕಾಂಗ್ರೆಸ್ಸಿಗರ ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಪ್ರತಾಪ್ ಸಿಂಹ ಸ್ಪಷ್ಟನೆ
ವೀರರು, ಶೂರರು ಕುದುರೆಯನ್ನೋ ಅಥವಾ ಆನೆಯನ್ನೋ ಏರಿ ಬರುತ್ತಾರೆ. ಕತ್ತೆಯನ್ನೇರಿ ನೇರವಾಗಿ ಅವರೇ ಬರಲಿ. ಯುದ್ಧ ಮಾಡೋಣ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಗೆಲ್ಲಲಾಗದವರನ್ನು ಕಳುಹಿಸಿದರೆ ನಾನೂ ತಾಲ್ಲೂಕು ವಕ್ತಾರರನ್ನು ಕಳುಹಿಸುತ್ತೇನೆ. ಚರ್ಚೆಗೆ ಬರಲಿ, ಯಾರು ಗೆಲ್ಲುತ್ತಾರೆ ಎಂಬುದನ್ನು ನೋಡೋಣ ಎಂದು ಸವಾಲೆಸೆದರು.