ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಮುರುಗೇಶ್ ನಿರಾಣಿ- ಪ್ರಿಯಾಂಕ್ ಖರ್ಗೆ ನಡುವೆ ವಾಕ್ಸಮರ
ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿರುವ ನಡುವಲ್ಲೇ ಈ ವಿಚಾರ ಸಂಬಂಧ ರಾಜ್ಯದ ಮುರುಗೇಶ್ ನಿರಾಣಿ ಹಾಗೂ ಪ್ರಿಯಾಂಕ್ ಖರ್ಗೆ ನಡುವೆ ವಾಕ್ಸಮರ ಆರಂಭವಾಗಿದೆ.
Published: 26th June 2022 08:15 AM | Last Updated: 27th June 2022 12:51 PM | A+A A-

ಮುರುಗೇಶ್ ನಿರಾಣಿ-ಪ್ರಿಯಾಂಕ್ ಖರ್ಗೆ
ಬೆಂಗಳೂರು: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿರುವ ನಡುವಲ್ಲೇ ಈ ವಿಚಾರ ಸಂಬಂಧ ರಾಜ್ಯದ ಮುರುಗೇಶ್ ನಿರಾಣಿ ಹಾಗೂ ಪ್ರಿಯಾಂಕ್ ಖರ್ಗೆ ನಡುವೆ ವಾಕ್ಸಮರ ಆರಂಭವಾಗಿದೆ.
ಅವಕಾಶಗಳು ಬಾಗಿಲು ತಟ್ಟಿದಾಗ ಸನ್ಯಾಸಿಗಳಂತೆ ಕಣ್ಣು ಮುಚ್ಚಿ ಕೂರುವ ಪಕ್ಷ ಬಿಜೆಪಿಯಲ್ಲ ಎಂದು ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಅವರು ಹೇಳಿದ್ದು, ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಪ್ರಜಾಪ್ರಭುತ್ವದ ನೀತಿಗೆ ವಿರುದ್ಧವಾಗಿವೆ ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
'ಶಿವಸೇನೆ ಬಂಡಾಯ ಶಾಸಕರು ಸಮ್ಮಿಶ್ರ ಸರಕಾರ ರಚಿಸಲು ಬಿಜೆಪಿಯ ಬೆಂಬಲ ಕೋರಿದರೆ ನಾವು ಅವರನ್ನು ಬೆಂಬಲಿಸುತ್ತೇವೆ. ಬಿಜೆಪಿ ಮತ್ತು ಶಿವಸೇನೆ 25 ವರ್ಷಗಳಿಂದ ಮೈತ್ರಿಯಲ್ಲಿದ್ದು ಎರಡೂ ಪಕ್ಷಗಳ ಸಿದ್ಧಾಂತಗಳು ಒಂದೇ ಆಗಿರುವುದರಿಂದ ಇದು ಅನೈತಿಕವಲ್ಲ ಎಂದು ನಿರಾಣಿ ತಿಳಿಸಿದ್ದಾರೆ. ಅಲ್ಲದೆ, ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಮಹಾ ವಿಕಾಸ್ ಅಘಾಡಿಯನ್ನು "ಅನೈತಿಕ" ಎಂದು ಕರೆದಿದ್ದಾರೆ.
ಎನ್'ಸಿಪಿ ಹಾಗೂ ಕಾಂಗ್ರೆಸ್ ಶಾಸಕರಿಗೆ ಆದ್ಯತೆ ನೀಡಿದ ಕಾರಣಕ್ಕೆ ಠಾಕ್ರೆ ವಿರುದ್ಧ ಬೇಸರಗೊಂಡು ಶಿವಸೇನೆ ಶಾಸಕರು ಬಂಡಾಯ ಎದ್ದಿದ್ದಾರೆ. ಬಂಡಾಯ ಶಾಸಕರು ಬಿಜೆಪಿ ಜೊತೆ ಕೈ ಜೋಡಿಸಿದರೆ ಮಹಾರಾಷ್ಟ್ರದಲ್ಲಿ ಉತ್ತಮ ಆಡಳಿತ ನೀಡುತ್ತೇವೆಂದು ಹೇಳಿದ್ದಾರೆ.
ಇದನ್ನೂ ಓದಿ: 2019ರಲ್ಲಿ ರಾಜ್ಯದಲ್ಲಿದ್ದ ರಾಜಕೀಯ ಬಿಕ್ಕಟ್ಟು ಪರಿಸ್ಥಿತಿಯೇ ಇಂದು ಮಹಾರಾಷ್ಟ್ರದಲ್ಲೂ ಇದೆ: ಎಚ್. ವಿಶ್ವನಾಥ್
ಇದಕ್ಕೆ ವ್ಯತಿರಿಕ್ತವಾಗಿ ಚಿತ್ತಾಪುರ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಪರೇಷನ್ ಕಮಲದ ಬಗ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಚುನಾಯಿತ ಶಾಸಕರನ್ನು ಖರೀದಿಸುವ ಪದ್ಧತಿ ನೈತಿಕತೆ ಮತ್ತು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಕರ್ನಾಟಕ, ಮಧ್ಯಪ್ರದೇಶದಂತಹ ವಿವಿಧ ರಾಜ್ಯಗಳಲ್ಲಿ ಬಿಜೆಪಿಯೇತರ ಸರ್ಕಾರಗಳನ್ನು ಕಿತ್ತೊಗೆದು ಬಿಜೆಪಿ ಅಥವಾ ಬಿಜೆಪಿ ನೇತೃತ್ವದ ಸರ್ಕಾರಗಳನ್ನು ಅಧಿಕಾರಕ್ಕೆ ತರುವುದು ನರೇಂದ್ರ ಮೋದಿ ಪ್ರಧಾನಿಯಾದ ನಂತರ ಅಭ್ಯಾಸವಾಗಿ ಹೋಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಕೆಲವು ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರಲು ಯೋಜಿಸುತ್ತಿದ್ದಾರೆ ಎಂಬ ಊಹಾಪೋಹಗಳ ಕುರಿತು ಮಾತನಾಡಿ ಪ್ರಿಯಾಂಕ್ ಖರ್ಗೆ, “ಯಾರಾದರೂ ತೊರೆಯಲು ಬಯಸಿದರೆ, ಅದನ್ನು ಚುನಾವಣೆಯ ಮೊದಲು ಮಾಡಲಿ. ಚುನಾಯಿತರಾದ ನಂತರ ಪಕ್ಷ ಬಿಡುವುದು ಅನ್ಯಾಯವಾಗಲಿದೆ ಎಂದಿದ್ದಾರೆ.