ಮಂಡ್ಯಾನ ನಾನು ಬಿಡಲ್ಲ, ನನ್ನ ಮಂಡ್ಯ ಬಿಡಲ್ಲ; ಹಗಲುಗನಸು ಕಾಣುವವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ: ಸಂಸದೆ ಸುಮಲತಾ

ಬೆಂಗಳೂರು ಉತ್ತರ ಭಾಗದಿಂದ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂಬುದು ಮೂರ್ಖತ್ವದ, ಹಾಸ್ಯಾಸ್ಪದ ಮಾತುಎಂದು ಮಂಡ್ಯ ಸಂಸದೆ ಸುಮಲತಾ ಹೇಳಿದ್ದಾರೆ.
ಸುಮಲತಾ ಅಂಬರೀಷ್(ಸಂಗ್ರಹ ಚಿತ್ರ)
ಸುಮಲತಾ ಅಂಬರೀಷ್(ಸಂಗ್ರಹ ಚಿತ್ರ)

ಮಂಡ್ಯ: ಬೆಂಗಳೂರು ಉತ್ತರ ಭಾಗದಿಂದ ನಾನು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂಬುದು ಮೂರ್ಖತ್ವದ, ಹಾಸ್ಯಾಸ್ಪದ ಮಾತು. ನಾನು 2019ರಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಪರ್ಕಿಸಿ ಮಂಡ್ಯದಿಂದ ಟಿಕೆಟ್ ಕೊಡಿ ಎಂದು ಕೇಳಿದ್ದಾಗ ಅಲ್ಲಿ ಆಗುವುದಿಲ್ಲ, ಬೆಂಗಳೂರು ಉತ್ತರ ಅಥವಾ ಬೆಂಗಳೂರು ದಕ್ಷಿಣ ಭಾಗದಲ್ಲಿ ನಿಂತುಕೊಳ್ಳಿ ನಾವು ಪ್ರಚಾರ ನಡೆಸಿ ನಿಂತು ಗೆಲ್ಲಿಸುತ್ತೇವೆ ಎಂದರು. ಆಗ ಬೇಡ ಎಂದವಳು ಈಗ ಏಕೆ ನಾನು ಬೆಂಗಳೂರು ಉತ್ತರ ಕ್ಷೇತ್ರ ಕೇಳಲಿ, ಇಂತಹ ಸುದ್ದಿಗಳೆಲ್ಲ ಹಾಸ್ಯಾಸ್ಪದ ಎಂದು ಮಂಡ್ಯ ಸಂಸದೆ ಸುಮಲತಾ ಹೇಳಿದ್ದಾರೆ.

ಇಂದು ಮಂಡ್ಯದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ತಮ್ಮ ಬಗ್ಗೆ ಮತ್ತು ತಮ್ಮ ಮಗ ಅಭಿಷೇಕ್ ನ ರಾಜಕೀಯ ಜೀವನ ಬಗ್ಗೆ ಕೇಳಿಬರುತ್ತಿರುವ ಊಹಾಪೋಹಗಳ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ರಾಜಕೀಯ ನನಗೆ ಅನಿವಾರ್ಯವಲ್ಲ, ನಾನು ರಾಜಕೀಯಕ್ಕೆ ಬಂದಿದ್ದು ಮಂಡ್ಯ ಮತ್ತು ಇಲ್ಲಿನ ಜನರ ವಿಶ್ವಾಸ ಋಣವನ್ನು ತೀರಿಸಲು. ರಾಜಕಾರಣ ಬೇಕು ಎಂದು ದುರಾಸೆಯಿಂದ, ಅಧಿಕಾರಕ್ಕೋಸ್ಕರ ನಾನು ಮಂಡ್ಯ ಕ್ಷೇತ್ರದಿಂದ ನಿಂತಿದ್ದು ಅಲ್ಲ. ಆಗಲೇ ನನಗೆ ವಿಧಾನ ಪರಿಷತ್ ಸ್ಥಾನದ ಆಫರ್ ಕೊಟ್ಟಿದ್ದರು. ಬೆಂಗಳೂರು, ಮೈಸೂರು ಕ್ಷೇತ್ರಗಳಿಂದಲೂ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರು, ಆದರೆ ನಾನೇ ಮಂಡ್ಯ ಆಯ್ದುಕೊಂಡೆ ಎಂದರು.

ಮಂಡ್ಯಾನ ನಾನು ಬಿಡ್ಡಲ್ಲ, ಮಂಡ್ಯ ನನ್ನ ಬಿಡಲ್ಲ: ಹಲವು ಸವಾಲು, ಸಂಕಷ್ಟಗಳ ನಡುವೆ ನಾನು ಮಂಡ್ಯ ಕ್ಷೇತ್ರದಲ್ಲಿ ನಿಂತು ಜನರ ಪ್ರೀತಿ ವಿಶ್ವಾಸ ಗಳಿಸಿ ಚುನಾವಣೆಯಲ್ಲಿ ಗೆದ್ದು ಬಂದಿದ್ದೇನೆ, ಹಾಗಾಗಿ ಇನ್ನು ಮುಂದೆಯೂ ಮಂಡ್ಯವನ್ನು ನಾನು ಬಿಡುವುದಿಲ್ಲ, ಮಂಡ್ಯವೂ ನನ್ನ ಬಿಡುವುದಿಲ್ಲ, ನಾನು ಮಂಡ್ಯ ಬಿಟ್ಟುಹೋಗಲಿ ಎಂದು ಹಗಲುಕನಸು ಕಾಣುವವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿರಬಹುದು ಎಂದು ಕಡ್ಡಿಮುರಿದಂತೆ ನುಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com