ಸಿದ್ದರಾಮೋತ್ಸವದ ಬಳಿಕ ನಿಮ್ಮ ಪರಿಸ್ಥಿತಿ ಇದೇ; ಈ ಎರಡೂ ಬಣಗಳ ನಡುವೆ ದೆಹಲಿಯ ನಕಲಿ ಗಾಂಧಿಗಳ ಬಣ ಮೂಕ ಪ್ರೇಕ್ಷಕರಷ್ಟೇ!

ಕಾಂಗ್ರೆಸ್ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ಟ್ಟಿಟ್ಟರ್ ನಲ್ಲಿ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ವರಿಷ್ಠರೀಗ ನೀರಲ್ಲಿ ಮುಳುಗಿ ಬಂದ ಬೆಕ್ಕಿನಂತಾಗಿದ್ದಾರೆ ಎಂದು ಲೇವಡಿ ಮಾಡಿದೆ.
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ
Updated on

ಬೆಂಗಳೂರು: ಕಾಂಗ್ರೆಸ್ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ಟ್ಟಿಟ್ಟರ್ ನಲ್ಲಿ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ವರಿಷ್ಠರೀಗ ನೀರಲ್ಲಿ ಮುಳುಗಿ ಬಂದ ಬೆಕ್ಕಿನಂತಾಗಿದ್ದಾರೆ ಎಂದು ಲೇವಡಿ ಮಾಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರೇ, ನಿಮಗಿದೋ ಎಚ್ಚರಿಕೆ. ಸಿದ್ದರಾಮೋತ್ಸವದ ಬಳಿಕ ನಿಮ್ಮ ಪರಿಸ್ಥಿತಿ ಇದೇ ರೀತಿ ಆಗಲಿದೆ, ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಅಕ್ಕಪಕ್ಕ‌ ಕುಳ್ಳಿರಿಸಿಕೊಂಡು ಪೆಚ್ಚುನಗೆ ನಗುತ್ತಿದ್ದ ರಾಹುಲ್ ಗಾಂಧಿ ಸ್ಥಿತಿ ಅಯ್ಯೋ ಎನ್ನಿಸುವಂತಿದೆ. ಎಲ್ಲೂ ಇಲ್ಲ, ಇಲ್ಲಾದರೂ ಕಾಂಗ್ರೆಸ್ ಉಳಿಸಿ ಎಂಬ ದೈನ್ಯತೆ ನಕಲಿ ಗಾಂಧಿ ಕುಟುಂಬದ್ದು! ಎಂದು ಬಿಜೆಪಿ ಟೀಕಿಸಿದೆ.

ದಾವಣಗೆರೆಯಲ್ಲಿ ಸಿದ್ದರಾಮಯ್ಯ ಸಮಾವೇಶ ಆಯೋಜಿಸಿದ್ದಾರೆ ಎಂದರೆ ಬಂಡಾಯದ ಬಾವುಟ ಹಾರಿಸಿದ್ದಾರೆಂದೇ ಅರ್ಥ! ಪರಮೇಶ್ವರ್‌ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗಲೂ ಸಿದ್ದರಾಮಯ್ಯ ದಾವಣಗೆರೆಯಲ್ಲಿ ಸಮಾವೇಶ ನಡೆಸಿ ವರಿಷ್ಠರಿಗೆ ಭರತನಾಟ್ಯ ಮಾಡಿಸಿದ್ದರು. ಸಿದ್ದರಾಮಯ್ಯನವರೇ, ಇದೆಲ್ಲವೂ ಸ್ವಾರ್ಥಕ್ಕಾಗಿ ಅಲ್ವೇ ಎಂದು ಬಿಜೆಪಿ ಪ್ರಶ್ನಿಸಿದೆ.

ಕಾಂಗ್ರೆಸ್ ಪಕ್ಷದ ಮುಂಚೂಣಿ ನಾಯಕರು ಒಟ್ಟಾಗಿ ಚುನಾವಣೆ ಎದುರಿಸುವುದು ಎಂದರೆ ಕಪ್ಪೆಯನ್ನು ಹಿಡಿದು ತಕ್ಕಡಿಯಲ್ಲಿ ತೂಕ ಮಾಡಿದಂತೆ! ಇವರು ಒಟ್ಟಾಗುವುದಿಲ್ಲ, ಹೈಕಮಾಂಡ್ ಒಗ್ಗಟ್ಟಿನ‌‌ ಜಪ ಬಿಡುವುದಿಲ್ಲ, ಕಾಂಗ್ರೆಸ್‌ ವರಿಷ್ಠರೀಗ ನೀರಲ್ಲಿ ಮುಳುಗಿ ಬಂದ ಬೆಕ್ಕಿನಂತಾಗಿದ್ದಾರೆ. 2013 ರ ಸೋಲನ್ನು ಪರಮೇಶ್ವರ್ ಮರೆತಿಲ್ಲ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ಸಿದ್ದರಾಮಯ್ಯ ಅವರೇ ನೀವು ಯಾರನ್ನೂ ಓವರ್‌ ಟೇಕ್‌ ಮಾಡಿದರೂ ಕಾಂಗ್ರೆಸ್‌ ಒಳಜಗಳ ನಿಮ್ಮನ್ನು ಓವರ್‌ ಟೇಕ್‌ ಮಾಡದೆ ಬಿಡದು. 2018 ರಲ್ಲಿ ಅನುಭವಿಸಿದ್ದೀರಿ, 2023 ರಲ್ಲಿ ಡಿಕೆಶಿ, ಖರ್ಗೆ, ಪರಮೇಶ್ವರ್‌ ಸೇರಿಕೊಂಡು ನಿಮ್ಮನ್ನು ಓವರ್‌ ಟೇಕ್‌ ಮಾಡಲಿದ್ದಾರೆ.

ಕಾಂಗ್ರೆಸ್ಸಿಗರು ಕೂಸು ಹುಟ್ಟುವ ಮೊದಲೇ ಕುಲಾವಿ ಹೊಲಿಸುತ್ತಿದ್ದಾರೆ. ಮತವೇ ಇಲ್ಲದವರು ಬಹುಮತ ಗಳಿಸಲು ಹೇಗೆ ಸಾಧ್ಯ? 2023 ರಲ್ಲಿ ಕಾಂಗ್ರೆಸ್ ಸೋಲು ಖಚಿತ. ಟವಲ್ ಈಗಲೇ ಹಾಕಬೇಡಿ, ನಾಳೆಯ ದಿನ ಮುಖಭಂಗವಾದಾಗ ಒರೆಸಿಕೊಳ್ಳಲು ತುಂಡು ಬಟ್ಟೆಯೂ ಲಭಿಸದು! ಬಿದ್ದಿರುವ ಸಿದ್ದರಾಮಯ್ಯರನ್ನು ಮೇಲೆತ್ತಲು ಸಿದ್ದರಾಮೊತ್ಸವ ಮೂಲಕ ವೇದಿಕೆ ಸಜ್ಜುಗೊಳಿಸುತ್ತಿರುವ ಸಿದ್ದರಾಮಯ್ಯ ಬಣದ ನಾಯಕರು ಒಂದೆಡೆಯಾದರೆ, ಇದೇ ಸಿದ್ದರಾಮಯ್ಯರನ್ನು ಕೆಡವಲು ಖೆಡ್ಡಾ ತೋಡುತ್ತಿರುವ ಡಿಕೆ ಶಿವಕುಮಾರ್ ಬಣದ ನಾಯಕರು ಮತ್ತೊಂದೆಡೆ. ಈ 2 ಬಣಗಳ ನಡುವೆ ದೆಹಲಿಯ ನಕಲಿ ಗಾಂಧಿಗಳ ಬಣ ಮೂಕ ಪ್ರೇಕ್ಷಕರಷ್ಟೇ! ಎಂದು ಕೆಣಕಿದೆ.

ನಕಲಿ ಗಾಂಧಿ ಕುಟುಂಬಸ್ಥರು ಪ್ರತಿಬಾರಿಯೂ ರಾಜ್ಯ ಕಾಂಗ್ರೆಸ್‌ ನಾಯಕರಿಗೆ ಒಂದಾಗಿರಬೇಕೆಂದು ಸೂಚನೆ ನೀಡುತ್ತಾರೆ. ದೆಹಲಿಯಲ್ಲಿ ಹೂಂಗುಟ್ಟಿ ಬರುವ ಕಾಂಗ್ರೆಸ್ಸಿಗರು ಬೆಂಗಳೂರಿಗೆ ಬಂದ ಕೂಡಲೇ ಒಬ್ಬರ ವಿರುದ್ಧ ಇನ್ನೊಬ್ಬರು ಕತ್ತಿ ಮಸೆಯುತ್ತಾರೆ. ತಾಳಮೇಳ ಇಲ್ಲದ ಕೈ ನಾಯಕರಿಂದಾಗಿಯೇ ರಾಜ್ಯ ಕಾಂಗ್ರೆಸ್ ಮುಕ್ತವಾಗಲಿದೆ.

ಮುಖ್ಯಮಂತ್ರಿ ಪದವಿಯ ಆಸೆಗಾಗಿ ಸಿದ್ದರಾಮಯ್ಯ ತಮ್ಮ ಹಳೆಯ ಅಹಿಂದ ಕಾರ್ಡ್ ಬಳಸುತ್ತಿದ್ದಾರೆ. ಅಹಿಂದ ಕಾರ್ಡ್‌ ಎಕ್ಸ್‌ಪೈರ್‌ ಆಗಿದೆ. ಕಳೆದ ಬಾರಿ ಇದೇ ಕಾರ್ಡ್ ತೋರಿಸಿ ಮೋಸ ಮಾಡಿದ್ದನ್ನು ರಾಜ್ಯದ ಜನತೆ ಇನ್ನೂ ಮರೆತಿಲ್ಲ. ಇದು ಸಿದ್ದರಾಮೋತ್ಸವವಲ್ಲ, ಬಿದ್ದಿರುವ ಸಿದ್ದರಾಮಯ್ಯರನ್ನು ಮೇಲಕ್ಕೆತ್ತುವ ಉತ್ಸವ ಅಷ್ಟೇ! ಎಂದು ಬಿಜೆಪಿ ಟಾಂಗ್ ನೀಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com