ಸಿದ್ದರಾಮಯ್ಯ ಡಿಕೆಶಿ ನಡುವೆ ಹತ್ತಿಕೊಂಡ ಕಿಡಿಯನ್ನು ನಕಲಿ ಗಾಂಧಿ ಕುಟುಂಬಕ್ಕೂ ಬಗೆಹರಿಸಲು ಸಾಧ್ಯವಾಗುತ್ತಿಲ್ಲ!

ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಹತ್ತಿಕೊಂಡ ಕಿಡಿಯನ್ನು ನಕಲಿ ಗಾಂಧಿ ಕುಟುಂಬಕ್ಕೂ ಬಗೆಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ಲೇವಡಿ ಮಾಡಿದೆ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್
Updated on

ಬೆಂಗಳೂರು: ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಹತ್ತಿಕೊಂಡ ಕಿಡಿಯನ್ನು ನಕಲಿ ಗಾಂಧಿ ಕುಟುಂಬಕ್ಕೂ ಬಗೆಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಬಿಜೆಪಿ ಲೇವಡಿ ಮಾಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಕೈ ನಾಯಕರು ಪದೇ ಪದೇ ದೆಹಲಿಯ 10 ಜನ್‌ಪಥ್‌ ದರ್ಶನ ಮಾಡುತ್ತಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಸ್ಥಾನದ ಕಗ್ಗಂಟನ್ನು ಬಗೆ ಹರಿಸಲಾಗದವರು ರಾಜ್ಯದ ಸಿಎಂ ಕುರ್ಚಿಯ ಕಾದಾಟವನ್ನು ಬಗೆಹರಿಸುವರೇ? ಎಂದು ಪ್ರಶ್ನಿಸಿದೆ.

ಕಾಂಗ್ರೆಸ್ ಪಕ್ಷದಲ್ಲಿ ಡಿಕೆಶಿ ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಡಿಕೆಶಿ ವರ್ಚಸ್ಸಿನ ಪ್ರಭಾವಲಯವನ್ನು ತಗ್ಗಿಸಲು ಸಿದ್ದರಾಮಯ್ಯ ಹೆಣಗಾಡುತ್ತಿದ್ದಾರೆ. ಇದಕ್ಕಾಗಿ ಶಕ್ತಿ ಪ್ರದರ್ಶನ ಸಮಾರಂಭದ ಸಿದ್ಧತೆ ಆರಂಭವಾಗಿದೆ. ಅಭಿಮಾನಿ ಬಳಗದ ಈ ಸಮಾರಂಭ ಯಾರಿಗೆ ಠಕ್ಕರ್‌ ನೀಡಲು ಆಯೋಜಿಸಲಾಗಿದೆ ಎಂದು ಛೇಡಿಸಿದೆ.

ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ ಪಕ್ಷದಲ್ಲಿ ಏಕಾಂಗಿತನ ಕಾಡುತ್ತಿದೆ. ಕಾಂಗ್ರೆಸ್ಸಿನಲ್ಲಿ ಈಗ ಎಲ್ಲರೂ ಸಿಎಂ ಅಭ್ಯರ್ಥಿಗಳೇ. ಡಿಕೆಶಿ ಅವರಿಂದ ಸಿಎಂ ಸ್ಥಾನಕ್ಕೆ ಪ್ರಬಲ ಲಾಬಿ ಎದುರಾಗುತ್ತಿದೆ. ಸಿದ್ದು ಮತ್ತು ಡಿಕೆಶಿವಕುಮಾರ್ ಕಲಹ ಈಗ ಬೇರೆಯೇ ಹಂತ ತಲುಪುತ್ತಿದೆ, ಸಿದ್ದರಾಮಯ್ಯ ವಿರೋಧಿ ಪಾಳಯ ಜಾಗೃತಗೊಂಡಿದೆ.

ಗತ್ತಿನ ಕಣ್ಣಿಗೆ ಮಣ್ಣೆರೆಚಲು ಡಿಕೆಶಿ & ಸಿದ್ದರಾಮಯ್ಯ ಒಂದೇ ಕಾರಿನಲ್ಲಿ ಬರುವುದೇನು, ಜೊತೆಯಾಗಿ ಎತ್ತಿನ ಗಾಡಿ ಓಡಿಸುವುದೇನು, ಚಿಂತನ ಶಿಬಿರದಲ್ಲಿ ಫೋಟೋಗೆ ಫೋಸ್‌ ಕೊಟ್ಟಿದ್ದೇನು..! ಮುಖವಾಡ ಕಳಚುತ್ತಿದೆ, ಸೃಷ್ಟಿಯಾದ ಕಂದಕ ಲೋಕಕ್ಕೆ ಸಾರಿ ಸಾರಿ ಹೇಳುತ್ತಿದೆ, ಇದು ಸಿದ್ದು ಮತ್ತು ಡಿಕೆಶಿ ಕದನವೆಂದು, ಕಾಂಗ್ರೆಸ್ ಈಗ ಬೂದಿ ಮುಚ್ಚಿದ ಕೆಂಡ ಎಂದು ಬಿಜೆಪಿ ತಿವಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com