ಶುರುವಾಯ್ತು ಜೆಡಿಎಸ್ ಹೊಸ ಅಸ್ತ್ರ: ಶಾಸಕರ ಘರ್ ವಾಪ್ಸಿಗೆ 'ಸಾರಾ' ಸಂಧಾನ; 'ಗುಬ್ಬಿ' ಶ್ರೀನಿವಾಸ್ ಮೇಲೆ ದಳಪತಿಗಳ ಬ್ರಹ್ಮಾಸ್ತ್ರ!

ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಬೇಕು ಎಂಬ ಹವಣಿಕೆಯಲ್ಲಿರುವ  ಜೆಡಿಎಸ್ ಪಕ್ಷ ಬಿಟ್ಟು ಹೋಗುತ್ತಿರುವ ಶಾಸಕರನ್ನು ಮರಳಿ ಕರೆತರುವ ಪ್ರಯತ್ನ ಮಾಡುತ್ತಿದೆ
ಶ್ರೀನಿವಾಸ್ ಜೊತೆ ಸಾ ರಾ ಮಹೇಶ್
ಶ್ರೀನಿವಾಸ್ ಜೊತೆ ಸಾ ರಾ ಮಹೇಶ್

ತುಮಕೂರು: ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸಬೇಕು ಎಂಬ ಹವಣಿಕೆಯಲ್ಲಿರುವ  ಜೆಡಿಎಸ್ ಪಕ್ಷ ಬಿಟ್ಟು ಹೋಗುತ್ತಿರುವ ಶಾಸಕರನ್ನು ಮರಳಿ ಕರೆತರುವ ಪ್ರಯತ್ನ ಮಾಡುತ್ತಿದೆ, ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಚಾಮುಂಡೇಶ್ವರಿ ಭಿನ್ನಮತೀಯ ಶಾಸಕ ಜಿ.ಟಿ ದೇವೇಗೌಡರ ಮನೆಗೆ ಭೇಟಿ ನೀಡ  ಪಕ್ಷ ತೊರೆಯದಂತೆ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದರ ಬೆನ್ನಲ್ಲೆ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಮನೆಗೆ ಜೆಡಿಎಸ್ ನಾಯಕ ಸಾ ರಾ ಮಹೇಶ್ ಭೇಟಿ ನೀಡಿದ್ದಾರೆ. ರಾಜ್ಯ ಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ್ದ ಹಿನ್ನೆಲೆಯಲ್ಲಿ ಎಸ್ ಆರ್ ಶ್ರೀನಿವಾಸ್ ಅವರನ್ನು ಅಮಾನತು ಮಾಡಲಾಗಿತ್ತು. ಸಾ ರಾ ಜೊತೆಗೆ ಮಳವಳ್ಳಿ ಶಾಸಕ ಡಾ. ಕೆ ಅನ್ನದಾನಿ ಕೂಡ ಹಾಜರಿದ್ದರು.

ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜೊತೆ ಶ್ರೀನಿವಾಸ್ ಉತ್ತಮ ಒಡನಾಟ ಬೆಳೆಸಿಕೊಂಡಿದ್ದಾರೆ. ಇದರ ಜೊತೆಗೆ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿಯೂ ಪಾಲ್ಗೊಂಡಿದ್ದರು. ಶ್ರೀನಿವಾಸ್ ಅವರು ಜೆಡಿಎಸ್ ತೊರೆದರೇ 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಮತ್ತು ತನ್ನ ಮೇಲೆ ಪರಿಣಾಮ ಬೀರಲಿದೆ ಎಂದು ಮಹೇಶ್ ಸುದ್ದಿಗಾರರಿಗೆ ತಿಳಿಸಿದರು.

ಒಂದು ವೇಳೆ ಎಚ್‌ಡಿ ದೇವೇಗೌಡರು ಶ್ರೀನಿವಾಸ್ ಅವರನ್ನು ಭೇಟಿ ಮಾಡಿದರೆ,  ಜೆಡಿಎಸ್ ಅನ್ನು ತೊರೆಯುವುದಿಲ್ಲ ಎಂದು ಕೆಲವು ಜೆಡಿಎಸ್ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಪಕ್ಷದ ಸಾಂಸ್ಥಿಕ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದ ಶ್ರೀನಿವಾಸ್ ಬೆಂಬಲಿಗರು ವಾಪಸ್  ಹೋಗಲು ಸಿದ್ಧರಿಲ್ಲ ಎಂದು ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿವೆ.

ಹಳೇ ಮೈಸೂರು ಭಾಗದಲ್ಲಿ ಅತೃಪ್ತ ನಾಯಕರನ್ನು ಕಣಕ್ಕಿಳಿಸಲು ಜೆಡಿಎಸ್ ವರಿಷ್ಠರು ಹವಣಿಸುತ್ತಿದ್ದಾರೆ. ನಾಯಕರು ಪಕ್ಷ ತೊರೆಯುವುದರಿಂದ ಆಯಾ ಸ್ಥಾನಗಳಲ್ಲಷ್ಟೇ ಅಲ್ಲ, ಪಕ್ಕದ ಕ್ಷೇತ್ರಗಳಲ್ಲೂ ಪಕ್ಷದ ಭವಿಷ್ಯಕ್ಕೆ ಧಕ್ಕೆಯಾಗುತ್ತದೆ ಎಂಬದು ಜೆಡಿಎಸ್ ನಾಯಕರ ಗಮನಕ್ಕೆ ಬಂದಿದೆ.

ಈ ನಡುವೆ ಕುಮಾರಸ್ವಾಮಿ ಚಿಕ್ಕನಾಯಕನಹಳ್ಳಿಯ ಮಾಜಿ ಶಾಸಕ ಸಿ.ಬಿ.ಸುರೇಶ್ ಬಾಬು ಅವರನ್ನು ಭೇಟಿ ಮಾಡಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಕ್ಷೇತ್ರದಲ್ಲಿ ಯಾವುದೇ ಪ್ರಬಲ ಅಭ್ಯರ್ಥಿ ಇಲ್ಲದ ಕಾಂಗ್ರೆಸ್ ಬಾಬು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಬಯಸಿತ್ತು. ಆದರೆ ಸುರೇಶ್ ಬಾಬು ಕುಮಾರಸ್ವಾಮಿ ಅವರ ಕುಟುಂಬದ ಸದಸ್ಯರಂತಿದ್ದಾರೆ, ಹೀಗಾಗಿ ಬಾಬು ಜೆಡಿಎಸ್ ತೊರೆಯಲು ಸಿದ್ಧರಿಲ್ಲ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com