ಏಟಿಗೆ ಎದಿರೇಟು, ಚನ್ನಪಟ್ಟಣದಲ್ಲಿ ನಿಲ್ಲುತ್ತಿಲ್ಲ ಬಿಜೆಪಿ-ಜೆಡಿಎಸ್ ಫೈಟು; ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ- ನಿಖಿಲ್ ಕುಮಾರಸ್ವಾಮಿ

ಆನೆ ಇರಲಿ ಮೊದಲು ಮರಿಯಾನೆಯನ್ನು ಅವರು ಜೀರ್ಣಿಸಿಕೊಳ್ಳಲಿ ಎಂದು ವಿಧಾನಪರಿಷತ್‌ ಸದಸ್ಯ ಸಿ. ಪಿ ಯೋಗೇಶ್ವರ್‌ಗೆ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ

ರಾಮನಗರ: ವಿಧಾನಸಭೆ ಚುನಾವಣೆ ಸಮಿಪಿಸುತ್ತಿರುವಂತೆಯೇ ರಾಮನಗರ ಜಿಲ್ಲೆಯಲ್ಲಿ ಬಿಜೆಪಿ-ಜೆಡಿಎಸ್ ನಾಯಕರುಗಳು ಪರಸ್ಪರ ವಾಗ್ದಳಿ ನಡೆಸುತ್ತಿದ್ದಾರೆ. ಆನೆ ಇರಲಿ ಮೊದಲು ಮರಿಯಾನೆಯನ್ನು ಅವರು ಜೀರ್ಣಿಸಿಕೊಳ್ಳಲಿ ಎಂದು ವಿಧಾನಪರಿಷತ್‌ ಸದಸ್ಯ ಸಿ. ಪಿ ಯೋಗೇಶ್ವರ್‌ಗೆ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ರಾಮನಗರ ಜಿಲ್ಲೆ ಹಾರೋಹಳ್ಳಿಯ ದೊಡ್ಡಮುದವಾಡಿ ಗ್ರಾಮ ಪಂಚಾಯಿತಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮ ಸಂದರ್ಶನ ನಡೆಸಿದ ಅವರು, ಸಿ.ಪಿ.ಯೋಗೇಶ್ವರ್ ಹೇಳಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

ನಮ್ಮ ನಾಯಕರಾದ ಕುಮಾರಸ್ವಾಮಿ ಚನ್ನಪಟ್ಟಣದ ಶಾಸಕರಾಗಿದ್ದು, ಪಂಚರತ್ನ ಯೋಜನೆಯ ನಿಮಿತ್ತ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ನಾನು ನಮ್ಮ ಪಕ್ಷದ ಕಾರ್ಯಕರ್ತನಾಗಿ ತಾಲೂಕಿನ ಜನತೆಯ ಕಷ್ಟ ಕೇಳುವ ಕೆಲಸ ಮಾಡುತ್ತಿದ್ದೇನೆ. ನಾನು ಯಾವುದೇ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲು ಬಂದಿಲ್ಲ. ನನ್ನ ಮಿತಿಯ ಬಗ್ಗೆ ನನಗೆ ಅರಿವಿದ್ದು, ಯೋಗೇಶ್ವರ್‌ ಅವರ ಬಳಿ ನಾನು ಏನನ್ನೂ ಕಲಿಯಬೇಕಿಲ್ಲಎಂದು ತಿವಿದರು.

ಚುನಾವಣೆ ವೇಳೆ ಅವರ ಕುಟುಂಬದವರು ಏಕೆ ಬರುತ್ತಾರೆ. ಚುನಾವಣೆ ಸಂದರ್ಭದಲ್ಲಿ ಬಂದು ಪ್ರಚಾರ ಮಾಡುತ್ತಾರೆ ಎಂದು ನಾವೆಂದೂ ಅವರನ್ನು ಪ್ರಶ್ನಿಸಲ್ಲ. ಅವರ ಕುಟುಂಬದವರು ಧಾರಾಳವಾಗಿ ಬಂದು ಪ್ರಚಾರ ಮಾಡಲಿ. ಇದು ಪ್ರಜಾಪ್ರಭುತ್ವ, ಯಾರು ಎಲ್ಲಿ ಬೇಕಾದರೂ ಹೋಗಬಹುದು. ಆ ವಿಚಾರದಲ್ಲಿ ನಾವು ಸಣ್ಣತನದ ರಾಜಕಾರಣ ಮಾಡುವುದಿಲ್ಲ ಎಂದರು. ಮುಂದಿನ ಚುನಾವಣೆಯಲ್ಲಿ ಚನ್ನಪಟ್ಟಣದ ಮಾಜಿ ಶಾಸಕರಿಗೆ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಲಿದ್ದು, ಮಾಜಿ ಶಾಸಕರು ಮಾಜಿಗಳಾಗಿಯೇ ಉಳಿಯಲಿದ್ದಾರೆ ಎಂದು ಟಾಂಗ್‌ ನೀಡಿದರು.

ರಾಮನಗರವನ್ನು ಜಿಲ್ಲೆಯನ್ನಾಗಿ ಮಾಡಿದ್ದು ಮಾಜಿ ಸಿಎಂ ಕುಮಾರಸ್ವಾಮಿಯವರು. ರಾಮನಗರ ಜಿಲ್ಲೆಗೂ ನಮ್ಮ ಕುಟುಂಬಕ್ಕೂ ಅವಿನಭಾವ ಸಂಬಂಧವಿದೆ. ಆದ್ದರಿಂದ ಇಲ್ಲಿನ ಜನರ ಕಷ್ಟಸುಖದಲ್ಲಿ ಭಾಗಿಯಾಗಲು, ಅವರ ಸಂಕಷ್ಟಕೇಳಲು ನಾನು ಬಂದಿದ್ದೇನೆ. ಚನ್ನಪಟ್ಟಣಕ್ಕೆ ಹೋಗಲು ಯಾವ ದೊಣೆ ನಾಯಕನ ಅಪ್ಪಣೆ ಕೇಳಬೇಕಿಲ್ಲ ಎಂದು ನಿಖಿಲ್‌ ಕುಮಾರಸ್ವಾಮಿ ಕಿಡಿಕಾರಿದರು.

ಚನ್ನಪಟ್ಟಣದ ಶಾಸಕ ಎಚ್‌ಡಿ ಕುಮಾರಸ್ವಾಮಿ, ಅವರ ಮಗ ನಿಖಿಲ್‌ ಕುಮಾರಸ್ವಾಮಿ ಅಲ್ಲ. ನಾನು ಹಿಂದೆ ನಮ್ಮ ಪಕ್ಷದ ಹಿರಿಯರ ಕುರಿತು ಅಂಬಾರಿಯನ್ನು ಪಟ್ಟದ ಆನೆ ಹೊರುತ್ತೆ ಹೊರತು ಮರಿಯಾನೆಯಲ್ಲ ಎಂಬ ಮಾತನ್ನು ಹೇಳಿದ್ದೆ ಎಂದು ವಿಧಾನ ಪರಿಷತ್‌ ಸದಸ್ಯ ಸಿಪಿ ಯೋಗೀಶ್ವರ್‌ ವ್ಯಂಗ್ಯವಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com