ಎರಡು ಸಲ ನನ್ನಿಂದ ಸಿದ್ದರಾಮಯ್ಯಗೆ ರಾಜಕೀಯ ಪುನರ್ಜನ್ಮ; ಕೋಲಾರದಲ್ಲಿ ಅವರಿಗೆ ಶ್ರೀನಿವಾಸ್‌ಗೌಡರೇ ಸಮಸ್ಯೆ; ಎಚ್ ಡಿಕೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರ ಹುಡುಕಾಟ ನಡೆಸುತ್ತಿರುವ ಬಗ್ಗೆ, ಅವರು ಕೋಲಾರಕ್ಕೆ ಹೋಗಿರುವ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರ ಹುಡುಕಾಟ ನಡೆಸುತ್ತಿರುವ ಬಗ್ಗೆ, ಅವರು ಕೋಲಾರಕ್ಕೆ ಹೋಗಿರುವ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನಿರೀಕ್ಷಿಸಿದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕೋಲಾರ ಜಿಲ್ಲಾ ಪ್ರವಾಸ ಮತ್ತು ಅವರು ಪ್ರಮಾಣಪತ್ರ ಸಲ್ಲಿಸಲು ಮತ್ತೆ ಬರುವುದಾಗಿ ಹೇಳಿರುವುದು ಜೆಡಿಎಸ್ ವಲಯದಲ್ಲೂ ಚರ್ಚೆಯ ವಿಷಯವಾಗಿದೆ. ಕಾರಣ, ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಆ ಭಾಗದಿಂದ ಹೆಚ್ಚಿನ ಸೀಟನ್ನು ನಿರೀಕ್ಷಿಸುತ್ತಿದೆ.

ಸಿದ್ದರಾಮಯ್ಯನವರು ಅಲ್ಲಿಂದ ಸ್ಪರ್ಧಿಸುವ ವಿಚಾರದಲ್ಲಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಕೋಲಾರದಿಂದ ಸ್ಪರ್ಧಿಸಿದರೆ ನಮಗೇನೂ ಭಯವಿಲ್ಲ ಎಂದು ಹೇಳಿದ್ದಾರೆ. ಬಹುತೇಕ ಎಲ್ಲ ಕ್ಷೇತ್ರದಲ್ಲಿ ಜಾತಿ ಲೆಕ್ಕಾಚಾರದಲ್ಲಿ ಚುನಾವಣೆ ನಡೆಯುತ್ತಿದೆ. ಸಿದ್ದರಾಮಯ್ಯ ಕೂಡ ಅದೇ ಲೆಕ್ಕದಲ್ಲಿ ಕೋಲಾರಕ್ಕೆ ಹೋಗಿರಬಹುದು. ಚಾಮುಂಡೇಶ್ವರಿ, ಬಾದಾಮಿಯಲ್ಲೂ ಜಾತಿ ಲೆಕ್ಕಾಚಾರದಲ್ಲಿ ಚುನಾವಣೆ ನಡೆದಿದೆ. ಕಳೆದ ಚುನಾವಣೆಯಲ್ಲಿ ಕೊನೆ ಸಮಯದಲ್ಲಿ ನಾನು ಮೂರು ದಿನ ಬಾದಾಮಿಗೆ ಹೋಗದೆ ಇದ್ದಿದ್ದರೆ ಹತ್ತು ಸಾವಿರಕ್ಕೂ ಹೆಚ್ಚು ಮತಗಳಿಂದ ಸಿದ್ದರಾಮಯ್ಯ ಅವರು ಸೋಲುತ್ತಿದ್ದರು.

ಗುಳೇದಗುಡ್ಡ ಸೇರಿ ಹಲವೆಡೆ ನಾನು ಅಂತಿಮ ಕ್ಷಣದಲ್ಲಿ ಪ್ರಚಾರ ಮಾಡಿದ್ದೆ, ಜನರಿಂದ ಹೆಚ್ಚು ಪ್ರತಿಕ್ರಿಯೆ ವ್ಯಕ್ತವಾಯಿತು. ನಮ್ಮ ಅಭ್ಯರ್ಥಿ 28 ಸಾವಿರ ಮತ ಪಡೆದರು. ಆಗ ಸಿದ್ದರಾಮಯ್ಯ ಚಿಕ್ಕ ಅಂತರದಲ್ಲಿ ಗೆದ್ದರು. ಇಲ್ಲವಾಗಿದ್ದರೆ ಹತ್ತು ಸಾವಿರ ಮತಗಳ ಅಂತರದಿಂದ ಸೋಲುತ್ತಿದ್ದರು. ಹಾಗೆ ನೋಡಿದರೆ ಅವರ ಗೆಲುವಿಗೆ ನಾನೇ ಕಾರಣ. ಇದರಲ್ಲಿ ಯಾವುದೇ ಸಂಶಯ ಇಲ್ಲ. ಸಿದ್ದರಾಮಯ್ಯ ಅವರಿಗೆ ಎರಡು ಬಾರಿ ನನ್ನಿಂದ ರಾಜಕೀಯ ಮರುಜನ್ಮ ಸಿಕ್ಕಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಕೋಲಾರದಲ್ಲಿ ಸಿದ್ದರಾಮಯ್ಯ ಅವರಿಗೆ ಸಮಸ್ಯೆ ಎಂದರೆ ನಮ್ಮ ಪಕ್ಷಕ್ಕೆ ಕೈಕೊಟ್ಟು ಹೋದ ಹಾಲಿ ಶಾಸಕ ಶ್ರೀನಿವಾಸ್‌ಗೌಡರು. ಅವರು ನಮಗೆ ಮಾಡಿದ ದ್ರೋಹವೇ ಈ ಬಾರಿ ಕೋಲಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಳುವಾಗಲಿದೆ. ಸಿದ್ದರಾಮಯ್ಯ ಅವರಿಗೆ ನಕಾರಾತ್ಮಕ ಅಂಶಗಳು ಇರುವುದೇ ಅಲ್ಲಿ. ಹೀಗಾಗಿ ನಮ್ಮ ಪಕ್ಷಕ್ಕೆ ಆತಂಕ ಏನೂ ಇಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com