ಬಾದಾಮಿಯಲ್ಲಿ ಒಳ್ಳೆಯ ಕೆಲಸ ಮಾಡಿಲ್ಲವೇ, ಮತ್ತೆ ಸ್ಪರ್ಧಿಸಿದರೆ ಗೆಲ್ಲುವ ವಿಶ್ವಾಸವಿಲ್ಲವೇ: ಕೋಲಾರ ಸುರಕ್ಷಿತವಲ್ಲ ಎನಿಸಿದರೇ ಚಿಕ್ಕನಾಯಕನಹಳ್ಳಿಗೆ ಬರಲಿ!

ಸಿದ್ದರಾಮಯ್ಯರ ಕ್ಷೇತ್ರ ಹುಡುಕಾಟದ ಬಗ್ಗೆ ಟೀಕೆ ಮಾಡಲ್ಲ, ಜನ ನಿರ್ಧರಿಸುತ್ತಾರೆ. ಅವರಿಗೆ ಎಲ್ಲಿ ಗೆಲ್ಲುತ್ತೀನಿ ಅನ್ನೋ ವಿಶ್ವಾಸ ಇರುವ ಕ್ಷೇತ್ರದಲ್ಲಿ ಸ್ಪರ್ಧಿಸುವುದು, ಬಿಡುವುದು ಅವರ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದರು.
ಸಿದ್ದರಾಮಯ್ಯ
ಸಿದ್ದರಾಮಯ್ಯ

ತುಮಕೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕ್ಷೇತ್ರ ಬಾದಾಮಿ ಬಿಟ್ಟು ಬೇರೆ ಕ್ಷೇತ್ರಕ್ಕೆ ಯಾಕೆ ಹೋಗುತ್ತಿದ್ದಾರೆ ಎನ್ನುವುದು ಅರ್ಥವಾಗುತ್ತಿಲ್ಲ. ಅಲ್ಲಿ ಒಳ್ಳೆ ಕೆಲಸ ಮಾಡಿದ್ದೇನೆ, ಮತ್ತೆ ಗೆಲ್ತೀನಿ ಎನ್ನುವ ವಿಶ್ವಾಸ ಇಲ್ಲದೆ ಬೇರೆ ಕ್ಷೇತ್ರ ಹುಡುಕುತ್ತಿರಬೇಕು ಎಂದು ಬಿಜೆಪಿ ಮುಖಂಡ ಯಡಿಯೂರಪ್ಪ ಹೇಳಿದ್ದಾರೆ.

ಕುಣಿಗಲ್‌ ತಾಲೂಕಿನ ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿ ಪುಣ್ಯ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಮತಿ ಮೈತ್ರಾದೇವಿ ಯಡಿಯೂರಪ್ಪ ಸ್ಮಾರಕ ಭವನವನ್ನು ಭಾನುವಾರ ಲೋಕಾರ್ಪಣೆ ಮಾಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ದಿಸುತ್ತಾರೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು,  ಸಿದ್ದರಾಮಯ್ಯರ ಕ್ಷೇತ್ರ ಹುಡುಕಾಟದ ಬಗ್ಗೆ ಟೀಕೆ ಮಾಡಲ್ಲ, ಜನ ನಿರ್ಧರಿಸುತ್ತಾರೆ. ಅವರಿಗೆ ಎಲ್ಲಿ ಗೆಲ್ಲುತ್ತೀನಿ ಅನ್ನೋ ವಿಶ್ವಾಸ ಇರುವ ಕ್ಷೇತ್ರದಲ್ಲಿ ಸ್ಪರ್ಧಿಸುವುದು, ಬಿಡುವುದು ಅವರ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದರು.

ಸಿದ್ದರಾಮಯ್ಯ ಕೊಲಾರದಿಂದ ಸ್ಪರ್ಧೆ ವಿಚಾರ ಅವರಿಗೆ ಮತ್ತು ಅವರ ಪಕ್ಷಕ್ಕೆ ಬಿಟ್ಟಿದ್ದು. ಕೋಲಾರದಲ್ಲಿ ಯಾಕೆ ನಿಂತುಕೊಳ್ತಾರೋ ಗೊತ್ತಿಲ್ಲ. ಚಿಕ್ಕನಾಯಕನಹಳ್ಳಿಗೆ ಬರೋದಾದ್ರೆ ನಾನು ಸ್ವಾಗತಿಸುತ್ತೇನೆ. ಬಂದ್ರೆ ಇಬ್ರೂ ಒಳ್ಳೆ ಕುಸ್ತಿ ಆಡಬಹುದು, ಬರಲಿ ಎಂದು ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ ಮಾಧುಸ್ವಾಮಿ ಹೇಳಿದ್ದಾರೆ.

2023 ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಮಾತನಾಡಿದ ವಿಜಯೇಂದ್ರ, ಶಿಕಾರಿಪುರದಿಂದ ಸ್ಪರ್ಧಿಸಲು ತಮ್ಮ ತಂದೆ ಈಗಾಗಲೇ ಅನುಮತಿ ನೀಡಿದ್ದಾರೆ. ನಾನು ಶಿಕಾರಿಪುರದಲ್ಲಿ ಮಾತ್ರವಲ್ಲ, ಇಡೀ ರಾಜ್ಯದಲ್ಲಿ ಬಿಜೆಪಿಯನ್ನು ಸಂಘಟಿಸುತ್ತಿದ್ದೇನೆ. ಪಕ್ಷದ ಹೈಕಮಾಂಡ್ ಕೇಳಿದರೆ ನಾನು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧ ಎಂದರು.

ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವುದಾಗಿ ಹೇಳಿದ್ದರೂ ಅವರ ಪುತ್ರ ಬಿವೈ ವಿಜಯೇಂದ್ರ  ರಾಜಕೀಯದಲ್ಲಿ ಸಕ್ರಿಯರಾಗಿ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ. ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ಗಳಿಸಲು ಅವರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com