ಬಿಜೆಪಿ ಸರ್ಕಾರದಿಂದ ಮತದಾರರ ಗುರುತಿನ ಚೀಟಿ ಹಗರಣ; ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಬೊಮ್ಮಾಯಿಗೆ ಕಾಂಗ್ರೆಸ್ ಆಗ್ರಹ

ಬಿಜೆಪಿ ಸರ್ಕಾರ ಮತ್ತು ಸಂಪುಟ ಸದಸ್ಯರು ಭಾರೀ ಹಗರಣ, ಅವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಇಂದು ಕೆಪಿಸಿಸಿ ಕಚೇರಿಯಲ್ಲಿ ಕರೆದ ತುರ್ತು ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಕಾಂಗ್ರೆಸ್ ನಾಯಕರ ಸುದ್ದಿಗೋಷ್ಠಿಯ ಸಂಗ್ರಹ ಚಿತ್ರ
ಕಾಂಗ್ರೆಸ್ ನಾಯಕರ ಸುದ್ದಿಗೋಷ್ಠಿಯ ಸಂಗ್ರಹ ಚಿತ್ರ

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ 2023ಗೆ (Karnataka Assembly Election 2023) ಇನ್ನೇನು ಐದಾರು ತಿಂಗಳು ಬಾಕಿ ಇದ್ದು, ಈ ಬಾರಿ ಶತಾಯಗತಾಯವಾಗಿ ಅಧಿಕಾರಕ್ಕೇರಲೇಬೇಕೆಂದು ಕಾಂಗ್ರೆಸ್ ಪಣತೊಟ್ಟಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭರ್ಜರಿ ಸಿದ್ಧತೆ ನಡೆಸಿದೆ. ಬಿಜೆಪಿ ಸರ್ಕಾರ ಮತ್ತು ಸಂಪುಟ ಸದಸ್ಯರು ಭಾರೀ ಹಗರಣ, ಅವ್ಯವಹಾರದಲ್ಲಿ ತೊಡಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಇಂದು ಕೆಪಿಸಿಸಿ ಕಚೇರಿಯಲ್ಲಿ ಕರೆದ ತುರ್ತು ಸುದ್ದಿಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ಸಿಎಂ ಬಸವರಾಜ ಬೊಮ್ಮಾಯಿ ತಕ್ಷಣವೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. 

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೆವಾಲ, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಇಂದು ಬೆಳಗ್ಗೆ ಕೆಪಿಸಿಸಿ ಕಚೇರಿಯಲ್ಲಿ ತುರ್ತು ಜಂಟಿ ಸುದ್ದಿಗೋಷ್ಠಿ ಕರೆದಿದ್ದರು. ಅದರಲ್ಲಿ ಮತದಾರರ ದಾಖಲೆಗಳು, ಅಂಕಿಅಂಶಗಳ ಕಳ್ಳತನ, ವಂಚನೆ ಮತ್ತು ಮಾಹಿತಿ ಸೋರುವಿಕೆ ಆಗಿದೆ. ಇದು ಚುನಾವಣಾ ವಂಚನೆಯಾಗಿದ್ದು ಮತದಾರರಿಂದ ಮಾಹಿತಿ ಸಂಗ್ರಹಿಸಲು ಅಧಿಕಾರಿಗಳು ಚುನಾವಣಾ ಸಂಸ್ಥೆಯ ಅಧಿಕಾರಿಗಳಂತೆ ಸೋಗು ಹಾಕಿದ್ದಾರೆ ಎಂದು ಆರೋಪಿಸಿದರು. ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾಗಿ ನಡೆದುಕೊಂಡಿರುವ ಆ ಹಗರಣದಿಂದ ಬೊಮ್ಮಾಯಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಅವರು ಒತ್ತಾಯಿಸಿದರು.(Voter ID scam)

ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮತದಾರರ ಗುರುತು ಚೀಟಿ ತಿರುಚಿ ಬಹಳ ದೊಡ್ಡ ಹಗರಣ ನಡೆಸಿದೆ, ಇಲ್ಲಿ ಸಿಎಂ ಬಿಜೆಪಿ ಚುನಾವಣಾಧಿಕಾರಿಗಳು, ಅವರ ಸಂಪುಟದ ಸಚಿವರಾದ ಡಾ ಸಿ ಎನ್ ಅಶ್ವಥ್ ನಾರಾಯಣ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಇದಕ್ಕೆ ಸಿಎಂ, ಬಿಜೆಪಿ ಸರ್ಕಾರ, ಬಿಬಿಎಂಪಿ ನೇರ ಹೊಣೆ. ಸಿಎಂ ಬೊಮ್ಮಾಯಿಯವರು ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ. 

ಸಿಎಂ ಬೊಮ್ಮಾಯಿಯವರು ಬೆಂಗಳೂರಿನ ಉಸ್ತುವಾರಿ ಸಚಿವರು. ಅದರ ಮುಖ್ಯ ಆಯುಕ್ತರು ಬೆಂಗಳೂರಿನ ಚುನಾವಣಾ ಅಧಿಕಾರಿ. ಖಾಸಗಿ ಸಂಸ್ಥೆ ಚಿಲುಮೆ ಎಜುಕೇಶನ್ ಇನ್ಸ್ಟಿಟ್ಯೂಟ್ ಮತದಾರರ ಜಾಗೃತಿಗಾಗಿ ಅನುಮತಿಗಾಗಿ ಅರ್ಜಿ ಸಲ್ಲಿಸಿತ್ತು. ಅನುಮತಿ ಪಡೆದ ಮೇಲೆ ಅವರು ಬೂತ್ ಮಟ್ಟದ ಅಧಿಕಾರಿಗಳನ್ನು ಸೋಗು ಹಾಕುವ ಮೂಲಕ ಮತದಾರರ ಡೇಟಾವನ್ನು ಸಂಗ್ರಹಿಸುವ ವಂಚನೆ ಮಾಡಲಾಗುತ್ತಿದೆ ಎಂದು ಸುರ್ಜೆವಾಲಾ ಆರೋಪ ಮಾಡಿದ್ದಾರೆ. 

ಮತದಾರರ ಮಾಹಿತಿಗಳ ಕಳ್ಳತನ ವಂಚನೆಗೆ ಸಿಎಂ ಬೊಮ್ಮಾಯಿ, ಅವರ ಸರ್ಕಾರದ ಅಧಿಕಾರಿಗಳು, ಬಿಬಿಎಂಪಿ ಅಧಿಕಾರಿಗಳು, ರಾಜ್ಯ ಚುನಾವಣಾ ಪ್ರಾಧಿಕಾರ ಕಾರಣವಾಗುತ್ತದೆ. 40% ಕಮಿಷನ್​ ಸರ್ಕಾರ ಭ್ರಷ್ಟಾಚಾರದ ರಾಜಧಾನಿಯಾಗುತ್ತಿದೆ. ಕೇವಲ ಗುತ್ತಿಗೆಯಲ್ಲಿ ಮಾತ್ರವಲ್ಲ, ಎಲ್ಲ ವಿಚಾರದಲ್ಲೂ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಇದೀಗ ಪ್ರಜಾಪ್ರಭುತ್ವದ ವಿಷಯದಲ್ಲೂ ಹಗರಣ ನಡೆಯುತ್ತಿದೆ. ಇಂಥದ್ದೊಂದು ಅಕ್ರಮ ಹಿಂದೆಂದೂ ನಡೆದಿರಲಿಲ್ಲ. 40% ಕಮಿಷನ್​ ಸರ್ಕಾರ ಜನರ ದುಡ್ಡನ್ನು ಕಳ್ಳತನ ಮಾಡಿದೆ. ಈ ಸರ್ಕಾರ ಚುನಾವಣಾ ಹಕ್ಕನ್ನೂ ಕದಿಯುವ ಪ್ರಯತ್ನ ಮಾಡಿದೆ. ಮಾಹಿತಿ ಕಳ್ಳತನ, ಬಿಬಿಎಂಪಿಯ ಅಕ್ರಮ ಇದೀಗ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದರು. 

ಬಿಜೆಪಿ ಸರ್ಕಾರ ವೋಟರ್​ ಮಾಹಿತಿ ಕದಿಯುವ ಕೆಲಸ ಮಾಡಿದೆ. ತುಷಾರ್ ಗಿರಿನಾಥ್​ ಬಿಬಿಎಂಪಿ ಚುನಾವಣಾಧಿಕಾರಿಯೂ ಆಗಿದ್ದಾರೆ. ಮಹದೇವಪುರದಲ್ಲಿ ಜಾಗೃತಿ ಮೂಡಿಸಲು ಚಿಲುಮೆ NGOಗೆ ಅನುಮತಿ ನೀಡಿದ್ದರು. ಈ ಕಂಪನಿ ಡಿಜಿಟಲ್​ ಸಮೀಕ್ಷಾ ಎಂಬ ಮೊಬೈಲ್ ಆ್ಯಪ್ ಹೊಂದಿದೆ. ವೋಟರ್​ ಡೇಟಾ ಸಂಗ್ರಹ ಮಾಡಿರುವುದು ಮೊದಲನೇ ಅಪರಾಧ. ಬೂತ್​ ಮಟ್ಟದ ಅಧಿಕಾರಿಗಳು​ ಡೇಟಾ ಸಂಗ್ರಹ ಮಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಬಿಬಿಎಂಪಿ ಬಿಜೆಪಿ ಹಿಡಿತದಲ್ಲೇ ಇದೆ ಎಂದಿದ್ದಾರೆ.

ವೋಟರ್​ ಐಡಿ ಅಕ್ರಮದ ಹಿಂದೆ ಅಶ್ವತ್ಥ್ ನಾರಾಯಣ ಕೈವಾಡ
ಸರ್ಕಾರ ಈ ಮಾಹಿತಿ ಕಲೆ ಹಾಕಲು ಚಿಲುಮೆ ಎಂಟರ್ ಪ್ರೈಸಸ್, DAP ಹೊಂಬಾಳೆ ಪ್ರೈವೇಟ್ ಲಿಮಿಟೆಡ್ ಗಳಿಗೆ ಜವಾಬ್ದಾರಿ ನೀಡಿದ್ದು ಈ ಎರಡು ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರು ಒಬ್ಬರೇ ಆಗಿದ್ದಾರೆ. ಈ ಎರಡು ಸಂಸ್ಥೆಗಳು EVM ಪ್ರಿಪರೇಷನ್ ನ್ನು ಮಾಡುತ್ತೆ. ಓಟರ್ ಐಡಿ ಅಕ್ರಮದ ಹಿಂದೆ ಅಶ್ವತ್ಥ ನಾರಾಯಣ ಇದ್ದಾರೆ ಎಂದು ಹೆಸರು ಉಲ್ಲೇಖಿಸದೇ ಕೇವಲ ಕ್ಷೇತ್ರದ ಹೆಸರು ಹೇಳಿ ಅಶ್ವತ್ಥ ನಾರಾಯಣ ವಿರುದ್ದ ಸುರ್ಜೇವಾಲ ಆರೋಪ ಮಾಡಿದ್ದಾರೆ.

ಬೂತ್ ಲೆವೆಲ್ ಆಫಿಸರ್ ಅಂತ ಐಡಿ ಕಾರ್ಡ್ ನೀಡಲಾಗಿದೆ. ಓಟರ್ ಐಡಿಗಳಿಂದ ಸಂಗ್ರಹಿಸಿದ ಡೇಟಾವನ್ನು ಅವರು ಚುನಾವಣಾ ಕಮಿಷನ್ ಗೆ ಅಪ್ಲೋಡ್ ಮಾಡ್ತಿಲ್ಲ. ಖಾಸಗಿ ವ್ಯಕ್ತಿಗಳಿಗೆ ಮಾಹಿತಿ ನೀಡುತ್ತಿದ್ದಾರೆ. ಕೃಷ್ಣಪ್ಪ ಹಾಗೂ ರವಿಕುಮಾರ್ ಇದರ ಕಿಂಗ್ ಪಿನ್. ಇವರು ಮಾಜಿ ಡಿಸಿಎಂ ಹಾಗೂ ಹಾಲಿ ಸಚಿವರಿಗೆ ಆತ್ಮೀಯರು. ಹಾಲಿ ಸಚಿವರು ಕಿಂಗ್ ಪಿನ್ ಕೃಷ್ಣಪ್ಪ ಜೊತೆಗೆ ಮಿಂಗಲ್ ಆಗಿದ್ದಾರೆ. ಹಾಗೂ ಮಲ್ಲೇಶ್ವರಂ ಕ್ಷೇತ್ರದ ಸಚಿವರಿಗೆ ಸಂಬಂಧಿಸಿದವರು ಕೃಷ್ಣಪ್ಪ ಎಂದರು. 

ಈ ಕಂಪನಿ ಡಿಜಿಟಲ್ ಸಮೀಕ್ಷಾ ಎಂಬ ಮೊಬೈಲ್ ಆ್ಯಪ್ ಹೊಂದಿದೆ. ಓಟರ್ ಡೆಟಾ ಸಂಗ್ರಹ ಮಾಡಿರುವುದು ಮೊದಲನೇ ಅಪರಾಧ. ಬೂತ್ ಲೆವೆಲ್ ಆಫಿಸರ್ ನಿಂದ ಡೇಟಾ ಕಲೆಕ್ಟ್ ಮಾಡಿದ್ದಾರೆ. ಕಳೆದ ಮೂರು ವರ್ಷಗಳಿಂದ ಬಿಬಿಎಂಪಿ ಬಿಜೆಪಿ ಹಿಡಿತದಲ್ಲೇ ಇದೆ. ಓಟರ್ ಮಾಹಿತಿ ಕದಿಯುವ ಕೆಲಸವನ್ನು ಬಿಬಿಎಂಪಿ ಹಾಗೂ ಬೊಮ್ಮಾಯಿ ಸರ್ಕಾರ ಮಾಡಿದೆ. ಅನುಭವವೇ ಇಲ್ಲದೇ ಚಿಲುಮೆ ಎನ್.ಜಿ.ಓ ಮನೆಮನೆಗೆ ಹೋಗಿ ಜಾಗೃತಿ ಮೂಡಿಸುತ್ತೇವೆ ಎನ್ನುತ್ತದೆ. ಹೊಂಬಾಳೆ ಪ್ರೈವೇಟ್ ಲಿಮಿಟೆಡ್ ಹಾಗೂ ಚಿಲುಮೆ ಎನ್.ಜಿಓ ದ ಪದಾಧಿಕಾರಿಗಳು ಎಲ್ಲರೂ ಒಂದೇ ಸಂಸ್ಥೆಗೆ ಸೇರಿದವರು ಎಂದು ಸುರ್ಜೇವಾಲ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com