ಬಿಕ್ಕಟ್ಟಿನಿಂದ ಹೊರಬರಲು ಜಾರಕಿಹೊಳಿ ಸಹೋದರರ ಶಕ್ತಿ ಪ್ರದರ್ಶನ: ಬದಲಾಗಲಿದೆಯೇ ಬೆಳಗಾವಿ ರಾಜಕೀಯ ಸಮೀಕರಣ; ಕಾಂಗ್ರೆಸ್- ಬಿಜೆಪಿಗೆ ಸಂದೇಶ?
2023ರ ವಿಧಾನಸಭೆ ಚುನಾವಣೆಗೂ ಮುನ್ನ ಬಿಕ್ಕಟ್ಟಿನಲ್ಲಿ ಸಿಲುಕಿರುವ ಗೋಕಾಕ್ ನ ಜಾರಕಿಹೊಳಿ ಸಹೋದರರು ಒಂದುಗೂಡಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
Published: 17th November 2022 10:02 AM | Last Updated: 17th November 2022 01:10 PM | A+A A-

ಜಾರಕಿಹೊಳಿ ಸಹೋದರರು
ಬೆಳಗಾವಿ: 2023ರ ವಿಧಾನಸಭೆ ಚುನಾವಣೆಗೂ ಮುನ್ನ ಬಿಕ್ಕಟ್ಟಿನಲ್ಲಿ ಸಿಲುಕಿರುವ ಗೋಕಾಕ್ ನ ಜಾರಕಿಹೊಳಿ ಸಹೋದರರು ಒಂದುಗೂಡಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ವಿವಿಧ ಪಕ್ಷಗಳಲ್ಲಿದ್ದರೂ ಸಹೋದರರ ನಡುವೆ ಹೊಂದಾಣಿಕೆಯಿದೆ, ಐವರು ಜಾರಕಿಹೊಳಿ ಸಹೋದರರು ಸಾರ್ವಜನಿಕವಾಗಿ ಕೈಜೋಡಿಸಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಿಗೆ ಪ್ರಬಲ ಸಂದೇಶ ನೀಡಲು ನಿರ್ಧರಿಸಿದ್ದಾರೆ. ಐವರು ಸಹೋದರರಿಗೆ ಬೆಳಗಾವಿ ರಾಜಕೀಯ ಸಮೀಕರಣವನ್ನು ಬದಲಾಯಿಸುವ ಸಾಮರ್ಥ್ಯವಿದೆ ಎಂದು ಹೇಳಲಾಗಿದೆ.
ಹಿಂದೂ ಪದದ ಬಗ್ಗೆ ಹೇಳಿಕೆ ನೀಡಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ವಿವಾದಕ್ಕೆ ಗುರಿಯಾಗಿದ್ದರು. ಇನ್ನು ಯುವತಿಯ ಜೊತೆಗಿದ್ದ ಅಶ್ಲೀಲ ವಿಡಿಯೋ ಸಿಡಿ ಬಿಡುಗಡೆಯಾದ ಹಿನ್ನಲೆಯಲ್ಲಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರನ್ನು ಸಚಿವ ಸಂಪುಟದಿಂದ ಹೊರಗಿಡಲಾಗಿದೆ.
ಜಾರಕಿಹೊಳಿ ಕುಟುಂಬವನ್ನು ರಾಜಕೀಯವಾಗಿ ಹತ್ತಿಕ್ಕಲು ಒಂದು ವರ್ಗದ ಮುಖಂಡರು ನಡೆಸುತ್ತಿರುವ ವ್ಯವಸ್ಥಿತ ಷಡ್ಯಂತ್ರ ಹತ್ತಿಕ್ಕಲು ಜಾರಕಿಹೊಳಿ ಸಹೋದರರು ಅಹಿಂದ ಸಮಾವೇಶ ನಡೆಸಲು ಸಿದ್ದತೆ ನಡೆಸಿದ್ದಾರೆ.
18 ವಿಧಾನಸಭೆ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರು ನಡೆಸುತ್ತಿರುವ ಸಮಾವೇಶ 2023ರ ವಿಧಾನಸಭೆ ಚುನಾವಣೆಯ ಮೇಲೆ ಭಾರೀ ಪ್ರಭಾವ ಬೀರುವ ಸಾಧ್ಯತೆಯಿದೆ. ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳಿಗೆ ಪ್ರಬಲ ಸಂದೇಶ ರವಾನಿಸಲಿದ್ದಾರೆ ಎಂದು ಜಾರಕಿಹೊಳಿ ಕುಟುಂಬದ ಆಪ್ತರು ತಿಳಿಸಿದ್ದಾರೆ.
ತಮ್ಮ ಕುಟುಂಬದ ವಿರುದ್ಧ ನಡೆಯುತ್ತಿರುವ ರಾಜಕೀಯ ಷಡ್ಯಂತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಜಾರಕಿಹೊಳಿ ಸಹೋದರರು ಮೊದಲ ಬಾರಿಗೆ ಒಂದಾಗಿ ಬಲ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ಉಮೇಶ್ ಕತ್ತಿ, ಆನಂದ್ ಮಾಮನಿ ನಿಧನ: ಬೆಳಗಾವಿಯಲ್ಲಿ ಗೆಲ್ಲುವ ಕುದುರೆಗಳಿಲ್ಲದೆ ಬಿಜೆಪಿಗೆ ಭ್ರಮ ನಿರಸನ!
ಜಾರಕಿ ಹೊಳಿ ಸಹೋದರರಲ್ಲಿ ಹಿರಿಯವರಾದ ರಮೇಶ್ ಮತ್ತು ಬಾಲಚಂದ್ರ ಗೋಕಾಕ್ ಮತ್ತು ಅರಭಾವಿ ಶಾಸಕರಾಗಿದ್ದಾರೆ. ಸತೀಶ್ ಯಮನಕರಡಿ, ಲಖನ್ ಬೆಳಗಾವಿ ಎಂಎಲ್ ಸಿ ಹಾಗೂ ಮತ್ತೊಬ್ಬ ಸಹೋದರ ಭೀಂಶಿ ರಾಜಕೀಯದಿಂದ ದೂರ ಉಳಿದಿದ್ದು ಉದ್ಯಮ ನಡೆಸುತ್ತಿದ್ದಾರೆ.
ಬೆಳಗಾವಿಯ ಎರಡೂ ಲೋಕಸಭಾ ಕ್ಷೇತ್ರಗಳಲ್ಲಿ ಆಯೋಜಿಸಲಾಗುವ ಅಹಿಂದ ಸಮಾವೇಶದಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಜಾರಕಿಹೊಳಿಗಳು ಈ ಪ್ರದೇಶದಲ್ಲಿ ತಮಗೆ ಸಿಕ್ಕಿರುವ ಜನಬೆಂಬಲವನ್ನು ಪ್ರದರ್ಶಿಸಲಿದ್ದಾರೆ.
ರಾಜ್ಯದಲ್ಲಿ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ಅಸ್ಥಿತ್ವಕ್ಕೆ ತರಲು ಪ್ರಮುಖ ಪಾತ್ರ ವಹಿಸಿದ್ದರೂ ರಮೇಶ್ ಅವರನ್ನು ಸಚಿವ ಸಂಪುಟದಿಂದ ಹೊರಗಿಟ್ಟಿರುವುದು ಜಾರಕಿಹೊಳಿ ಸಹೋದರರಿಗೆ ನುಂಗಲಾರದ ಬಿಸಿ ತುಪ್ಪದಂತಾಗಿದೆ. ಹೀಗಾಗಿ ನಾಯಕರಿಗೆ ಸಮಾವೇಶದಲ್ಲಿ ಸಹೋದರರು ಸೂಕ್ತ ಸಂದೇಶ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.