ಪಾಪ, ನಿಖಿಲ್ ಒಂದು ಕ್ಷೇತ್ರದಲ್ಲಿ ಗೆದ್ದು ತಮ್ಮ ಸಾಮರ್ಥ್ಯ ತೋರಿಸಲಿ; ಅವರಿಗೂ ಚನ್ನಪಟ್ಟಣಕ್ಕೂ ಸಂಬಂಧವಿಲ್ಲ: ಯೋಗೇಶ್ವರ್ ತಿರುಗೇಟು
ಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಎಲ್ಲಾದರೂ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಸವಾಲು ಹಾಕಿದ್ದಾರೆ.
Published: 24th November 2022 12:41 PM | Last Updated: 24th November 2022 01:53 PM | A+A A-

ಸಿ.ಪಿ ಯೋಗೇಶ್ವರ್ ಮತ್ತು ನಿಖಿಲ್ ಕುಮಾರಸ್ವಾಮಿ
ರಾಮನಗರ : ಮಾಜಿ ಸಿಎಂ ಎಚ್. ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಎಲ್ಲಾದರೂ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಸವಾಲು ಹಾಕಿದ್ದಾರೆ.
ಚನ್ನಪಟ್ಟಣದಲ್ಲಿ ಮಾತನಾಡಿದ ಸಿ .ಪಿ ಯೋಗೇಶ್ವರ್, ಈ ಕ್ಷೇತ್ರಕ್ಕೂ ನಿಖಿಲ್ ಗು ಸಂಬಂಧವಿಲ್ಲ, ನಿಖಿಲ್ ಅವರ ಹೇಳಿಕೆಗೆ ನಾನು ಪ್ರತಿಕ್ರಿಯಿಸುವುದಿಲ್ಲ, ಕುಮಾರಸ್ವಾಮಿ ಅವರ ಹೇಳಿಕೆಗೆ ಮಾತ್ರ ನಾನು ಉತ್ತರಿಸುತ್ತೇನೆ ಎಂದಿದ್ದಾರೆ.
ಚುನಾವಣೆಗೆ ಇನ್ನೂ ನಾಲ್ಕೈದು ತಿಂಗಳು ಬಾಕಿಯಿದೆ, ಯಾರು ಸೋಲ್ತಾರೆ, ಯಾರು ಗೆಲ್ಲುತ್ತಾರೆ ಎಂಬುದನ್ನು ಜನ ನಿರ್ಧರಿಸುತ್ತಾರೆ. ಅದನ್ನು ಹೇಳೋಕೆ ಯಾರು, ಅವರು ಒಂದು ಸಾರಿ ಗೆಲ್ಲಲಿ ಎಂದು ಟಾಂಗ್ ನೀಡಿದ್ದಾರೆ.
ಚನ್ನಪಟ್ಟಣದ ಕೆಂಗಲ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದ ನಿಖಿಲ್ ಕುಮಾರಸ್ವಾಮಿ, ಮಾಜಿ ಸಚಿವ ಯೋಗೇಶ್ವರ್ ಟೀಕೆ ವಿಚಾರವಾಗಿ ಪ್ರತಿಕ್ರಿಯಿಸಿ, ಈ ಬಗ್ಗೆ ಪ್ರತಿನಿತ್ಯ ಚರ್ಚೆ ಮಾಡುವುದು ಅನಾವಶ್ಯಕ. ಮಾಜಿ ಸಚಿವರಿಗೆ ಭಯದ ವಾತಾವರಣ ಕಾಡುತ್ತಿದೆ. 2018 ರಲ್ಲಿ ಆದ ಪರಿಸ್ಥಿತಿ ಆಗುತ್ತದೆ ಎಂಬ ಆತಂಕ ಸೃಷ್ಟಿ ಆಗಿದೆ. ಅವರ ಬಗ್ಗೆ ಚರ್ಚೆ ಮಾಡಿ ಸಮಯ ವ್ಯರ್ಥ ಮಾಡಿಕೊಳ್ಳುವುದಿಲ್ಲ. ಕಳೆದ ಹದಿನೆಂಟು ವರ್ಷ ಅವರಿಗೆ ಜನ ಆಶೀರ್ವಾದ ಮಾಡಿದ್ದರು. ಆವಾಗ ಯೋಗೇಶ್ವರ್ ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನಿಸಿದರು.
ತಾಲೂಕು ಅಭಿವೃದ್ಧಿ ಮಾಡಲು ಹದಿನೆಂಟು ವರ್ಷ ಬೇಕಿತ್ತಾ. ಕುಮಾರಸ್ವಾಮಿ ನಾಲ್ಕೂವರೆ ವರ್ಷದಲ್ಲಿ ಅಭಿವೃದ್ಧಿ ಮಾಡಿ ತೋರಿಸಿದ್ದಾರೆ. ಇದನ್ನು ಯೋಗೇಶ್ವರ್ ಅವರಿಗೆ ಸಹಿಸಲು ಆಗುತ್ತಿಲ್ಲ. ತಾಲೂಕಿನ ಅಭಿವೃದ್ಧಿ ವಿಚಾರವಾಗಿ ನಾವು ಗೊಂದಲ ಮೂಡಿಸುವುದಿಲ್ಲ. ಯಾರು ಬೇಕಾದರೂ ಅಭಿವೃದ್ಧಿ ಮಾಡಲಿ ಎಂದು ಯೋಗೇಶ್ವರ್ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದರು.