ನಾವೆಲ್ಲರೂ ಭಾರತೀಯರೇ ಎನ್ನುತ್ತಿರುವ ಬಿಜೆಪಿಗೆ ಬೆಳಗಾವಿ ಇಲ್ಲಿದ್ದರೇನು? ಮಹಾರಾಷ್ಟ್ರದಲ್ಲಿ ಇದ್ದರೇನು?: ಎಚ್‌ಡಿಕೆ
ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಹೊರಟಿರುವ ಬಿಜೆಪಿಗರೇ, ನಾವೆಲ್ಲರೂ ಭಾರತೀಯರು ಎಂದು ಹೇಳುತ್ತೀರಲ್ಲವೇ? ಹಾಗಿದ್ದರೆ, ಬೆಳಗಾವಿ ಅಲ್ಲಿದ್ದರೇನು? ಇಲ್ಲಿದ್ದರೇನು? ಎಂದೂ ಹೇಳಿಬಿಡಿ ಎಂದು ಮಹಾರಾಷ್ಟ್ರ ಗಡಿ ವಿವಾದ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಶನಿವಾರ ಹೇಳಿದ್ದಾರೆ.
Published: 26th November 2022 01:55 PM | Last Updated: 26th November 2022 01:59 PM | A+A A-

ಹೆಚ್.ಡಿ.ಕುಮಾರಸ್ವಾಮಿ
ಚಿಕ್ಕಬಳ್ಳಾಪುರ: ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಹೊರಟಿರುವ ಬಿಜೆಪಿಗರೇ, ನಾವೆಲ್ಲರೂ ಭಾರತೀಯರು ಎಂದು ಹೇಳುತ್ತೀರಲ್ಲವೇ? ಹಾಗಿದ್ದರೆ, ಬೆಳಗಾವಿ ಅಲ್ಲಿದ್ದರೇನು? ಇಲ್ಲಿದ್ದರೇನು? ಎಂದೂ ಹೇಳಿಬಿಡಿ ಎಂದು ಮಹಾರಾಷ್ಟ್ರ ಗಡಿ ವಿವಾದ ಕುರಿತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಶನಿವಾರ ಹೇಳಿದ್ದಾರೆ.
ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದದ ಕುರಿತು ಅಲ್ಲಿನ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವ ಪ್ರಸ್ತಾಪವನ್ನು ಇಟ್ಟಿದ್ದರಿಂದ ಪುನಃ ಸರ್ವಪಕ್ಷ ಸಭೆ ಕರೆದು ತೀರ್ಮಾನವನ್ನು ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆಯನ್ನು ನೀಡಿದ್ದರು.
ಇದನ್ನೂ ಓದಿ: ಕಾಂಗ್ರೆಸ್ ಬಿಜೆಪಿಯ ಬಿ ಟೀಮ್: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿಯವರು, ಬಿಜೆಪಿಯ ನೀತಿ ವಿರುದ್ಧ ಕಿಡಿಕಾರಿದರು.
ಗೋಡಂಬಿ, ಬಾದಾಮಿ ಕೊಟ್ಟು ಕಳುಹಿಸುವುದಕ್ಕೆ ಸರ್ವಪಕ್ಷ ಸಭೆಯನ್ನೇಕೆ ಕರೆಯುತ್ತೀರಿ? ಎರಡೂ ಕಡೆ ನಿಮ್ಮದೇ ಸರ್ಕಾರ ಇದೆ. ಹೀಗಾಗಿ ನೀವು ಅಲ್ಲಿಯೇ ಮಾತನಾಡಿಕೊಳ್ಳಿ, ವಿರೋಧ ಪಕ್ಷಗಳನ್ನು ಕರೆದು ಏನು ಮಾಡುತ್ತೀರಿ? ಇದು ನಿಮ್ಮ ಜವಾಬ್ದಾರಿ, ಅಲ್ಲೂ ನಿಮ್ಮದೆ ಜವಾಬ್ದಾರಿಯಾಗಿದೆ ಎಂದು ಎಂದರು.
ಮಹಾರಾಷ್ಟ್ರದವರಿಗೆ ಮುಂದಿನ ಪಾರ್ಲಿಮೆಂಟ್ ಚುನಾವಣೆಗೆ ಈ ವಿಚಾರ ಬೇಕು. ಕರ್ನಾಟಕದಲ್ಲಿ ಮೂರೂವರೆ ವರ್ಷ ಅಧಿಕಾರ ನಡೆಸಿದ ಬಿಜೆಪಿಗೆ ಜನರ ಬಳಿ ಹೋಗಲು ವಿಷಯಾಧಾರಿತ ಸರಕು ಇಲ್ಲ. ಹೀಗಾಗಿ ಗಡಿ ತಗಾದೆ ತೆಗೆಯುತ್ತಿದ್ದಾರೆ. ಯಾರೋ ಮಾಡಿದ ಕೆಲಸಗಳ ಬಗ್ಗೆ ಭಾಷಣ ಮಾಡಬಹುದು. ಧರ್ಮದ ವಿಚಾರ ಇಟ್ಟುಕೊಂಡು ಜನರ ನೆಮ್ಮದಿ ಕೆಡಿಸುವುದು ಸರಿಯಲ್ಲ ಎಂದು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.