ಹಳೇ ಮೈಸೂರು ಭಾಗದಲ್ಲಿ 'ಕಮಲ' ಅರಳಿಸಲು ಪ್ಲಾನ್: ಜೆಡಿಎಸ್ ಭದ್ರಕೋಟೆಯಲ್ಲಿ ಬಿಗ್ 'ಆಪರೇಷನ್'; ಅಭಿಷೇಕ್ ಜೊತೆ ಸುಮಲತಾ ಬಿಜೆಪಿ ಸೇರ್ಪಡೆ ಸನ್ನಿಹಿತ!

ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದ್ದು, ಈಗಿನಿಂದಲೇ ಪಕ್ಷ ಸಂಘಟನೆ ಮಾಡಲು ಆಪರೇಷನ್‌ಗೆ ಇಳಿದಿದೆ.
ಸುಮಲತಾ ಮತ್ತು ಅಭಿಷೇಕ್
ಸುಮಲತಾ ಮತ್ತು ಅಭಿಷೇಕ್

ಮಂಡ್ಯ: ಕರ್ನಾಟಕ ವಿಧಾನಸಭೆ ಚುನಾವಣೆ ಬಿಜೆಪಿ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಬಾರಿ ಶತಾಯಗತಾಯವಾಗಿ ಅಧಿಕಾರಕ್ಕೇರಬೇಕೆಂದು ಇನ್ನಿಲ್ಲದ ಕಸರತ್ತು ನಡೆಸಿದೆ. ಅದರಲ್ಲೂ ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಬಿಜೆಪಿ ಮಾಸ್ಟರ್ ಪ್ಲಾನ್ ಮಾಡಿದ್ದು, ಈಗಿನಿಂದಲೇ ಪಕ್ಷ ಸಂಘಟನೆ ಮಾಡಲು ಆಪರೇಷನ್‌ಗೆ ಇಳಿದಿದೆ.

ಮಂಡ್ಯ ಜಿಲ್ಲೆಯಲ್ಲಿ ಪಕ್ಷವನ್ನು ಬಲಪಡಿಸುವ ಕಾರ್ಯತಂತ್ರದ ಭಾಗವಾಗಿ ಕೆಪಿಸಿಸಿ ಮಾಜಿ ಸದಸ್ಯ ಎಸ್‌. ಸಚ್ಚಿದಾನಂದ ಸೇರಿ ಹಲವರನ್ನು ಬಿಜೆಪಿಗೆ ಸೋಮವಾರ ಸೇರ್ಪಡೆಗೊಳಿಸಲಾಯಿತು. ಸಚ್ಚಿದಾನಂದ ಅವರು ಸಂಸದೆ ಸುಮಲತಾ ಅವರ ಆಪ್ತ ಬಳಗಕ್ಕೆ ಸೇರಿದವರು. 2019ರ ಲೋಕಸಭೆ ಚುನಾವಣೆಯಲ್ಲಿ ಎಸ್. ಸಚ್ಚಿದಾನಂದ ಸುಮಲತಾ ಅವರನ್ನು ಬೆಂಬಲಿಸಿದ್ದರು.

ಚುನಾವಣೆಗೆ ಮುನ್ನ ಪಕ್ಷಕ್ಕೆ ಸಹಾಯ ಮಾಡಲು ಸುಮಲತಾ ತಮ್ಮ ಬೆಂಬಲಿಗರಿಗೆ, ವಿಶೇಷವಾಗಿ ಅಂಬರೀಶ್ ಅವರ ಅಭಿಮಾನಿಗಳಿಗೆ ಬಿಜೆಪಿ ಸೇರಲು ಅವಕಾಶ ನೀಡಿದ್ದಾರೆ ಎಂದು ವ್ಯಾಖ್ಯಾನಿಸಲಾಗಿದೆ.  ಸುಮಲತಾ ಮತ್ತು ಪುತ್ರ ಅಭಿಷೇಕ್ ಶೀಘ್ರದಲ್ಲೇ ಬಿಜೆಪಿ ಸೇರ್ಪಡೆ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಮೂಲಗಳು ತಿಳಿಸಿವೆ.

ಸಚ್ಚಿದಾನಂದ ಅವರ ಮಾವ ಎಸ್ ಎಲ್ ಲಿಂಗರಾಜು, 2013ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತಿದ್ದರು.  

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಚ್ಚಿದಾನಂದ ಕಣಕ್ಕಿಳಿಯುವ ಸಾಧ್ಯತೆಯಿರುವುದರಿಂದ ಕಾಂಗ್ರೆಸ್‌ಗೆ ಭಾರೀ ಹಿನ್ನಡೆಯಾಗಿದೆ. ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಮತ್ತು ಕಾಂಗ್ರೆಸ್‌ನ ರಮೇಶ್ ಬಂಡಿಸಿದ್ದೇಗೌಡ ಅವರು ಕಣಕ್ಕಿಳಿಯಲಿದ್ದಾರೆ.

ಆದರೆ ಸಚ್ಚಿದಾನಂದ ಸೇರ್ಪಡೆ ಸ್ಥಳೀಯ ಬಿಜೆಪಿ ನಾಯಕರಿಗೆ ಅಸಮಾಧಾನ ಮೂಡಿಸಿದೆ. ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ ಅವರು ಬಿಜೆಪಿ ಟಿಕೆಟ್‌ ರೇಸ್‌ನಲ್ಲಿದ್ದಾರೆ. ಪಕ್ಷದ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳುವುದರಿಂದ ಸದ್ಯಕ್ಕೆ ಬಿಜೆಪಿ ಅಭ್ಯರ್ಥಿ ಯಾರು ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಗೌಡ ತಿಳಿಸಿದ್ದಾರೆ.

ಪಕ್ಷಕ್ಕೆ ಸೇರ್ಪಡೆಗೊಂಡ ಹೊಸಬರನ್ನು ಸ್ವಾಗತಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಅಲೆ ಇದ್ದು, ಸಚ್ಚಿದಾನಂದ ಅವರ ಪ್ರವೇಶ ಮತ್ತಷ್ಟು ಉತ್ತೇಜನ ನೀಡಲಿದೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್  ಕುಟುಂಬ ರಾಜಕಾರಣದ ಕಪಿಮುಷ್ಠಿಯಿಂದ ಮಂಡ್ಯ ಜಿಲ್ಲೆಯನ್ನು ಬಿಜೆಪಿ ಮುಕ್ತಗೊಳಿಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಜೆಡಿಎಸ್‌ನ ಗುಲಾಮಗಿರಿ ತಾಳಲಾರದೆ ಜನಪರ ಪಕ್ಷವಾಗಿರುವ ಬಿಜೆಪಿ ಸೇರಲು ಜೆಡಿಎಸ್ ಮುಖಂಡರು ಉತ್ಸುಕರಾಗಿದ್ದಾರೆ. ಮಂಡ್ಯದಲ್ಲಿ ಬಿಜೆಪಿಗೆ ಅಭ್ಯರ್ಥಿಗಳ ಕೊರತೆ ಇಲ್ಲ ಎಂದು ಮಾಜಿ ಸಚಿವ ಸಿ.ಪಿ.ಯೋಗೀಶ್ವರ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com