ನ್ಯಾಷನಲ್ ಹೆರಾಲ್ಡ್ ಪ್ರಕರಣ: ಡಿಕೆಶಿ ಮನವಿ ತಿರಸ್ಕರಿಸಿದ ಇಡಿ, ನಾಳೆಯೇ ವಿಚಾರಣೆಗೆ ಹಾಜರಾಗುವಂತೆ ಸೂಚನೆ

ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 7 ರಂದು ದೆಹಲಿಯಲ್ಲಿ ತನಿಖಾ ಸಂಸ್ಥೆಯ ಮುಂದೆ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ತಾವು ಮಾಡಿದ್ದ ಮನವಿಯನ್ನು ಜಾರಿ...
ಡಿ ಕೆ ಶಿವಕುಮಾರ್
ಡಿ ಕೆ ಶಿವಕುಮಾರ್

ಮೈಸೂರು: ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 7 ರಂದು ದೆಹಲಿಯಲ್ಲಿ ತನಿಖಾ ಸಂಸ್ಥೆಯ ಮುಂದೆ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ತಾವು ಮಾಡಿದ್ದ ಮನವಿಯನ್ನು ಜಾರಿ ನಿರ್ದೇಶನಾಲಯ(ಇಡಿ) ತಿರಸ್ಕರಿಸಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಗುರುವಾರ ಹೇಳಿದ್ದಾರೆ.

ತಮ್ಮ ಪಕ್ಷದ ನಾಯಕರ ಜೊತೆ ಮಾತನಾಡಿದ ನಂತರ ನಾಳೆ ವಿಚಾರಣೆಗೆ ಹಾಜರಾಗಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವುದಾಗಿ ಡಿಕೆಶಿ ತಿಳಿಸಿದ್ದಾರೆ. 

ಡಿಕೆ ಶಿವಕುಮಾರ್‌ ಅವರ ಮನವಿ ತಿರಸ್ಕರಿಸಿದ ಇಡಿ ಶುಕ್ರವಾರವೇ ವಿಚಾರಣೆಗೆ ಹಾಜರಾಗುವಂತೆ ಹೊಸ ಸಂದೇಶದಲ್ಲಿ ಸೂಚಿಸಿದೆ.

"ಸೆಪ್ಟೆಂಬರ್ 23, 2022 ರ ಸಮನ್ಸ್‌ನ ಪ್ರಕಾರ ಅಕ್ಟೋಬರ್ 7, 2022 ರಂದು ನಿಮ್ಮ ಹೇಳಿಕೆ ರೆಕಾರ್ಡಿಂಗ್‌ಗಾಗಿ ನಮ್ಮ ಕಚೇರಿಯಲ್ಲಿ ಹಾಜರಾಗುವಂತೆ ಮತ್ತೊಮ್ಮೆ ನಿಮಗೆ ನಿರ್ದೇಶಿಸಲಾಗಿದೆ" ಎಂದು ಇಡಿ ಸಹಾಯಕ ನಿರ್ದೇಶಕ ಕುಲದೀಪ್ ಸಿಂಗ್ ಕಳುಹಿಸಿರುವ ಇಮೇಲ್ ನಲ್ಲಿ ತಿಳಿಸಲಾಗಿದೆ.

ಶಿವಕುಮಾರ್ ಅವರು ಪ್ರಸ್ತುತ ಕರ್ನಾಟಕದ ಮೂಲಕ ಹಾದುಹೋಗುವ ಕಾಂಗ್ರೆಸ್‌ 'ಭಾರತ್ ಜೋಡೋ ಯಾತ್ರೆ'ಯಲ್ಲಿ ಭಾಗವಹಿಸಿದ್ದು, ಅಕ್ಟೋಬರ್ 21 ರವರೆಗೆ ವಿಚಾರಣೆಗೆ ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ತನಿಖಾ ಸಂಸ್ಥೆಗೆ ಮನವಿ ಮಾಡಿದ್ದರು.

"ಇಡಿ ಮುಂದೆ ಹಾಜರಾಗಲು ನಾನು ಸಮಯ ಕೋರಿದ್ದೆ. ಆದರೆ ಅದನ್ನು ನಿರಾಕರಿಸಲಾಗಿದೆ. ನನ್ನ ನಾಯಕರೊಂದಿಗೆ ಮಾತನಾಡಿದ ನಂತರ ಏಜೆನ್ಸಿಯ ಮುಂದೆ ಹಾಜರಾಗಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವುದಾಗಿ" ಎಂದು ಶಿವಕುಮಾರ್ ತಿಳಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಒಡೆತನದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ಕಾರ್ಯಾಚರಣೆಗಳ ಬಗ್ಗೆ ನಡೆಯುತ್ತಿರುವ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ಅವರ ಸಹೋದರ ಸಂಸದ, ಡಿ ಕೆ ಸುರೇಶ್ ಅವರಿಗೂ ಇಡಿ ಸಮನ್ಸ್ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com