ಸೋಲಾರ್ ಹಗರಣ ಸಂಬಂಧ ಯಾವ ತನಿಖೆ ಬೇಕಾದರು ಮಾಡಿಸಿ, ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ: ಡಿ ಕೆ ಶಿವಕುಮಾರ್ ಸವಾಲು
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶುಕ್ರವಾರ ಭಾರತ ಐಕ್ಯತಾ ಜೋಡೋ ಯಾತ್ರೆಯನ್ನು ಬಿಟ್ಟು ನ್ಯಾಷನಲ್ ಹೆರಾಲ್ಡ್ ಮತ್ತು ಯಂಗ್ ಇಂಡಿಯಾ ಸಂಸ್ಥೆಗೆ ಹಣಕಾಸಿನ ನೆರವು ನೀಡಿದ ಪ್ರಕರಣದ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ ಮುಂದೆ ದೆಹಲಿಯಲ್ಲಿ ತಮ್ಮ ಸೋದರ ಡಿ ಕೆ ಸುರೇಶ್ ಜೊತೆಗೆ ವಿಚಾರಣೆಗೆ ಹಾಜರಾಗಿದ್ದಾರೆ.
Published: 07th October 2022 11:21 AM | Last Updated: 07th October 2022 01:58 PM | A+A A-

ಡಿ ಕೆ ಶಿವಕುಮಾರ್
ನವದೆಹಲಿ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಶುಕ್ರವಾರ ಭಾರತ ಐಕ್ಯತಾ ಜೋಡೋ ಯಾತ್ರೆಯನ್ನು ಬಿಟ್ಟು ನ್ಯಾಷನಲ್ ಹೆರಾಲ್ಡ್ ಮತ್ತು ಯಂಗ್ ಇಂಡಿಯಾ ಸಂಸ್ಥೆಗೆ ಹಣಕಾಸಿನ ನೆರವು ನೀಡಿದ ಪ್ರಕರಣದ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯದ ಮುಂದೆ ದೆಹಲಿಯಲ್ಲಿ ತಮ್ಮ ಸೋದರ ಡಿ ಕೆ ಸುರೇಶ್ ಜೊತೆಗೆ ವಿಚಾರಣೆಗೆ ಹಾಜರಾಗಿದ್ದಾರೆ.
ಡಿ.ಕೆ.ಶಿವಕುಮಾರ್ ಮತ್ತು ಅವರ ಸಹೋದರ, ಸಂಸದ ಡಿಕೆ ಸುರೇಶ್ ಅವರು ಏಜೆನ್ಸಿಯ ಮುಂದೆ ಹಾಜರಾಗಲು ಮುಂದಿನ ದಿನಾಂಕ ನೀಡಬೇಕು ಎಂಬ ಮನವಿಯನ್ನು ಇಡಿ ತಿರಸ್ಕರಿಸಿದ ನಂತರ ಇಂದು ಇಬ್ಬರು ವಿಚಾರಣೆಗೆ ಹಾಜರಾಗಿದ್ದಾರೆ.
Karnataka Congress Chief DK Shivakumar reaches the ED office in Delhi
The agency has summoned him & his brother, MP DK Suresh in connection with a probe related to their financial contribution to Young India Private Limited. pic.twitter.com/YzKJQHLyoX— ANI (@ANI) October 7, 2022
ಕಳೆದ ತಡರಾತ್ರಿಯೇ ಡಿ ಕೆ ಬ್ರದರ್ಸ್ ದೆಹಲಿಗೆ ಇಡಿ ವಿಚಾರಣೆಗೆ ಬಂದಿಳಿದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ಕುಲದೀಪ್ ಸಿಂಗ್ ಎಂಬ ಅಧಿಕಾರಿಯೊಬ್ಬರು ನನಗೆ ಸಮನ್ಸ್ ಕಳುಹಿಸಿಕೊಟ್ಟಿದ್ದಾರೆ. ಅದರಲ್ಲಿ ಯಾವುದಕ್ಕೆ, ಯಾವ ವಿಚಾರ ಎಂದು ಬರೆದಿಲ್ಲ.
ಕರ್ನಾಟಕದಲ್ಲಿ ಭಾರತ ಐಕ್ಯತಾ ಯಾತ್ರೆಯ ಸಮಯದಲ್ಲಿ ನಾನು ಹೊಂದಿರುವ ಜವಾಬ್ದಾರಿಗಳನ್ನು ಉಲ್ಲೇಖಿಸಿ ನಾನು ಇಡಿ ಮುಂದೆ ಹಾಜರಾಗಲು ಹೆಚ್ಚಿನ ಸಮಯ ಕೋರಿದ್ದೆ. ರಾಹುಲ್ ಗಾಂಧಿ ಅವರು ಆದಿ ಚುಂಚನಗಿರಿ ಮಠಕ್ಕೆ ಭೇಟಿ ನೀಡಿದಾಗ ಅವರೊಂದಿಗೆ ಇರಬೇಕೆಂದು ಬಯಸಿದ್ದೆ. ಆದರೆ ಕೇಂದ್ರ ಸರ್ಕಾರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ನಾನು ಕಾನೂನು ಪಾಲಿಸುವ ಪ್ರಜೆ. ಯಾತ್ರೆ ನಡೆಯುತ್ತಿರುವ ಸಮಯದಲ್ಲಿ ಇಡಿ ಅಧಿಕಾರಿಗಳು ನನ್ನನ್ನು ಏಕೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: 'ಇಡಿ ವಿಚಾರಣೆ ಎದುರಿಸುತ್ತೇನೆ, ಪಾದಯಾತ್ರೆ ಜನರದ್ದು, ನಾನೇ ಇರಬೇಕೆಂದೇನಿಲ್ಲ': ಡಿಕೆ ಶಿವಕುಮಾರ್
ಕುಲದೀಪ್ ಸಿಂಗ್ ನಮ್ಮನ್ನು ಕರೆಸಿದ ಅಧಿಕಾರಿ. ಅವರು ಯಂಗ್ ಇಂಡಿಯಾ ಮತ್ತು ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿ. ಅಲ್ಲದೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತಿತರರನ್ನು ಕರೆಸಿದ್ದರು ಎಂದು ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 23 ರ ನಂತರ ನನ್ನನ್ನು ಮತ್ತು ನನ್ನ ಸಹೋದರ ಡಿಕೆ ಸುರೇಶ್ ಇಬ್ಬರನ್ನೂ ಕರೆಯುವಂತೆ ನಾನು ಅವರಿಗೆ ವಿನಂತಿಸಿದೆ ಆದರೆ ಸಂಬಂಧಪಟ್ಟ ಅಧಿಕಾರಿಯು ಇಂದೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರು. ಹಾಗಾಗಿ ನಾವು ಯಾತ್ರೆಯನ್ನು ಮಧ್ಯದಲ್ಲಿ ಬಿಟ್ಟು ಇಲ್ಲಿಗೆ ಬಂದಿದ್ದೇವೆ ಎಂದರು.
ಯಾತ್ರೆಯಲ್ಲಿ ನಮಗೆ ಬಹಳಷ್ಟು ಜವಾಬ್ದಾರಿಗಳಿರುತ್ತವೆ. ಊಟ-ತಿಂಡಿ, ವ್ಯವಸ್ಥೆ, ಗಾಡಿಗಳು, ಕಾರ್ಯಕರ್ತರು ಬರುವವರು, ಹೋಗುವವರು ಅವರನ್ನೆಲ್ಲಾ ನೋಡಿಕೊಳ್ಳುವುದು, ನೀರು ಕೊಡುವುದು ಇತ್ಯಾದಿಗಳೆಲ್ಲ ಇರುವಾಗ ಇನ್ನಷ್ಟು ದಿನ ಕೇಳಿದ್ದೆವು, ಅದಕ್ಕೆ ನಿರಾಕರಿಸಿದರು, ಹಾಗಾಗಿ ಬಂದೆವು ಎಂದಿದ್ದಾರೆ.
ಸೋಲಾರ್ ಹಗರಣ: ಸೋಲಾರ್ ಹಗರಣದಲ್ಲಿ ಪದೇ ಪದೇ ನನ್ನ ಹೆಸರು ಕೇಳಿಬರುತ್ತಿದ್ದು, ಸಿಬಿಐ ಸೇರಿದಂತೆ ಯಾವ ತನಿಖೆ ಬೇಕಾದರೂ ಮಾಡಿಸಿ. ಕಳೆದ 3 ವರ್ಷಗಳಲ್ಲಿ ಯಾವ ತನಿಖೆಯೂ ಮಾಡಲಾಗಲಿಲ್ಲ. ರೈತರ ಹೆಸರಿನಲ್ಲಿರುವ ಸೋಲಾರ್ ಹಗರಣದಲ್ಲಿ ನಾನು ಭಾಗಿಯಾಗಿಲ್ಲ, ತನಿಖೆ ಮಾಡಿಸಿ ತಪ್ಪಿತಸ್ಥನಾಗಿದ್ದರೆ ಬೇಕಾದರೆ ನನ್ನನ್ನು ಗಲ್ಲಿಗೇರಿಸಲಿ ಎಂದು ಡಿ ಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.