ಕೊನೆಯಾಯ್ತು ಮುನಿಸಾಟ: ಭಿನ್ನಾಭಿಪ್ರಾಯ ಬದಿಗಿಟ್ಟು ರಾಹುಲ್ ಜೊತೆ 'ಕೈ' ಮುಖಂಡರ ಓಟ; ದೂರಾಗಿದ್ದ ಕಾಂಗ್ರೆಸ್ಸಿಗರ 'ಜೋಡೋ' ಯಾತ್ರೆ!

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆ ಭಾನುವಾರ 10 ನೇ ದಿನಕ್ಕೆ ಕಾಲಿಟ್ಟಿದೆ.  ಈ ಪಾದಯಾತ್ರೆ ಮುನಿಸಿಕೊಂಡಿದ್ದ ರಾಜ್ಯ ಕಾಂಗ್ರೆಸ್ ನಾಯಕರನ್ನು ಮತ್ತೆ ಜೋಡಿಸುತ್ತಿದೆ.
ಸೀತಾರಾಮ್, ಪರಮೇಶ್ವರ್ ಮತ್ತು ಮುನಿಯಪ್ಪ
ಸೀತಾರಾಮ್, ಪರಮೇಶ್ವರ್ ಮತ್ತು ಮುನಿಯಪ್ಪ

ಚಿಕ್ಕನಾಯಕನಹಳ್ಳಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆ ಭಾನುವಾರ 10 ನೇ ದಿನಕ್ಕೆ ಕಾಲಿಟ್ಟಿದೆ.  ಈ ಪಾದಯಾತ್ರೆ ಮುನಿಸಿಕೊಂಡಿದ್ದ ರಾಜ್ಯ ಕಾಂಗ್ರೆಸ್ ನಾಯಕರನ್ನು ಮತ್ತೆ ಜೋಡಿಸುತ್ತಿದೆ.

ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಮಾಜಿ ಸಚಿವ ಎಂಆರ್ ಸೀತಾರಾಂ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ವಿರುದ್ದ ಅಸಮಾಧಾನಗೊಂಡಿದ್ದರು.   ಪಕ್ಷ ತೊರೆಯಲು ಮುಂದಾಗಿದ್ದರು. ಇದನ್ನು ಬಂಡವಾಳ ಮಾಡಿಕೊಂಡ ಬಿಜೆಪಿ ಅವರನ್ನು ಪಕ್ಷಕ್ಕೆ ಕರೆ ತರಲು ಪ್ರಯತ್ನ ನಡೆಸಿತ್ತು. ಆದರೆ ಭಾರತ್ ಜೋಡೋ ಯಾತ್ರೆ ವೇಳೆ ಸೀತಾರಾಮ್ ಸಕ್ರಿಯವಾಗಿ ಪಾಲ್ಗೋಂಡಿದ್ದಾರೆ.

ಭಿನ್ನಾಭಿಪ್ರಾಯ ಹೊಂದಿರುವ ನಾಯಕರು ಒಗ್ಗೂಡಲು ಮತ್ತು ಕರ್ನಾಟಕದ ಜನರಿಗೆ ಸ್ಪಷ್ಟ ಸಂದೇಶವನ್ನು ರವಾನಿಸಲು ಯಾತ್ರೆ ಸಹಾಯ ಮಾಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್  ಒಪ್ಪಿಕೊಂಡಿದ್ದಾರೆ.

ಎಸ್‌ಸಿ ಎಡ ಮತ್ತು ಎಸ್ ಸಿ ಬಲ ಸಮುದಾಯಗಳನ್ನು ಪ್ರತಿನಿಧಿಸುವ ಮಾಜಿ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಮತ್ತು ಕೇಂದ್ರದ ಮಾಜಿ ಸಚಿವ ಕೆ ಎಚ್ ಮುನಿಯಪ್ಪ ಕೂಡ ಮುನಿಸು ಮರೆತು ಮತ್ತೆ ಕಾಂಗ್ರೆಸ್ ಪಾದಯಾತ್ರೆಯಲ್ಲಿ ಪಾಲ್ಗೋಂಡಿದ್ದಾರೆ.

ಮಾಜಿ ಸಚಿವ ಟಿ.ಬಿ.ಜಯಚಂದ್ರ ಸೇರಿದಂತೆ ಹಲವು ಮುಖಂಡರು ತಮ್ಮ ಆರೋಗ್ಯ ಹದಗೆಟ್ಟಿದ್ದರೂ ಯಾತ್ರೆಯಲ್ಲಿ ಪಾಲ್ಗೊಂಡು ಹೈಕಮಾಂಡ್‌ಗೆ  ಇಂಪ್ರೆಸ್ ಮಾಡಿದ್ದಾರೆ. ಯಾತ್ರೆಗೆ ಅಡ್ಡಿಪಡಿಸಿದ ಹುಬ್ಬಳ್ಳಿ-ಧಾರವಾಡದ ಯುವ ಕಾಂಗ್ರೆಸ್ ಮುಖಂಡ ಅಬ್ದುಲ್ ದೇಸಾಯಿ ಅವರನ್ನು ರಾಜ್ಯಾಧ್ಯಕ್ಷ ಮೊಹಮ್ಮದ್ ಹಾರಿಸ್ ನಲಪಾಡ್ ಅಮಾನತುಗೊಳಿಸಿದ್ದರು. ಆದರೆ ಭಾನುವಾರ ಅವರೂ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದರು.

ಯಾವುದೇ ನಾಯಕರು ಉದ್ದೇಶಪೂರ್ವಕವಾಗಿ ಯಾವುದೇ ಸೂಕ್ತ ಕಾರಣವಿಲ್ಲದೆ ತಪ್ಪಿಸಿಕೊಂಡರೆ, ನಾವು ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುತ್ತೇವೆ, ನಾವು ಯಾತ್ರೆಯ ಮೇಲೆ ನಿಗಾ ಇಡುತ್ತೇವೆ" ಎಂದು ಸ್ಪಷ್ಟಪಡಿಸಿದ ವೇಣುಗೋಪಾಲ್, ಮುಂಬರುವ ಚುನಾವಣೆಗೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿಗೆ ಯಾತ್ರೆ ಒಂದು ಅವಕಾಶವಾಗಿದೆ ಎಂದು ಸುಳಿವು ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com