ಪ್ರಧಾನಿ ಮೋದಿ ವಿಚಾರದಲ್ಲಿ ಹಗುರವಾಗಿ ಮಾತನಾಡುವವರಿಗೆ ಜನರಿಂದಲೇ ತಕ್ಕ ಉತ್ತರ: ಬಿಎಸ್ ಯಡಿಯೂರಪ್ಪ

ಕಳೆದ 8 ವರ್ಷದಲ್ಲಿ ಗರಿಷ್ಠ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ನರೇಂದ್ರ ಮೋದಿಜಿ ಅವರ ಬಗ್ಗೆ ಸೋನಿಯಾ ಮತ್ತು ರಾಹುಲ್ ಗಾಂಧಿಯವರು ಹಗುರವಾಗಿ ಮಾತನಾಡುತ್ತಿದ್ದಾರೆ. ಇಂಥ ಹಗುರ ಮಾತನ್ನಾಡಿದ ಕಾಂಗ್ರೆಸ್ ಮುಖಂಡರು ಮತ್ತು ಆ ಪಕ್ಷವನ್ನು ದೇಶದ ಜನರು ಕ್ಷಮಿಸುವುದಿಲ್ಲ.
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ

ಬೆಂಗಳೂರು: ಕಳೆದ 8 ವರ್ಷದಲ್ಲಿ ಗರಿಷ್ಠ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ ನರೇಂದ್ರ ಮೋದಿಜಿ ಅವರ ಬಗ್ಗೆ ಸೋನಿಯಾ ಮತ್ತು ರಾಹುಲ್ ಗಾಂಧಿಯವರು ಹಗುರವಾಗಿ ಮಾತನಾಡುತ್ತಿದ್ದಾರೆ. ಇಂಥ ಹಗುರ ಮಾತನ್ನಾಡಿದ ಕಾಂಗ್ರೆಸ್ ಮುಖಂಡರು ಮತ್ತು ಆ ಪಕ್ಷವನ್ನು ದೇಶದ ಜನರು ಕ್ಷಮಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ಎಚ್ಚರಿಸಿದರು.

ರಾಯಚೂರು ಜಿಲ್ಲೆಯ ಗಿಲ್ಲೇಸುಗೂರಿನಲ್ಲಿ ಇಂದು ಜನಸಂಕಲ್ಪ ಯಾತ್ರೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯರ ಸಿಎಂ ಕನಸು ನನಸಾಗುವುದಿಲ್ಲ. ಸಿದ್ದರಾಮಯ್ಯರಿಗೆ 75 ಲಕ್ಷದ ವಾಚ್ ಯಾರು ಕೊಟ್ಟರು? ಸುಮ್ಮನೇ ಕೊಟ್ಟರೇ? ಇದಕ್ಕೆ ಉತ್ತರಿಸಿ ಎಂದು ಸವಾಲೆಸೆದರು. ಅರ್ಕಾವತಿ ರೀಡೂ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ನಿವೇಶನಗಳನ್ನು ರಿಯಲ್ ಎಸ್ಟೇಟ್ ನವರಿಗೆ ಮಾರಾಟ ಮಾಡಿ ಅನುಕೂಲ ಮಾಡಿಕೊಂಡಿದ್ದರು ಎಂದು ಟೀಕಿಸಿದರು.

ಗಾಂಧಿ ಕುಟುಂಬದ ಹೆಸರಿನಿಂದ ಮೂರ್ನಾಲ್ಕು ತಲೆಮಾರಿಗೆ ಬೇಕಾದಷ್ಟು ಸಂಪತ್ತು ಗಳಿಸಿದ್ದೇವೆ; ಆ ಕುಟುಂಬದ ಋಣವನ್ನು ತೀರಿಸಬೇಕೆಂದು ಕಾಂಗ್ರೆಸ್ ಹಿರಿಯ ನಾಯಕ ರಮೇಶ್ ಕುಮಾರ್ ಹೇಳಿದ್ದಾರೆ. ಇದರ ಅರ್ಥ ಏನು? ಸ್ವಾತಂತ್ರ್ಯದ ಬಳಿಕ ಅಧಿಕಾರದಲ್ಲಿದ್ದ ಕಾಂಗ್ರೆಸ್ ಪಕ್ಷ ಸರಕಾರದ ಖಜಾನೆ ಲೂಟಿ ಮಾಡಿದ್ದನ್ನು ನೀವೇ ಹೇಳಿದ್ದೀರಲ್ಲವೇ? ರಮೇಶ್ ಕುಮಾರ್ ಮಾತನ್ನು ಪಾದಯಾತ್ರೆ ಮಾಡುವ ರಾಹುಲ್ ಗಾಂಧಿ ಅಥವಾ ಸೋನಿಯಾ ಗಾಂಧಿ ಯಾಕೆ ವಿರೋಧಿಸಿಲ್ಲ ಎಂದು ಕೇಳಿದರು.

ನೀವು ತೆರಿಗೆ ಹಣದ ಹಗಲುದರೋಡೆ ಮಾಡಿದ್ದಕ್ಕೆ ಇದು ಉದಾಹರಣೆ ಎಂದ ಅವರು, ಯುಪಿಎ ಅಧಿಕಾರ ಅವಧಿಯಲ್ಲಿ ನಿರಂತರ ಭ್ರಷ್ಟಾಚಾರದ ಹಗರಣಗಳು ನಡೆದಿವೆ ಎಂದು ತಿಳಿಸಿದರು. ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿಯವರು ಜಾಮೀನಿನಲ್ಲಿ ಹೊರಗಡೆ ಇದ್ದಾರೆ. ಎಂದು ತಿಳಿಸಿದರು.

ರಾಯಚೂರು ಜಿಲ್ಲೆಯಲ್ಲಿ 'ಏಮ್ಸ್'(ಆಲ್ ಇಂಡಿಯಾ ಮೆಡಿಕಲ್ ಸೈನ್ಸ್) ಸ್ಥಾಪನೆ ಕುರಿತು ಈಗಾಗಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆ ಮಾತನಾಡಿದ್ದು, ಆ ಬೇಡಿಕೆಯನ್ನು ಈಡೇರಿಸಲಾಗುವುದು ತಿಳಿಸಿದರು.

ಜಿಲ್ಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಅತಿ ಹೆಚ್ಚು ಬಿಜೆಪಿ ಶಾಸಕರನ್ನು ಗೆಲ್ಲಿಸಿ ಕೊಡಲು ಮನವಿ ಮಾಡಿದರು. ದೇಶದ ಶೇ 73 ಜನರು ನರೇಂದ್ರ ಮೋದಿಯವರ ಪರವಾಗಿ ಇರುವುದು ಸಮೀಕ್ಷೆಯಿಂದ ವ್ಯಕ್ತವಾಗಿದೆ. ಮೋದಿಜಿ ಅವರು ಪ್ರಪಂಚದ ಅಗ್ರಗಣ್ಯ ನಾಯಕರಾಗಿ ಹೊರಹೊಮ್ಮಿದ್ದಾರೆ ಎಂದು ವಿವರಿಸಿದರು.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ರಾಯರ ಮಠದ ಸುತ್ತ ಇರುವ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಬಿಜೆಪಿ, ಬೊಮ್ಮಾಯಿಯವರ ನೇತೃತ್ವದಲ್ಲಿ ಮುಂದಿನ ಬಾರಿ ಸ್ಪಷ್ಟ ಬಹುಮತ ಗಳಿಸಿ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಕೋವಿಡ್ ಉಚಿತ ಲಸಿಕೆ ನೀಡಲಾಗಿದೆ. ಅಲ್ಲದೆ 80 ಕೋಟಿ ಜನರಿಗೆ ಉಚಿತ ಪಡಿತರ ಕೊಡಲಾಗಿದೆ. ದೇಶ- ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಬಿಜೆಪಿ ಸರಕಾರಗಳು ಕಾರಣವಾಗಿವೆ. ಇದನ್ನು ಜನತೆ ಮರೆಯುವುದಿಲ್ಲ. ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸದಿಂದ ನುಡಿದರು.

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರು, ಶಾಸಕರು, ಜನಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com