ಗಣಿ ಜಿಲ್ಲೆಯತ್ತ ಹೊರಟ 'ಕೈ' ಪಡೆ: ಭಾರತ್ ಜೋಡೋ ಯಾತ್ರೆ ಸ್ವಾಗತಿಸಲು ಬಳ್ಳಾರಿ ಕಾಂಗ್ರೆಸ್ ಸಜ್ಜು
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆ ಬಳ್ಳಾರಿಯತ್ತ ಸಾಗಿದ್ದು, ಶುಕ್ರವಾರ ಸಂಜೆ ಜಿಲ್ಲಾ ಗಡಿಭಾಗದ ಹಲಕಿಂಡಿ ಗ್ರಾಮದಲ್ಲಿ ಸ್ವಾಗತಿಸಲು ಜಿಲ್ಲಾ ಕಾಂಗ್ರೆಸ್ ಘಟಕವು ಅಂತಿಮ ಸಿದ್ಧತೆಯಲ್ಲಿ ತೊಡಗಿದೆ.
Published: 14th October 2022 09:34 AM | Last Updated: 14th October 2022 01:14 PM | A+A A-

ಕಾಂಗ್ರೆಸ್ ನಾಯಕರ ಪಾದಯಾತ್ರೆ
ಬಳ್ಳಾರಿ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆ ಬಳ್ಳಾರಿಯತ್ತ ಸಾಗಿದ್ದು, ಶುಕ್ರವಾರ ಸಂಜೆ ಜಿಲ್ಲಾ ಗಡಿಭಾಗದ ಹಲಕಿಂಡಿ ಗ್ರಾಮದಲ್ಲಿ ಸ್ವಾಗತಿಸಲು ಜಿಲ್ಲಾ ಕಾಂಗ್ರೆಸ್ ಘಟಕವು ಅಂತಿಮ ಸಿದ್ಧತೆಯಲ್ಲಿ ತೊಡಗಿದೆ.
ರಾತ್ರಿ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಶನಿವಾರ ಬೆಳಗ್ಗೆ ಬಳ್ಳಾರಿ ನಗರಕ್ಕೆ ಆಗಮಿಸಿ ಪಾದಯಾತ್ರೆ ಆರಂಭಿಸಲಿದ್ದಾರೆ. ಬಳ್ಳಾರಿಯ ಮುನ್ಸಿಪಲ್ ಕಾಲೇಜು ಆವರಣದಲ್ಲಿ ಬೃಹತ್ ಸಮಾವೇಶ ನಡೆಯಲಿದೆ.ಜಿಲ್ಲೆಯಾದ್ಯಂತ ಸಾಗುವ ಜಾಥಾವನ್ನು ಯಶಸ್ವಿಗೊಳಿಸಲು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಸಿದ್ದರಾಗಿದ್ದಾರೆ.
ಭಾರತ್ ಜೋಡೋ ಯಾತ್ರೆಯ ಸಮಾವೇಶಕ್ಕೆ ಸುಮಾರು 3-4 ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮೇಲಾಗಿ ಬಳ್ಳಾರಿಯ ಜನ ಸೋನಿಯಾ ಗಾಂಧಿಯವರೊಂದಿಗೆ ವಿಶೇಷ ಸಂಬಂಧವನ್ನು ಹೊಂದಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿ ಭಾರತ್ ಜೋಡೋ ಪಾದಯಾತ್ರೆ: ಮೆಚ್ಚಿನ ನಾಯಕನ ಜೊತೆ ಬೆಂಬಲಿಗರ ದಣಿವರಿಯದ ಯಾತ್ರೆ!
ಎಐಸಿಸಿ ಅಧ್ಯಕ್ಷೆ ಸೋನಿಯಾ ಅವರು 1999 ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ವಿರುದ್ಧ ಬಳ್ಳಾರಿಯಿಂದ ಸ್ಪರ್ಧಿಸಿ, ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು. ಹೀಗಾಗಿ ಪಕ್ಷವು ಆ ಸಂಭ್ರವನ್ನು ಸ್ಮರಿಸಲು ಮತ್ತು ರಾಹುಲ್ ಗಾಂಧಿಗೆ ಭವ್ಯವಾದ ಸ್ವಾಗತ ನೀಡಲು ತಯಾರಿ ನಡೆಸಿದ್ದಾರೆ.
ಕರ್ನಾಟಕದ ಬಿಜೆಪಿಯಲ್ಲಿ ನಾಯಕರೇ ಇಲ್ಲ. ಯಡಿಯೂರಪ್ಪರನ್ನು ಬಿಟ್ಟು ಪ್ರಚಾರಕ್ಕೆ ಹೋಗಲು ಅವರಿಗೆ ಸಾಧ್ಯವಾಗುತ್ತಿಲ್ಲ. ಅವರು ಕಾಂಗ್ರೆಸ್‌ನ ಬಗ್ಗೆ ಮಾತನಾಡುತ್ತಾರೆ ಎಂದು ವಿಪಕ್ಷದ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕರನ್ನು ಛೇಡಿಸಿದ್ದಾರೆ. ಗುರುವಾರ ಭಾರತ ಐಕ್ಯತಾ ಯಾತ್ರೆ ಪ್ರಾರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ,"ಬಿಜೆಪಿಯವರು ಕಾಂಗ್ರೆಸ್‌ನಲ್ಲಿ ಭಿನ್ನಮತವಿದೆ ಎಂದು ಅಪ ಪ್ರಚಾರ ಮಾಡುತ್ತಾ ಜನರ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.