ಭಾರತ್ ಜೋಡೋ ಯಾತ್ರೆ ಫ್ಲಾಪ್ ಶೋ, ರಾಹುಲ್ ಗಾಂಧಿಗೆ ಮಾರ್ನಿಂಗ್ ವಾಕ್ ಅಷ್ಟೇ: ಕುಟುಕಿದ ಅರುಣ್ ಸಿಂಗ್

ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯು ರಾಹುಲ್ ಗಾಂಧಿಗೆ ಬೆಳಗಿನ ನಡಿಗೆಯಲ್ಲದೆ ಬೇರೇನೂ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಭಾನುವಾರ ಟೀಕಿಸಿದ್ದಾರೆ.
ಅರುಣ್ ಸಿಂಗ್
ಅರುಣ್ ಸಿಂಗ್

ಬೆಳಗಾವಿ: ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆಯು ರಾಹುಲ್ ಗಾಂಧಿಗೆ ಬೆಳಗಿನ ನಡಿಗೆಯಲ್ಲದೆ ಬೇರೇನೂ ಅಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್ ಭಾನುವಾರ ಟೀಕಿಸಿದ್ದಾರೆ.

ಬೆಳಗಾವಿಯ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, ಕಳೆದ 13 ದಿನಗಳಲ್ಲಿ, ರಾಹುಲ್ ಗಾಂಧಿ ಕರ್ನಾಟಕದ ಸಂಸ್ಕೃತಿ, ಸಂಪನ್ಮೂಲಗಳು ಮತ್ತು ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ, ಆದರೆ ಸರ್ಕಾರವನ್ನು ದೂರುತ್ತಾ ತಮ್ಮ ದಿನಗಳನ್ನು ಕಳೆದರು ಎಂದು ಆರೋಪಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಫ್ಲಾಪ್ ಶೋ, ಭಾರತ್ ಜೋಡೊ ಯಾತ್ರೆಯಿಂದ ದೇಶಕ್ಕಾಗಲಿ ಅಥವಾ ಜನತೆಗಾಗಲಿ ನಯಾಪೈಸೆಯ ಲಾಭವಿಲ್ಲ.

ಇದು ರಾಹುಲ್ ಗಾಂಧಿ ನಡೆಸುತ್ತಿರುವ ಮುಂಜಾನೆ ಮತ್ತು ಸಂಜೆಯ ವಾಕಿಂಗ್ ಆಗಿದೆ ಎಂದು ವ್ಯಂಗ್ಯವಾಡಿದರು. ಪರಸ್ಪರ ದೂರವಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಒಂದುಗೂಡಿಸುವ ಯಾತ್ರೆ ಇದಾಗಿದೆ. ಅವರಿಬ್ಬರನ್ನು ಒಂದುಗೂಡಿಸುವಲ್ಲಿ ರಾಹುಲ್ ಗಾಂಧಿ ಸಾಕಾಗಿದ್ದಾರೆ. ಸ್ವತಃ ಕಾಂಗ್ರೆಸ್ ಪಕ್ಷದವರಿಗೂ ಈ ಯಾತ್ರೆ ಬೇಡವಾಗಿದೆ. ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ನಡೆಸುತ್ತಿರುವ ಹೋರಾಟ ಎಂದು ಅರುಣ್ ಸಿಂಗ್ ಆರೋಪಿಸಿದರು.

ನಾವು ಭಾರತ ಜೋಡೋ ಯಾತ್ರೆಗೆ ತಲೆಕೆಡಿಸಿಕೊಂಡಿಲ್ಲ.ಜನ ಸಂಕಲ್ಪ ಯಾತ್ರೆಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಯಾತ್ರೆ ನಡೆಯಲಿದೆ ಎಂದು ಹೇಳಿದರು.

ನಾವು ಈಗಾಗಲೇ ಗೋವಾ, ಯುಪಿ, ಉತ್ತರಾಖಂಡದಲ್ಲಿ ಚುನಾವಣೆ ಗೆದ್ದಿರುವಂತೆ ಈಗ ಹಿಮಾಚಲ ಪ್ರದೇಶ ಮತ್ತು ಗುಜರಾತ್‌ನಲ್ಲಿಯೂ ಗೆಲ್ಲುವ ವಿಶ್ವಾಸವಿದೆ. ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯದಿಂದ ಜನರು ಸಂತಸಗೊಂಡಿದ್ದಾರೆ ಎಂದು ಅವರು ಹೇಳಿದರು. ಇದಕ್ಕೂ ಮುನ್ನ ಮಾಜಿ ಸಚಿವ ಹಾಗೂ ಗೋಕಾಕ್ ಶಾಸಕ ರಮೇಶ ಜಾರಕಿಹೊಳಿ ಅವರೊಂದಿಗೆ ಅರುಣ್ ಸಿಂಗ್ ಗೌಪ್ಯ ಸಭೆ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com