ಎಷ್ಟು ಮಂದಿ ಅಹಿಂದ ಮತದಾರರು ತಮ್ಮೊಂದಿಗಿದ್ದಾರೆ ಎಂದು ಸಿದ್ದರಾಮಯ್ಯ ಆತ್ಮಾವಲೋಕನ ಮಾಡಿಕೊಳ್ಳಲಿ: ಸಿಎಂ ಬೊಮ್ಮಾಯಿ
ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ವಿರುದ್ಧ ಇಲ್ಲ ಎಂದು ಬೊಮ್ಮಾಯಿ ಹೇಳಿದರು. ತಮ್ಮ ಸರ್ಕಾರ ಎಸ್‌ಸಿ/ಎಸ್‌ಟಿ ಮೀಸಲಾತಿಯನ್ನು ಹೆಚ್ಚಿಸುತ್ತಿರುವುದಾಗಿ ತಿಳಿಸಿದರು.
Published: 20th October 2022 11:21 AM | Last Updated: 20th October 2022 01:45 PM | A+A A-

ಬಸವರಾಜ ಬೊಮ್ಮಾಯಿ
ಕಲಬುರಗಿ: ಸಿದ್ದರಾಮಯ್ಯ ಅವರು ತಮ್ಮನ್ನು ಅಹಿಂದ ನಾಯಕ ಎಂದು ಕರೆದುಕೊಳ್ಳುತ್ತಾರೆ, ಅಹಿಂದ ಮತದಾರರು ಹಿಂದುಳಿದ (ಹಿಂದುಳಿದ) ಮತ್ತು ದಲಿತ ಮತದಾರರು ಅವರ ಜೊತೆಗಿದ್ದಾರೆ ಎಂಬುದನ್ನು ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕಲಬುರಗಿ ಜಿಲ್ಲೆ ಕಮಲಾಪುರ ತಾಲ್ಲೂಕಿನ ಮಹಾಗಾಂವನಲ್ಲಿ ಬುಧವಾರ ನಡೆದ ಜನಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರು ಕೂಡ ಕಾಂಗ್ರೆಸ್ ಮೇಲಿನ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ, ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರ ವಿರುದ್ಧ ಇಲ್ಲ ಎಂದು ಬೊಮ್ಮಾಯಿ ಹೇಳಿದರು. ತಮ್ಮ ಸರ್ಕಾರ ಎಸ್‌ಸಿ/ಎಸ್‌ಟಿ ಮೀಸಲಾತಿಯನ್ನು ಹೆಚ್ಚಿಸುತ್ತಿರುವುದಾಗಿ ತಿಳಿಸಿದರು. ದಲಿತರ ಪರವಾಗಿ ಹೋರಾಡುವುದಾಗಿ ಹೇಳಿಕೊಳ್ಳುವ ಕಾಂಗ್ರೆಸ್ ತನ್ನ ಆಡಳಿತದಲ್ಲಿ ಕೋಟಾವನ್ನು ಹೆಚ್ಚಿಸಲು ವಿಫಲವಾಗಿದೆ ಎಂದು ಆರೋಪಿಸಿದರರು.
ವಕ್ಫ್ ಮಂಡಳಿಗೆ ಸೇರಿದ್ದ ಸಾವಿರಾರು ಎಕರೆ ಆಸ್ತಿಯನ್ನು ಕಾಂಗ್ರೆಸ್ ನಾಯಕರು ನುಂಗಿದ್ದು, ಆಸ್ತಿ ಕಬಳಿಕೆ ಆರೋಪ ಕುರಿತು ಅನ್ವರ್ ಮಾಣಿಪ್ಪಾಡಿ ಆಯೋಗ ಸಲ್ಲಿಸಿದ ವರದಿಯಂತೆ ಶೀಘ್ರವೇ ತನಿಖೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಬೆಂಗಳೂರು, ಕಲಬುರಗಿ ಸೇರಿ ರಾಜ್ಯದ ಹಲವೆಡೆ ವಕ್ಫ್ ಆಸ್ತಿಯನ್ನು ಕಾಂಗ್ರೆಸ್ ನಾಯಕರು ತಮ್ಮ ಹಾಗೂ ತಮ್ಮ ಸಹೋದರರ ಹೆಸರಿಗೆ ಮಾಡಿಕೊಂಡಿದ್ದಾರೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.
ಇದನ್ನೂ ಓದಿ: ಈಗಿನ ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಅಲ್ಲ: ಸಿಎಂ ಬೊಮ್ಮಾಯಿಗೆ ನೆನಪಿಸಿದ ಸಿದ್ದು!
ಅಲ್ಪಸಂಖ್ಯಾತರ ಬಲದಿಂದ ಕಾಂಗ್ರೆಸ್ ಪಕ್ಷ ಬೀಗುತ್ತಿದೆ. ವಕ್ಫ್ ಹಗರಣದ ತನಿಖೆ ನಡೆದರೆ ಕೈ ಹಿಡಿದಿರುವ ಅಲ್ಪಸಂಖ್ಯಾತ ಸಮುದಾಯ ಸಹ ಆ ಪಕ್ಷದಿಂದ ದೂರವಾಗೋದು ನಿಶ್ಚಿತ ಎಂದು ಹೇಳಿದರು.
ರಾಜ್ಯದಲ್ಲಿ ಸಾವಿರಾರು ಕೋಟಿ ರು. ವಕ್ಫ್ ಆಸ್ತಿಯನ್ನು ಕಾಂಗ್ರೆಸ್ ನಾಯಕರು ನುಂಗಿ ನೀರು ಕುಡಿದಿದ್ದಾರೆ. ಈ ಕುರಿತು ಅನ್ವರ್ ಮಾಣಿಪ್ಪಾಡಿ ಹಾಗೂ ಉಪಲೋಕಾಯುಕ್ತರ ತನಿಖಾ ವರದಿಗಳೆರಡೂ ಸರ್ಕಾರದ ಬಳಿ ಇವೆ. ಈ ಬಗ್ಗೆ ತನಿಖೆ ನಡೆಸಿದರೆ ಕಾಂಗ್ರೆಸ್‌ನ ಕೈಹಿಡಿದಿರುವ ಅಲ್ಪಸಂಖ್ಯಾತ ಸಮುದಾಯ ಆ ಪಕ್ಷದಿಂದ ದೂರವಾಗುವುದು ನಿಶ್ಚಿತ ಅಂತ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕಲ್ಯಾಣ ಕರ್ನಾಟಕಕ್ಕೆ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ‍್ಪ 1,500 ಕೋಟಿ ಕೊಟ್ಟಿದ್ದಾರೆ. ನಾನು 3,000 ಕೋಟಿ. ರು ಕೊಟ್ಟಿದ್ದೇವೆ. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಕ್ರಿಯಾ ಯೋಜನೆ ಆಗುತ್ತಿರಲಿಲ್ಲ. ಉಳಿದಿರುವ ಬಾಕಿ ಹಣ ಕೊಡುತ್ತೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 2,000 ಸಾವಿರ ಶಾಲಾ ಕೊಠಡಿಗಳ ನಿರ್ಮಾಣ ಮಾಡುತ್ತೇವೆ’ ಎಂದರು. ಕಲಬುರಗಿಯಲ್ಲಿ 5 ಮೆಗಾ ಹಾಸ್ಟೆಲ್ ನಿರ್ಮಿಸಿ 2000 ಮಕ್ಕಳಿಗೆ ಸೌಲಭ್ಯ ಕಲ್ಪಿಸುತ್ತೇವೆ. ನಮ್ಮ ಸರ್ಕಾರ ದೂರದೃಷ್ಟಿಯುಳ್ಳ ಸರ್ಕಾರ. ರಾಜ್ಯದ ಸಮಗ್ರ ಕಲ್ಪನೆ ಇದೆ ಎಂದರು.