ಜಿಟಿಡಿ-ದೇವೇಗೌಡ ಸಂಧಾನ ಯಶಸ್ವಿ: ಜೆಡಿಎಸ್ ಕಾರ್ಯಕರ್ತರಿಗೆ ನಿರಾಳ, ಕೆಲವರಿಗೆ ಕಹಿ!
ಅತೃಪ್ತ ಶಾಸಕ ಜಿ,ಟಿ.ದೇವೇಗೌಡ ಜೊತೆಗೆ ಪಕ್ಷದ ವರಿಷ್ಠ ದೇವೇಗೌಡ ಅವರು ಮಾಡಿದ ಸಂಧಾನ ಮಾತುಕತೆ ಯಶಸ್ವಿಯಾಗಿದ್ದು, ಇದೀಗ ಜಿ.ಟಿ.ದೇವೇಗೌಡ ಅವರು ಪಕ್ಷದಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ. ಈ ಬೆಳವಳಿಗೆಯು ಪಕ್ಷದ ಪ್ರಮುಖ ನಾಯಕರಿಗೆ ನಿರಾಳವನ್ನು ತಂದಿದ್ದರೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರಿಗೆ ಕಹಿಯಾಗಿ ಪರಿಣಮಿಸಿದೆ.
Published: 26th October 2022 11:39 AM | Last Updated: 27th October 2022 01:00 PM | A+A A-

ಜಿಟಿ ದೇವೇಗೌಡ ಹಾಗೂ ಹೆಚ್.ಡಿ.ದೇವೇಗೌಡ
ಮೈಸೂರು: ಅತೃಪ್ತ ಶಾಸಕ ಜಿ.ಟಿ.ದೇವೇಗೌಡ ಜೊತೆಗೆ ಪಕ್ಷದ ವರಿಷ್ಠ ದೇವೇಗೌಡ ಅವರು ಮಾಡಿದ ಸಂಧಾನ ಮಾತುಕತೆ ಯಶಸ್ವಿಯಾಗಿದ್ದು, ಇದೀಗ ಜಿ.ಟಿ.ದೇವೇಗೌಡ ಅವರು ಪಕ್ಷದಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ. ಈ ಬೆಳವಳಿಗೆಯು ಪಕ್ಷದ ಪ್ರಮುಖ ನಾಯಕರಿಗೆ ನಿರಾಳವನ್ನು ತಂದಿದ್ದರೆ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರಿಗೆ ಕಹಿಯಾಗಿ ಪರಿಣಮಿಸಿದೆ.
ಪಕ್ಷವನ್ನು ತೊರೆಯಲು ನಿರ್ಧರಿಸಿದ್ದ ಜಿ.ಟಿ.ದೇವೇಗೌಡ ಅವರು ಈ ಹಿಂದೆ ಪಕ್ಷದ ವಿರುದ್ದ ಮಾತನಾಡಿ, ಅವಮಾನ ಮಾಡಿದ್ದರು. ಈ ಅವಮಾನವನ್ನು ಕಾರ್ಯಕರ್ತರು ಮರೆತಿಲ್ಲ. ಅಷ್ಟರಲ್ಲೇ ದೇವೇಗೌಡ ಅವರ ಸಂಧಾನ ಯಶಸ್ವಿಯಾಗಿದ್ದು, ಈ ಬೆಳವಣಿಗೆ ಕಾರ್ಯಕರ್ತರಲ್ಲಿ ಇರಿಸುಮುನಿಸು ಮೂಡಿಸಿದೆ.
ಕಳೆದ ಮೂರು ವರ್ಷಗಳಿಂದ ಎಚ್.ಡಿ.ಕುಮಾರಸ್ವಾಮಿ ಹಾಗೂ ಜಿಟಿ ದೇವೇಗೌಡ ನಡುವಿನ ವೈಮನಸ್ಸು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಜೆಡಿಎಸ್ ವಿರುದ್ಧ ಜಿಟಿಡಿ ಬಹಿರಂಗವಾಗಿಯೇ ಬಂಡಾಯವೆದ್ದಿದ್ದರು. ಪರಿಷತ್ ಚುನಾವಣೆಯಲ್ಲೂ ಜೆಡಿಎಸ್ ಅಭ್ಯರ್ಥಿ ಮಂಜೇಗೌಡರ ವಿರುದ್ಧ ಪ್ರಚಾರ ಮಾಡಿದ್ದರು, ಅಲ್ಲದೆ, ಜೆಡಿಎಸ್ ತೊರೆಯುವುದಾಗಿ ಹೇಳಿದ್ದ ಅವರು ಕಾಂಗ್ರೆಸ್ ಅಥವಾ ಬಿಜೆಪಿಯಲ್ಲಿ ಸೇರ್ಪಡೆ ಕುರಿತು ಚಿಂತನೆ ನಡೆಸಿದ್ದರು.
ಇದನ್ನೂ ಓದಿ: ಜಿಟಿ ದೇವೇಗೌಡಗೆ ಮೈಸೂರು ಉಸ್ತುವಾರಿ, ಹುಣಸೂರಿನಿಂದ ಪುತ್ರ ಹರೀಶ್‌ಗೌಡಗೆ ಜೆಡಿಎಸ್ ಟಿಕೆಟ್
ಇದಾದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಕಾರ್ಯಕ್ರಮವೊಂದರಲ್ಲಿ ವೇದಿಕೆ ಹಂಚಿಕೊಂಡಿದ್ದರು. 2023ರ ವಿಧಾನಸಭೆ ಚುನಾವಣೆಯಲ್ಲಿ ಜಿಟಿ ದೇವೇಗೌಡ ಅವರು ಕಾಂಗ್ರೆಸ್ ಅಥವಾ ಬಿಜೆಪಿಯಿಂದ ಸ್ಪರ್ಧೆಗಿಳಿಯುವುದು ಖಚಿತವಾಗುತ್ತಿದ್ದಂತೆಯೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿಟಿಡಿ ಸೋಲಿಸುವ ಏಕ ಮನಸ್ಸಿನ ಗುರಿಯೊಂದಿಗೆ ಕೆಲಸ ಮಾಡಲು ಸ್ಥಳೀಯ ನಾಯಕರಿಗೆ ಜೆಡಿಎಸ್ ಉನ್ನತ ನಾಯಕತ್ವ ಸೂಚಿಸಿತ್ತು. ಈ ನಿಟ್ಟಿನಲ್ಲಿ ಕಾರ್ಯತಂತ್ರಗಳು ಆರಂಭವಾಗುತ್ತಿದ್ದಂತೆಯೇ ಇತ್ತ ದೇವೇಗೌಡ ಅವರ ಸಂಧಾನ ಮಾತುಕತೆ ಯಶಸ್ವಿಯಾಗಿರುವುದು, ಕಾರ್ಯಕರ್ತರಲ್ಲಿ ಬೇಸರವನ್ನು ತರಿಸಿದೆ. ಪಕ್ಷದ ಈ ನಿರ್ಧಾರಕ್ಕೆ ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಹುಣಸೂರಿನಿಂದ ಸ್ಪರ್ಧಿಸಲು ಬಯಸಿರುವ ತಮ್ಮ ಪುತ್ರ ಹರೀಶ್ ಗೌಡ ಹಾಗೂ ತಮಗೆ ಟಿಕೆಟ್ ನೀಡುವ ಭರವಸೆಯನ್ನು ದೇವೇಗೌಡ ಅವರು ನೀಡಿರುವುದು ಜಿಟಿಡಿಗೆ ಸಂತಸವನ್ನು ತಂದಿದೆ. ಆದರೆ, ಈ ಎರಡೂ ಕ್ಷೇತ್ರಗಳಲ್ಲಿ ತೀವ್ರ ಪೈಪೋಟಿ ಎದುರಿಸಬೇಕಾಗಿದೆ.
ಎ.ಎಚ್.ವಿಶ್ವನಾಥ್ ರಾಜೀನಾಮೆ ನೀಡಿದ ಬಳಿಕ ಉಪಚುನಾವಣೆ ವೇಳೆ ಅಪ್ಪ-ಮಗ ಇಬ್ಬರೂ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿದ್ದಕ್ಕೆ ಹುಣಸೂರಿನ ಜೆಡಿಎಸ್ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ.
ಇದನ್ನೂ ಓದಿ: ದೊಡ್ಡಗೌಡರ ಸಂಧಾನ ಯಶಸ್ವಿ; ದಯವಿಟ್ಟು ಕ್ಷಮಿಸಿ, ನಾನು ಜೆಡಿಎಸ್ ಬಿಡಲ್ಲ ಎಂದ ಜಿಟಿ ದೇವೇಗೌಡ
ಈ ನಡುವೆ ಸಾ.ರಾ.ಮಹೇಶ್, ಎಂ.ಎಲ್.ಸಿ ಮಂಜೇಗೌಡ ಮತ್ತಿತರರೆ ಮುಖಂಡರು ಗುಂಪುಗಾರಿಕೆ ಬಿಟ್ಟು ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡಬೇಕು ಎಂದು ಉನ್ನತ ನಾಯಕರು ಸೂಚಿಸಿದ್ದಾರೆಂದು ತಿಳಿದುಬಂದಿದೆ. ಆದರೆ, ಜೆಡಿಎಸ್ ಮುಖಂಡರಾದ ಸಿದ್ದೇಗೌಡ, ಶಿವಮೂರ್ತಿ, ಬೀರೇಹುಂಡಿ ಬಸವಣ್ಣ, ಮಾಜಿ ಜಿಪಂ ಸದಸ್ಯ ಮಾದೇಗೌಡ ಅವರು ಜಿಟಿಡಿ ವಿರೋಧಿಗಳಿಗೆ ಬಲ ತುಂಬಲು ಎಲ್ಲಾ ಬೂತ್‌ಗಳಿಂದ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಲು ಯೋಜಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಕ್ಷದಲ್ಲಾಗುತ್ತಿರುವ ಈ ಬೆಳವಣಿಗೆಯನ್ನು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಈ ಬೆಳವಣಿಗೆ ನಡುವೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲು ಜಿಟಿಡಿ ಮೇಲೆ ಭಾರ ಹಾಕಲು ಸಿದ್ಧವಿದ್ದ ಬಿಜೆಪಿಗೆ ಬೇಸರ ತರಿಸಿದೆ.