ಫಲಿಸದ ಕಾಂಗ್ರೆಸ್ ತಂತ್ರ: ಮೈಸೂರು ಗದ್ದುಗೆ ಬಿಜೆಪಿ ಪಾಲಿಗೆ; ಮೇಯರ್ ಆಗಿ ಶಿವಕುಮಾರ್ ಆಯ್ಕೆ, ಜೆಡಿಎಸ್ ಗೆ ಮುಖಭಂಗ

ಹಲವು ದಿನಗಳಿಂದ ಕುತೂಹಲ ಕೆರಳಿಸಿದ್ದ ಮೈಸೂರು ಮೇಯರ್ ಚುನಾವಣೆ ಕೊನೆಗೂ ನಡೆದಿದೆ. ರಾಜಕೀಯ ಜಿದ್ದಾಜಿದ್ದಿನ ಬಳಿಕ ಮೈಸೂರು ಮೇಯರ್ ಪಟ್ಟ ಬಿಜೆಪಿಗೆ ದಕ್ಕಿದೆ.
ಜಿ.ರೂಪಾ - ಶಿವಕುಮಾರ್
ಜಿ.ರೂಪಾ - ಶಿವಕುಮಾರ್

ಮೈಸೂರು: ಹಲವು ದಿನಗಳಿಂದ ಕುತೂಹಲ ಕೆರಳಿಸಿದ್ದ ಮೈಸೂರು ಮೇಯರ್ ಚುನಾವಣೆ ಕೊನೆಗೂ ನಡೆದಿದೆ. ರಾಜಕೀಯ ಜಿದ್ದಾಜಿದ್ದಿನ ಬಳಿಕ ಮೈಸೂರು ಮೇಯರ್ ಪಟ್ಟ ಬಿಜೆಪಿಗೆ ದಕ್ಕಿದೆ.

ಮೇಯರ್ ಚುನಾವಣೆಯಲ್ಲಿ 47 ನೇ ವಾರ್ಡ್ ಸದಸ್ಯ ಬಿಜೆಪಿಯ ಶಿವಕುಮಾರ್ ಆಯ್ಕೆಯಾದರು. ಮೈಸೂರು ಮಹಾನಗರಪಾಲಿಕೆಯಲ್ಲಿ ಬಿಜೆಪಿ-ಜೆಡಿಎಸ್ ಅಧಿಕೃತವಾಗಿ ಮೈತ್ರಿ ಮಾಡಿಕೊಂಡಿದೆ. ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಜೆಡಿಎಸ್ ಅಭ್ಯರ್ಥಿ ಕೆ.ವಿ.ಶ್ರೀಧರ್ ನಾಮಪತ್ರ ವಾಪಸ್ ಪಡೆದಿದ್ದರಿಂದ ಬಿಜೆಪಿ- ಕಾಂಗ್ರೆಸ್ ನಡುವೆ ಹಣಾಹಣಿ ಏರ್ಪಟ್ಟಿತ್ತು.

ಕಾಂಗ್ರೆಸ್ ಅಭ್ಯರ್ಥಿ ಸೈಯದ್ ಹಸರತ್‌ಉಲ್ಲಾ 28 ಮತಗಳನ್ನು ಗಳಿಸಿದರು. ಬಿಜೆಪಿಯ ಶಿವಕುಮಾರ್ 47 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು.

ಮಹಾನಗರಪಾಲಿಕೆ ಮೇಯರ್-ಉಪ ಮೇಯರ್ ಚುನಾವಣೆಯಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೂ ಉಪ ಮೇಯರ್ ಸ್ಥಾನ ಪಡೆಯಲಾಗದೆ ಜೆಡಿಎಸ್ ಮುಖಭಂಗ ಅನುಭವಿಸಿತು.

ಜೆಡಿಎಸ್ ಅಭ್ಯರ್ಥಿ ರೇಷ್ಮಾ ಭಾನು ನಾಮಪತ್ರ ತಿರಸ್ಕೃತವಾಯಿತು. ರೇಷ್ಮಾ ಅವರು ಸಾಮಾನ್ಯ ಕ್ಷೇತ್ರದಿಂದ ಗೆದ್ದಿದ್ದಾರೆ. ಉಪ ಮೇಯರ್ ಸ್ಥಾನವು ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದೆ. ಆ ಜಾತಿ ಪ್ರಮಾಣಪತ್ರ ನೀಡದಿದ್ದರಿಂದ ನಾಮಪತ್ರವನ್ನು ಕ್ರಮಬದ್ಧವಾಗಿಲ್ಲ ಎಂದು ತಿರಸ್ಕರಿಸಲಾಗಿದೆ ಎಂದು ಚುನಾವಣಾಧಿಕಾರಿ ಪ್ರಕಾಶ್ ತಿಳಿಸಿದರು. ಇದರಿಂದ ಜೆಡಿಎಸ್ ಆಘಾತ ಅನುಭವಿಸಬೇಕಾಯಿತು.

ಜೆಡಿಎಸ್ ಬಂಡಾಯ ಅಭ್ಯರ್ಥಿ ನಿರ್ಮಲಾ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿದ್ದರಿಂದ ಅವರು, 27 ಮತಗಳನ್ನು ಪಡೆದರು. ಬಿಜೆಪಿಯ ಜಿ.ರೂಪಾ 45 ಮತಗಳನ್ನು ಗಳಿಸಿ ಉಪ ಮೇಯರ್ ಆಗಿ ಗೆಲುವು ಸಾಧಿಸಿದರು.‌

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com