ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕನಸುಗಾರ ಉಮೇಶ್ ಕತ್ತಿ: ಅರ್ಧಕ್ಕೆ ನಿಂತ ಅವಿರತ ಹೋರಾಟ; ಸ್ಪರ್ಧಿಸಿದ್ದ 9 ಚುನಾವಣೆಗಳಲ್ಲಿ 8 ಬಾರಿ ಗೆಲುವು!

ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಅರಣ್ಯ ಸಚಿವ, ಹಿರಿಯ ರಾಜಕಾರಣಿ ಉಮೇಶ ಕತ್ತಿ ಅವರು ಸ್ಪರ್ಧಿಸಿದ್ದ ಒಂಬತ್ತು ಚುನಾವಣೆಗಳಲ್ಲಿ ಎಂಟರಲ್ಲಿ ಗೆದ್ದು ರಾಜ್ಯ ರಾಜಕಾರಣದಲ್ಲಿ ದಾಖಲೆ ನಿರ್ಮಿಸಿದ್ದರು.
ಉಮೇಶ್ ಕತ್ತಿ
ಉಮೇಶ್ ಕತ್ತಿ

ಬೆಳಗಾವಿ: ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಅರಣ್ಯ ಸಚಿವ, ಹಿರಿಯ ರಾಜಕಾರಣಿ ಉಮೇಶ ಕತ್ತಿ ಅವರು ಸ್ಪರ್ಧಿಸಿದ್ದ ಒಂಬತ್ತು ಚುನಾವಣೆಗಳಲ್ಲಿ ಎಂಟರಲ್ಲಿ ಗೆದ್ದು ರಾಜ್ಯ ರಾಜಕಾರಣದಲ್ಲಿ ದಾಖಲೆ ನಿರ್ಮಿಸಿದ್ದರು. ಕಳೆದ ಒಂದು ದಶಕದಿಂದ, ಕತ್ತಿ ಅವರು ಹೊಸ ಉತ್ತರ ಕರ್ನಾಟಕ ರಾಜ್ಯ ರಚನೆಗೆ ಪಟ್ಟುಬಿಡದೆ ಒತ್ತಾಯಿಸುತ್ತಿದ್ದರು.

ನಾಲ್ಕು ದಶಕಗಳ ಕಾಲದ ತಮ್ಮ ರಾಜಕೀಯ ಜೀವನದಲ್ಲಿ ತಾವು ಪ್ರತಿನಿಧಿಸಿದ್ದ ಜೆಡಿಯು, ಜೆಡಿಎಸ್ ಮತ್ತು ಬಿಜೆಪಿ ಎಚ್ಚರಿಕೆ ನೀಡಿದರೂ, ಕತ್ತಿ ಅವರು ತಮ್ಮ ಬೇಡಿಕೆಗೆ ದೃಢವಾಗಿ ನಿಂತರು. ಪದೇ ಪದೇ ವಿಷಯವನ್ನು ಪ್ರಸ್ತಾಪಿಸಿದರು. ಉತ್ತರ ಕರ್ನಾಟಕದ ಪ್ರಬಲ ಲಿಂಗಾಯತ ಸಮುದಾಯದಿಂದ ಅವರು ಗಳಿಸಿದ ಭಾರೀ ಬೆಂಬಲದಿಂದಾಗಿ, ಹಾಗೂ ತಮ್ಮ ಜನಪ್ರಿಯತೆಯಿಂದಾಗಿ ಅವರು ತಮ್ಮನ್ನು ತಾವು ಸಂಭಾವ್ಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳುತ್ತಿದ್ದರು.

ಮಾರ್ಚ್ 14, 1961 ರಂದು ಜನಿಸಿದ ಅವರು ಹುಕ್ಕೇರಿಯ ಶ್ರೀಮಂತ ಮತ್ತು ಪ್ರಸಿದ್ಧ ಕತ್ತಿ ಕುಟುಂಬದಿಂದ ಬಂದವರು. ಅವರು 80 ರ ದಶಕದ ಆರಂಭದಲ್ಲಿ ರಾಜ್ಯ ರಾಜಕೀಯಕ್ಕೆ ಪ್ರವೇಶಿಸಿದರು ಮತ್ತು ತಮ್ಮ ತಂದೆ ವಿಶ್ವನಾಥ ಕತ್ತಿ (ಮಾಜಿ ಶಾಸಕ) ಅವರ ನಿಧನದ ನಂತರ ಮೊದಲ ಬಾರಿಗೆ ಶಾಸಕರಾಗಲು 1985 ರಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧಿಸಿದರು.

ಅಂದಿನಿಂದ, ಅವರು ಒಂಬತ್ತು ವಿಧಾನಸಭಾ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರು, ಅವುಗಳಲ್ಲಿ 8 ಚುನಾವಣೆಯಲ್ಲಿ ಗೆದ್ದಿದ್ದಾರೆ. 2004ರಲ್ಲಿ (ಬಿಜೆಪಿ) ಶಶಿಕಾಂತ್ ನಾಯ್ಕ್ ಎದುರು ಒಂದು ಬಾರಿ ಪರಾಭವಗೊಂಡಿದ್ದರು.

1985ರಲ್ಲಿ ಜನತಾದಳದ ಸದಸ್ಯರಾಗಿ ಉಮೇಶ ಕತ್ತಿ ಪ್ರಥಮ ಬಾರಿಗೆ ಶಾಸಕರಾಗಿ ಗೆದ್ದ ನಂತರ ಹುಕ್ಕೇರಿಯಲ್ಲಿ ಜನಪ್ರಿಯತೆ ಗಳಿಸಿದರು, ಅಂದಿನಿಂದ  ಕತ್ತಿ ಕುಟುಂಬ ಬೆಳಗಾವಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ಸಹಕಾರಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಯಿತು. ಅಂತಿಮವಾಗಿ ರಾಜಕೀಯ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದರು.

ಚಿಕ್ಕೋಡಿಯ ಮಾಜಿ ಸಂಸದ, ಉಮೇಶ್ ಅವರ ಸಹೋದರ ರಮೇಶ ಕತ್ತಿ ಅವರು ಡಿಸಿಸಿ ಬ್ಯಾಂಕ್‌ನ ಹಲವಾರು ಚುನಾವಣೆಯಲ್ಲಿ ಗೆದ್ದು  ಸದ್ಯ  ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ.  ಕತ್ತಿ ಕುಟುಂಬದರಾಜಕೀಯ ಪ್ರಭಾವದ ಲಾಭವನ್ನು ಪಡೆದುಕೊಳ್ಳಲು, 2008 ರಲ್ಲಿ ಬಿಜೆಪಿ ಇಬ್ಬರು ಸಹೋದರರನ್ನು ಪಕ್ಷಕ್ಕೆ ಸೇರಿಸಿಕೊಂಡಿತು. ಅಂದಿನಿಂದ, ಉತ್ತರ ಕರ್ನಾಟಕ ಪ್ರದೇಶದಲ್ಲಿ, ವಿಶೇಷವಾಗಿ ಬೆಳಗಾವಿ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಬಿಜೆಪಿ ಸಮರ್ಥವಾಯಿತು.

ರಮೇಶ ಕತ್ತಿ (ಬಿಜೆಪಿ) ಚಿಕ್ಕೋಡಿ ಕ್ಷೇತ್ರದಿಂದ 2009 ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಭಾವಿ ರಾಜಕಾರಣಿ ಪ್ರಕಾಶ್ ಹುಕ್ಕೇರಿ ಅವರನ್ನು ಸೋಲಿಸಿದರು. ಉಮೇಶ ಕತ್ತಿ ಅವರು1985 ರಿಂದ ಜೆಡಿಯು ಮತ್ತು ಜೆಡಿಎಸ್‌ನಿಂದ ರಾಜ್ಯ ವಿಧಾನಸಭೆಗೆ ಸ್ಪರ್ಧಿಸಿದರು. 2008 ರಲ್ಲಿ ಬಿಜೆಪಿ ಟಿಕೆಟ್ ಪಡೆದು ಸ್ಪರ್ಧಿಸಿದರು, ಆದರೆ ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ಕತ್ತಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಿಲ್ಲ ಆದರೆ ನಂತರ ಪಕ್ಷದಲ್ಲಿ ಬಂಡಾಯ ತಡೆಯುವ ಸಲುವಾಗಿ ಅವರಿಗೆ ಪ್ರಮುಖ ಖಾತೆಗಳನ್ನು ನೀಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com