'PayCM' ಪೋಸ್ಟರ್ ಅಭಿಯಾನ ಮೂಲಕ ಕಾಂಗ್ರೆಸ್ 'ಡರ್ಟಿ' ಪಾಲಿಟಿಕ್ಸ್ ಮಾಡುತ್ತಿದೆ: ಸಿಎಂ ಬೊಮ್ಮಾಯಿ ಟೀಕೆ
ಚಿತ್ರದುರ್ಗ: ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೇಸಿಎಂ ಎಂಬ ಕಾಂಗ್ರೆಸ್ ಅಭಿಯಾನ ತೀವ್ರ ಸದ್ದುಮಾಡುತ್ತಿದೆ. ಕಾಂಗ್ರೆಸ್ ನ ಅಭಿಯಾನಕ್ಕೆ ಕೌಂಟರ್ ಕೊಡಲು ಬಿಜೆಪಿ ತಯಾರಿ ಮಾಡುತ್ತಿದೆ.
ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ತರಳಬಾಳು ಮಠದದಲ್ಲಿ ನಡೆಯುತ್ತಿರುವ ಲಿಂಗೈಕ್ಯ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಯ 30ನೇ ಶ್ರದ್ಧಾಂಜಲಿ ಕಾರ್ಯಕ್ರಮ ಆಗಮಿಸಿದ್ದ ವೇಳೆ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಡರ್ಟಿ ಪಾಲಿಟಿಕ್ಸ್ ಮಾಡುತ್ತಿದೆ. ನೇರವಾಗಿ ಮಾತನಾಡುವ, ಎದುರಿಸುವ ಅಥವಾ ದಾಖಲೆ ನೀಡುವ ಬದಲು ವಾಮ ಮಾರ್ಗ ಅನುಸರಿಸುತ್ತಿದೆ ಕಾಂಗ್ರೆಸ್‌ನವರದ್ದು ಡರ್ಟಿ ಪಲಿಟಿಕ್ಸ್, ನೈತಿಕತೆ ಇಲ್ಲದ ರಾಜಕೀಯ ಅವರದು. ಹೆಸರು ಕೆಡಿಸುತ್ತಿದ್ದು, ಹತಾಶೆಯಾಗಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದವರಿಗೆ ಜನಪರ ಕಾಳಜಿ ಇಲ್ಲ. ಭ್ರಷ್ಟಾಚಾರದ ಬಗ್ಗೆ ದಾಖಲಾತಿ ಸಮೇತ ಆರೋಪ ಮಾಡಲಿ. ಕಾನೂನು ರೀತಿಯಲ್ಲಿ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೇವೆ ಎಂಬ ಭ್ರಮೆಯಲ್ಲಿ, ಯಾವುದೇ ವಿಚಾರವನ್ನು ಸರಿಯಾಗಿ ತಿಳಿದುಕೊಳ್ಳುವ ವ್ಯವಧಾನ ಅವರಲ್ಲಿ ಉಳಿದಿಲ್ಲ. ಪೂರ್ವ ತಯಾರಿ ಮಾಡಿಕೊಳ್ಳದೇ ಸದನಕ್ಕೆ ಬರುತ್ತಿದ್ದಾರೆ. ಅವರಲ್ಲಿ ಜನಪರ ಕಾಳಜಿ ಕಾಣುತ್ತಿಲ್ಲ, ಕೆಟ್ಟ ರಾಜಕೀಯ ಮಾಡಿಕೊಂಡು ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ಆದರೆ ಅದು ಸಾಧ್ಯವಿಲ್ಲ ಎಂದು ಹೇಳಿದರು.
ಕಾಂಗ್ರೆಸ್ನ ಪೇ ಸಿಎಂ ಪೋಸ್ಟರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧವೂ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ಮಾತುಗಳನ್ನು ಹೇಳಿದರು.
ದೆಹಲಿಯಿಂದ ಬಂದ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ತೀರ್ಮಾನ
ಇನ್ನು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯೆ ನೀಡಿ, ಈ ಬಗ್ಗೆ ಚರ್ಚೆ ನಡೆಯುತ್ತಿದೆ, ದೆಹಲಿಗೆ ಹೋಗಿ ಅಲ್ಲಿ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿ ಬಂದ ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ. ಮಾಧ್ಯಮಗಳ ಮೂಲಕ ಎಲ್ಲರಿಗೂ ತಿಳಿಸುತ್ತೇನೆ ಎಂದರು.
ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ
ಬರುವ ವಿಧಾನಸಭಾ ಚುನಾವಣೆಯಲ್ಲಿ ಕೆಲವು ಮಾಧ್ಯಮಗಳು ಸಮೀಕ್ಷೆ ನಡೆಸಿದ್ದು ಬಿಜೆಪಿಗೆ 90-100 ಸೀಟುಗಳು ಲಭಿಸಲಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಬೊಮ್ಮಾಯಿ, ಎಲ್ಲಾ ಸಮೀಕ್ಷೆಗಳು ಒಂದೊಂದು ರೀತಿಯಲ್ಲಿ ಬರುತ್ತಿವೆ. ನಮಗೆ ಜನರ ನಾಡಿಮಿಡಿತ ಗೊತ್ತಿದೆ. ನಾವು 35 ವರ್ಷಗಳಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ