ಒಳಮೀಸಲಾತಿ ಪರವೋ, ವಿರುದ್ಧವೋ ನಿಲುವು ಸ್ಪಷ್ಟಪಡಿಸಿ: ಕಾಂಗ್ರೆಸ್'ಗೆ ಸಿಎಂ ಬೊಮ್ಮಾಯಿ

ಕಾಂಗ್ರೆಸ್ ಪಕ್ಷಕ್ಕೆ ತಾಕತ್ತು ಇದ್ದರೆ ತಾನು ಒಳಮೀಸಲಾತಿ ಹಾಗೂ ಮೀಸಲಾತಿ ಹೆಚ್ಚಳ ಪರವಾಗಿದೆಯೋ, ವಿರುದ್ಧವಾಗಿದೆಯೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಗುರುವಾರ ಸವಾಲು ಹಾಕಿದ್ದಾರೆ.
ಸಿಎಂ ಬೊಮ್ಮಾಯಿ
ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷಕ್ಕೆ ತಾಕತ್ತು ಇದ್ದರೆ ತಾನು ಒಳಮೀಸಲಾತಿ ಹಾಗೂ ಮೀಸಲಾತಿ ಹೆಚ್ಚಳ ಪರವಾಗಿದೆಯೋ, ವಿರುದ್ಧವಾಗಿದೆಯೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಗುರುವಾರ ಸವಾಲು ಹಾಕಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರ ಒಳಮೀಸಲಾತಿ ಘೋಷಣೆ ಹಾಗೂ ಮೀಸಲಾತಿ ಪ್ರಮಾಣ ಹೆಚ್ಚಿಸಿದ್ದಕ್ಕೆ ಪರಿಶಿಷ್ಟ ಸಮುದಾಯಗಳ ಒಕ್ಕೂಟವು ನಗರದ ನೆಹರು ಮೈದಾನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.

ಒಳಮೀಸಲಾತಿ ಕುರಿತು ಸರ್ವ ಪಕ್ಷ ಸಭೆ ಕರೆದಾಗ ಮಾಡಿ ಎಂದು ಹೇಳಿದ್ದರು. ಇದೀಗ ಹೊರಗೆ ಬಂದಾಗ ಕಾಂಗ್ರೆಸ್ ನಾಯಕರು ವರಸೆ ಬದಲಾಯಿಸಿದ್ದಾರೆ. ಒಳಗೊಂದು ಹೊರಗೊಂದು ಮಾತನಾಡುವುದು ಕಾಂಗ್ರೆಸ್ ನೀತಿಯಾಗಿದೆ. ತಾಕತ್ತಿದ್ದರೆ ಕಾಂಗ್ರೆಸ್ ವಿರೋಧ ಮಾಡುತ್ತೇವೆ ಎಂದು ಹೇಳಲಿ ಎಂದು ಸವಾಲೆಸೆದರು.

ಸರ್ಕಾರದ ನಿರ್ಧಾರದ ಬಳಿಕ ಇದು ಸಂವಿಧಾನ ಬಾಹಿರ ಎಂದು ವಿರೋಧಿಸುತ್ತಿರುವುದು ಸಾಮಾಜಿಕ ನ್ಯಾಯದ ಬಗ್ಗೆ ಅವರಿಗಿರುವ ಕಾಳಜಿಯನ್ನು ತೋರಿಸುತ್ತದೆ. "ಬಿಜೆಪಿ ಇಂತಹ ಸೂಕ್ಷ್ಮ ನಿರ್ಧಾರವನ್ನು ತೆಗೆದುಕೊಳ್ಳಲು ಧೈರ್ಯ ಮಾಡುವುದಿಲ್ಲ ಎಂದು ಅವರು ಭಾವಿಸಿದ್ದರು, ಸರ್ಕಾರವು ತನ್ನ ಬದ್ಧತೆಯನ್ನು ಸಾಬೀತುಪಡಿಸಿದೆ.

ಮೀಸಲಾತಿ ಹೆಚ್ಚಳ ಯಾರೂ ಮಾಡಲು ಆಗಲ್ಲ ಎಂದ ರಾಜಕೀಯ ವಲಯದಲ್ಲಿ ಚರ್ಚೆ ಆಗುತ್ತಿತ್ತು. ಇದನ್ನು ಹೆಚ್ಚಳ ಮಾಡಿದರೆ ಭಸ್ಮ ಆಗುತ್ತಾರೆ ಎಂದು ಹೇಳಿದ್ದರು. ಆದರೆ, ನಾನು ಯಾರಿಗೆ ಸಂವಿಧಾನ, ಯಾರಿಗೆ ಪ್ರಜಾಪ್ರಭುತ್ವ ಎಂಬುದನ್ನು ಅರಿತುಕೊಂಡೆ. ಸ್ಥಾನಮಾನ ಶಾಶ್ವತ ಅಲ್ಲ, ಆದರೆ, ನಾನು ನಿಮ್ಮ ಹೃದಯದಲ್ಲಿದ್ದೇನೆ. ನನ್ನಿಂದ ದೊಡ್ಡ ಕೆಲಸ ಆಗಿಲ್ಲ, ನಿಮಗೆ ನ್ಯಾಯ ಕೊಡಿಸುವ ಸಣ್ಣ ಕೆಲಸ ಮಾಡಿದ್ದೇನೆ ಎಂದು ತಿಳಿಸಿದರು.

ಬಡವರಾಗಿ ಹುಟ್ಟಬಹುದು ಆದರೆ ಬಡವರಾಗಿ ಸಾಯಬೇಕು ಎನ್ನುವ ಕಾನೂ‌ನು ಇಲ್ಲ. ಇಷ್ಟು ವರ್ಷ ಆಡಳಿತ ಮಾಡಿದ ಕಾಂಗ್ರೆಸ್ ಎಸ್​ಸಿ ಎಸ್​ಟಿ ಸಮುದಾಯವನ್ನ ಒತ್ತೆಯಾಳು ಮಾಡಿಕೊಂಡಿತ್ತು. 70 ವರ್ಷ ಅವರನ್ನು ಮತ ಬ್ಯಾಂಕ್ ಮಾಡಿಕೊಂಡಿತ್ತು. ಸಾಮಾಜಿಕ ನ್ಯಾಯ ಕೊಡುತ್ತೇನೆ ಎಂದು ಬರೀ ಬಾಷಣ ಬೀಗಿದರು. ಈಗಲೂ ಕಾಂಗ್ರೆಸ್ ವಂಚನೆ ಮಾಡಿವ ಅಟ ಆಡುತ್ತಿದೆ. ಈ ಬಗ್ಗೆ ಎಚ್ಚರಿಕೆ ಇರಲಿ. ಸಮಾಜ ಒಳೆದಾಡುವ ಪ್ರಯತ್ನ ಕಾಂಗ್ರೆಸ್ ಮಾಡುತ್ತಿದೆ. ಕರ್ನಾಟಕದಲ್ಲಿ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ. ಸಮಾಜದಲ್ಲಿ ಜಾತಿಜಾತಿಗಳ ನಡುವೆ ಬೆಂಕಿ ಹಚ್ಚಿ ಅದರಲ್ಲಿ ರೊಟ್ಟಿ ಬೇಯಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಸಿದ್ದರಾಮಣ್ಣ ಮುಖ್ಯಮಂತ್ರಿ ಆಗಿದ್ದಾಗ ಕೆಲವರಿಗೆ ಮಾತ್ರ ಕಾರ್ಯಕ್ರಮ ಜಾರಿ ಮಾಡುತ್ತಿದ್ದರು. ಇದ್ಯಾವ ನ್ಯಾಯ ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಎಸ್​ಸಿ ಎಸ್​ಟಿ ಸಮುದಾಯದ ರಕ್ಷಣೆ ಮಾಡತ್ತದೆ ಎಂಬುದು ಬರೀ ಬಾಷಣವಷ್ಟೆ. ಹಿಂದೆ ಮೀಸಲಾತಿ ಹೋರಾಟ ಇದೇ ಮೈದಾನದಲ್ಲಿ ನಡೆದಿತ್ತು. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಇಲ್ಲಿಗೆ ಬಂದು ದೀಪ ಹಚ್ಚಿ ಹೋಗಿದ್ದರು. ಏನೂ ಮಾತಾಡಲೇ ಇಲ್ಲ. ಒಂದು ವಿಡಿಯೋದಲ್ಲಿ ಸದಾಶಿವ ಆಯೋಗ ವರದಿ ಜಾರಿ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ, ಇನ್ನೊಂದು ವಿಡಿಯೋದಲ್ಲಿ ನಾವು ಮಾಡಲ್ಲ ಎನ್ನುತ್ತಾರೆ. ಇದು ಕಾಂಗ್ರೆಸ್​ನ‌ ಡಬಲ್ ಸ್ಟ್ಯಾಂಡರ್ಡ್ ಎಂದು ಕಿಡಿಕಾರಿದರು.

ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಪಕ್ಷ ಅಂದರೆ ಅದು ಕಾಂಗ್ರೆಸ್. ನಾನು ಕೆಲಸ ಮಾಡಿ ನಿಮ್ಮ ಮುಂದೆ ಬರುವ ಮುಖ್ಯಮಂತ್ರಿ, ನ್ಯಾಯ ಕೊಡುವಾಗ ಇನ್ನೊಬ್ಬರಿಗೆ ಅನ್ಯಾಯ ಆಗದಂತೆ ನಾವು ನ್ಯಾಯ ಕೊಟ್ಟಿದ್ದೇನೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೀಸಲಾತಿ ತೆಗೆಯುತ್ತೇವೆ ಎಂದು ಹೇಳುತ್ತಿದೆ. ನೀವು ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ನೀವು ಮೊದಲು ಒಳ ಮೀಸಲಾತಿ ಪರವೋ ವಿರುದ್ಧವೋ ಹೇಳಬೇಕು ಎಂದು ಸವಾಲೆಸೆದರು.

ನನ್ನ ಅನ್ನದ ಮೊದಲ ತುತ್ತು ಅದು ದಲಿತ ಸಮುದಾಯಕ್ಕೆ ಮೀಸಲು. ಬಂಜಾರ, ಭೋವಿ, ಕುಂಚಾ, ಕೊರಮ ಬಂಧುಗಳ ಮೀಸಲಾತಿಯ‌ನ್ನು ಸೂರ್ಯ, ಚಂದ್ರ ಇರುವವರಗೂ ತೆಗೆಯುವುದಿಲ್ಲ. ನೀವು ಕಾಂಗ್ರೆಸ್ ಸುಳ್ಳನ್ನು ನಂಬಬೇಡಿ. ಬಜೆಟ್​ನಲ್ಲಿ ಘೋಷಣೆ ಮಾಡಿದಂತೆ 7ಡಿ ಕಾನೂನನ್ನು ತೆಗೆದು ಹಾಕುತ್ತೇನೆ ಎಂದು ಭರವಸೆ ನೀಡಿದರು. ಅಲ್ಲದೆ, ದಲಿತ ಅಭಿವೃದ್ಧಿಗಾಗಿ ಮೀಸಲಿಟ್ಟ ಅನುದಾನವನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಳ್ಳುವ ಕಾನೂನು ಸಿದ್ದರಾಮಯ್ಯ ಮಾಡಿದ್ದರು ಎಂದು ಆರೋಪಿಸಿದರು.

ಬಿಜೆಪಿಯ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರು ಮಾತನಾಡಿ, ಎಸ್‌ಸಿ ಪಟ್ಟಿಯಿಂದ ಯಾವುದೇ ಜಾತಿಯನ್ನು ತೆಗೆದುಹಾಕುವುದಿಲ್ಲ. ಕಾಂಗ್ರೆಸ್ ಪಕ್ಷದ ಅಪಪ್ರಚಾರಕ್ಕೆ ಬಂಜಾರ ಸಮುದಾಯದವರು ಕಿವಿಗೊಡಬೇಡಬಾರದು ಎಂದು ಮನವಿ ಮಾಡಿಕೊಂಡರು.

ಒಳಮೀಸಲಾತಿಯನ್ನು ವರ್ಗೀಕರಿಸುವ ಮೂಲಕ ಅಥವಾ ಎಸ್‌ಸಿ ಮತ್ತು ಎಸ್‌ಟಿಗಳ ಕೋಟಾವನ್ನು ಹೆಚ್ಚಿಸುವ ಮೂಲಕ ಸರ್ಕಾರ ಯಾವುದೇ ಸಮುದಾಯಕ್ಕೆ ಅನ್ಯಾಯ ಮಾಡಿಲ್ಲ ಎಂದರು.

"ರಾಜ್ಯದಲ್ಲಿ ಬಿಜೆಪಿ 130 ರಿಂದ 140 ಸ್ಥಾನಗಳನ್ನು ಗೆಲ್ಲುವುದನ್ನು ತಡೆಯಲು ಯಾವುದೇ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ. ಪಕ್ಷದ ವಿಜಯ ಖಚಿತಪಡಿಸಲು ಕಾರ್ಯಕರ್ತರು ಪ್ರತಿ ಮನೆಗೂ ಭೇಟಿ ನೀಡಬೇಕೆಂದು ಮನವಿ ಮಾಡಿದರು.

ಈ ನಡುವೆ ರಾಜ್ಯ ಕೋರ್ ಕಮಿಟಿ ಸಭೆ ಬುಧವಾರ ಕೊನೆಗೊಂಡಿದ್ದು, ಏಪ್ರಿಲ್ 8ರ ಸಭೆಯಲ್ಲಿ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.

ಹಾಲಿ ಶಾಸಕರಿಗೆ ಟಿಕೆಟ್ ಸಿಗುತ್ತಿಲ್ಲ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾಲ್ಕು ಹಂತಗಳಲ್ಲಿ ಅಭ್ಯರ್ಥಿಗಳ ಸಾಧನೆಯನ್ನು ಪರಿಶೀಲಿಸಿ ವರದಿ ಕೇಳಲಾಗಿದೆ. ಅದರ ಮೂಲಕವೇ ಟಿಕೆಟ್ ನೀಡಲಾಗುತ್ತಿದೆ, ನಾನು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದೇನೆಂಬ ಸುದ್ದಿಗಳು ಬರುತ್ತಿದ್ದು, ಇದಕ್ಕೆ ಜನರು ಕಿವಿಗೊಡಬಾರದು ಎಂದು ತಿಳಿಸಿದರು.

ಕೊಲೆ ಆರೋಪಿ ವಿನಯ್‌ ಕುಲಕರ್ಣಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ, ಪ್ರಕರಣ ನ್ಯಾಯಾಲಯದ ಅಂಗಳದಲ್ಲಿದೆ. ಹೀಗಾಗಿ ಈ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ ಎಂದರು.

ಕ್ರಿಮಿನಲ್ ಹಿನ್ನೆಲೆಯುಳ್ಳ ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ನೀಡುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ, ಕಾನೂನು ಸ್ಪಷ್ಟವಾಗಿದ್ದು, ಎಲ್ಲಾ ಅಂಶಗಳನ್ನು ಅಧ್ಯಯನ ಮಾಡಿದ ನಂತರವೇ ಟಿಕೆಟ್ ನೀಡಲಾಗುವುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com