ಬೆಂಗಳೂರು: ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಆಡಳಿತರೂಢ ಬಿಜೆಪಿ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದ್ದು, ಇದರಲ್ಲೂ ಹಲವು ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ.
ಟಿಕೆಟ್ ವಂಚಿತ ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಶಾಸಕ ಸ್ಥಾನಕ್ಕೆ ಮತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಟಿಕೆಟ್ ಕೈತಪ್ಪಿದ್ದಕ್ಕೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಎಂಪಿ ಕುಮಾರಸ್ವಾಮಿ ಅವರು, ನನಗೆ ಮೂಡಿಗೆರೆ ಕ್ಷೇತ್ರದ ಟಿಕೆಟ್ ತಪ್ಪಲು ಸಿ.ಟಿ.ರವಿ ಕಾರಣ ಎಂದು ಆರೋಪಿಸಿದ್ದಾರೆ.
ಸಿಟಿ ರವಿ ಅವರಿಗೆ ನಿಷ್ಠರಾಗಿ ಹೋಗಬೇಕು, ಅದು ನನ್ನಿಂದ ಸಾಧ್ಯವಿಲ್ಲ. ರಾಜ್ಯದಲ್ಲಿ ಬಿಜೆಪಿ ನೆಲಕಚ್ಚಲು ಸಿ.ಟಿ.ರವಿ ಕಾರಣ ಆಗುತ್ತಾರೆ. ದೆಹಲಿಯಲ್ಲಿ ಶಾಸಕ ಸಿ.ಟಿ.ರವಿ ಕಣ್ಣಾಮುಚ್ಚಾಲೆ ಆಟ ಆಡಿದ್ದಾರೆ. ಬಿಎಸ್ ಯಡಿಯೂರಪ್ಪ ಅವರು ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡ್ರೆ 50 ಸ್ಥಾನವೂ ಬರಲ್ಲ. ಪಕ್ಷಕ್ಕೆ ನಾನು ಏನು ಅನ್ಯಾಯ ಮಾಡಿದ್ದೇನೆ. ಜನರ ಸೇವೆ ಮಾಡುವ ಶಕ್ತಿ ಇನ್ನೂ ಇದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
Advertisement