ಕಮಲಕ್ಕೆ ರೆಬೆಲ್ಸ್ ಟ್ರಬಲ್: ವಿಧಾನಸಭೆ ಚುನಾವಣೆಗೂ ಮುನ್ನ ಪರಿಷತ್ ನಲ್ಲಿ ಬಹುಮತ ಕಳೆದುಕೊಂಡ ಬಿಜೆಪಿ!
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೂ ಮುನ್ನವೇ ಮೇಲ್ಮನೆಯಲ್ಲಿ ಬಿಜೆಪಿ ಬಹುಮತ ಕಳೆದುಕೊಂಡಿದೆ. ಬುಧವಾರ ಎಂಎಲ್‌ಸಿ ಸ್ಥಾನಕ್ಕೆ ಆರ್ ಶಂಕರ್ ರಾಜೀನಾಮೆ ನೀಡುವುದರೊಂದಿಗೆ 75 ಸದಸ್ಯರ ಪರಿಷತ್‌ನಲ್ಲಿ ಬಿಜೆಪಿ ಸಂಖ್ಯೆ 36ಕ್ಕೆ ಕುಸಿದಿದೆ.
ಅಥಣಿ ಟಿಕೆಟ್ ಸಿಗದೆ ಅಸಮಾಧಾನಗೊಂಡಿರುವ ಬಿಜೆಪಿ ಎಂಎಲ್‌ಸಿ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದು ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರಿಂದ ಸಂಖ್ಯೆ 35ಕ್ಕೆ ಇಳಿಯುವ ಸಾಧ್ಯತೆಯಿದೆ. ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಶನಿವಾರ ರಾಜೀನಾಮೆ ಸಲ್ಲಿಸಬಹುದು ಎಂದು ಹೇಳಲಾಗಿದೆ.
ಬಿಜೆಪಿಯ 224 ಅಭ್ಯರ್ಥಿಗಳ ಪಟ್ಟಿಯು ಪೂರ್ಣ ಪ್ರಮಾಣದಲ್ಲಿ ಬಿಡುಗಡೆಯಾಗಬೇಕಿದ್ದು, ಮೂರನೇ ಪಟ್ಟಿ ಹೊರ ಬಿದ್ದ ನಂತರ, ಮೇಲ್ಮನೆಯಲ್ಲಿ ಪಕ್ಷದ ಬಲ ಮತ್ತಷ್ಟು ಕಡಿಮೆಯಾಗಬಹುದು ಎಂದು, ಏಕೆಂದರೆ ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಮತ್ತಷ್ಟು ಆಕಾಂಕ್ಷಿಗಳು ಸಹ ರಾಜೀನಾಮೆ ನೀಡಲು ನಿರ್ಧರಿಸಬಹುದು.
ಈ ಮೊದಲು ಬಿಜೆಪಿ ಸದಸ್ಯರ ಬಲ 39 ಆಗಿತ್ತು. ಎಂಎಲ್‌ಸಿಗಳಾದ ಪುಟ್ಟಣ್ಣ ಮತ್ತು ಬಾಬು ರಾವ್ ಚಿಂಚನಸೂರ್ ಮಾರ್ಚ್‌ನಲ್ಲಿ ಪಕ್ಷ ತೊರೆದು ಕಾಂಗ್ರೆಸ್ ಸೇರಿದ್ದರು. ತಾಂತ್ರಿಕವಾಗಿ ಚಿಂಚನಸೂರ್ ರಾಜೀನಾಮೆ ಸಲ್ಲಿಸಿದಾಗ ಬಿಜೆಪಿ ಬಹುಮತ ಕಳೆದುಕೊಂಡಿತ್ತು. ಪರಿಷತ್ ನಲ್ಲಿ ಮ್ಯಾಜಿಕ್ ನಂಬರ್ 38 ಆಗಿದೆ, ಅದರಂತೆ ಬಿಜೆಪಿ ಬಹುಮತ ಕಳೆದುಕೊಂಡಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
2019ರಲ್ಲಿ ಬಿಜೆಪಿ ಸರ್ಕಾರ ರಚಿಸಿದರೂ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಬಹುಮತ ಪಡೆದಿದ್ದವು. ಕಳೆದ ವರ್ಷ ಜೂನ್‌ನಲ್ಲಿ ಮಾತ್ರ ಬಿಜೆಪಿ ಪರಿಷತ್ತಿನಲ್ಲಿ ಸ್ಪಷ್ಟ ಬಹುಮತ ಪಡೆದಿತ್ತು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ತೀವ್ರ ವಿರೋಧದ ನಡುವೆಯೂ ಪರಿಷತ್ತಿನಲ್ಲಿ ಮತಾಂತರ ವಿರೋಧಿ ಮಸೂದೆಯಂತಹ ಕೆಲವು ವಿವಾದಾತ್ಮಕ ಮಸೂದೆಗಳನ್ನು ಅಂಗೀಕರಿಸಲು ಇದು ಪಕ್ಷಕ್ಕೆ ಸಹಾಯ ಮಾಡಿತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ