ಯೋಗೇಶ್ವರ್ ರಾಜಕೀಯ ಜೀವನ ಅಂತ್ಯಕ್ಕೆ ಚನ್ನಪಟ್ಟಣದಿಂದಲೇ ಕುಮಾರಸ್ವಾಮಿ ಸ್ಪರ್ಧೆ, ಮಾಜಿ ಸಿಎಂಗೆ ಎದುರಾಗಲಿದೆ ತೀವ್ರ ಪೈಪೋಟಿ

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತವರು ನೆಲದಲ್ಲೇ ತೀವ್ರ ಪೈಪೋಟಿ ಎದುರಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿಯ ಬಿರುಸಿನ ಪ್ರಚಾರದಿಂದ ಜೆಡಿಎಸ್ ನಾಯಕನಿಗೆ ಚನ್ನಪಟ್ಟಣ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಎದುರಾಗುವ ಸೂಚನೆ ನೀಡಿದೆ. 
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರಿಗೆ ತವರು ನೆಲದಲ್ಲೇ ತೀವ್ರ ಪೈಪೋಟಿ ಎದುರಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿಯ ಬಿರುಸಿನ ಪ್ರಚಾರದಿಂದ ಜೆಡಿಎಸ್ ನಾಯಕನಿಗೆ ಚನ್ನಪಟ್ಟಣ ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಎದುರಾಗುವ ಸೂಚನೆ ನೀಡಿದೆ. 

ಕ್ಷೇತ್ರವು ಕುಮಾರಸ್ವಾಮಿ ಮತ್ತು ಬಿಜೆಪಿ ಮುಖಂಡ ಸಿ.ಪಿ. ಯೋಗೇಶ್ವರ್ ನಡುವಿನ ತೀವ್ರ ಪೈಪೋಟಿಗೆ ಸಾಕ್ಷಿಯಾಗಲಿದೆ. ಯೋಗೇಶ್ವರ್ ಅವರು 1999ರಲ್ಲಿ ಚನ್ನಪಟ್ಟಣವನ್ನು ಪ್ರತಿನಿಧಿಸಿದ್ದರು. ನಂತರ 2004 ಮತ್ತು 2008ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರು.

‘ಆಪರೇಷನ್ ಕಮಲ’ದ ವೇಳೆ ಬಿಜೆಪಿ ಸೇರಿದ ಯೋಗೇಶ್ವರ್ ನಂತರ 2009ರಲ್ಲಿ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಅಶ್ವತ್ಥ್ ಎಂ.ಸಿ ವಿರುದ್ಧ ಸೋತಿದ್ದರು. ನಂತರ ಅವರು 2011ರ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮತ್ತೆ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. 2013ರಲ್ಲಿ ಸಮಾಜವಾದಿ ಪಕ್ಷದಿಂದ (ಎಸ್‌ಪಿ) ಸ್ಪರ್ಧಿಸಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ವಿರುದ್ಧ ಗೆದ್ದಿದ್ದರು. ಯೋಗೇಶ್ವರ್ ಅವರು 80,099 ಮತಗಳನ್ನು ಪಡೆದರೆ, ಅನಿತಾ ಕುಮಾರಸ್ವಾಮಿ 73,635 ಮತಗಳನ್ನು ಪಡೆದಿದ್ದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಯೋಗೇಶ್ವರ್ ಅವರು ಕುಮಾರಸ್ವಾಮಿ ವಿರುದ್ಧ ಸೋಲು ಕಂಡಿದ್ದರು. ಯೋಗೇಶ್ವರ್ ಅವರು 66,465 ಮತ್ತು ಕುಮಾರಸ್ವಾಮಿ ಅವರು 87,995 ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಯೋಗೇಶ್ವರ್ ಅವರ ರಾಜಕೀಯ ಜೀವನ ಅಂತ್ಯಗೊಳಿಸಲು ಕುಮಾರಸ್ವಾಮಿ ಚನ್ನಪಟ್ಟಣದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಪಕ್ಕದ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

ಚನ್ನಪಟ್ಟಣ ಕ್ಷೇತ್ರವು ನಗರದ 31 ವಾರ್ಡ್‌ಗಳನ್ನು ಒಳಗೊಂಡಿದೆ. ಕ್ಷೇತ್ರದಲ್ಲಿ 2,17,606 ಮತದಾರರಿದ್ದಾರೆ. ಮುಸ್ಲಿಮರು ಶೇ 42.96 ರಷ್ಟು ಮತದಾರರನ್ನು ಹೊಂದಿದ್ದಾರೆ ಮತ್ತು ಹಿಂದೂಗಳು ಶೇ 55.66 ರಷ್ಟು ಮತದಾರರನ್ನು ಹೊಂದಿದ್ದಾರೆ.

ಹಳೆ ಮೈಸೂರು ಭಾಗದತ್ತ ಗಮನ ಹರಿಸಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿರುವುದರಿಂದ ಈ ಹೋರಾಟ ತೀವ್ರ ಪೈಪೋಟಿಯಾಗಿ ಪರಿಣಮಿಸಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಕುಟುಂಬವು ಇಲ್ಲಿಂದ ಗೆಲ್ಲುವುದನ್ನು ಪ್ರತಿಷ್ಠೆಯ ಕಣವಾಗಿ ತೆಗೆದುಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದಕ್ಷಿಣ ಕರ್ನಾಟಕಕ್ಕೆ ಪದೇ ಪದೆ ಭೇಟಿ ನೀಡುತ್ತಿದ್ದಾರೆ ಮತ್ತು ಜೆಡಿಎಸ್ ಅನ್ನು ವಂಶ ರಾಜಕಾರಣ ಮಾಡುವ ಪಕ್ಷವಾದ್ಧರಿಂದ ಅದನ್ನು ತಿರಸ್ಕರಿಸುವಂತೆ ಮತದಾರರಿಗೆ ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಬೃಹತ್ ಸಮಾವೇಶ ಹಾಗೂ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪಕ್ಷ ಮುಂದಾಗಿದೆ.

ದಕ್ಷಿಣ ಕರ್ನಾಟಕದಲ್ಲಿ ಕೇಸರಿ ಪಕ್ಷ ಎಷ್ಟು ಆಳವಾಗಿ ಬೇರು ಬಿಟ್ಟಿದೆ ಎಂಬುದನ್ನು ಈ ಚುನಾವಣಾ ಫಲಿತಾಂಶ ಹೇಳಲಿದೆ. ಧರ್ಮದ ಆಧಾರದ ಮೇಲೆ ಮತಗಳ ಧ್ರುವೀಕರಣದೊಂದಿಗೆ ಹಿಜಾಬ್ ಬಿಕ್ಕಟ್ಟು ಮತ್ತು ಮುಸ್ಲಿಂ ವ್ಯಾಪಾರಿಗಳನ್ನು ಬಹಿಷ್ಕರಿಸುವ ಕರೆ ನಂತರ ಮುಸ್ಲಿಮರು ಜೆಡಿಎಸ್‌ನೊಂದಿಗೆ ದೃಢವಾಗಿ ನಿಂತಿದ್ದಾರೆ. ಕುಮಾರಸ್ವಾಮಿ ಒಕ್ಕಲಿಗ ಮತದಾರರನ್ನೂ ಸೆಳೆಯಲಿದ್ದಾರೆ.

ಎಲ್ಲಾ ಹಿಂದೂ ಮತಗಳನ್ನು ಬಿಜೆಪಿಯತ್ತ ಧ್ರುವೀಕರಿಸುವುದು ಮತ್ತು ಒಕ್ಕಲಿಗ ಮತಗಳನ್ನು ಯಥಾಸ್ಥಿತಿಯಲ್ಲಿ ಇಡುವುದು ಯೋಗೇಶ್ವರ್ ಅವರ ಕಾರ್ಯವಾಗಿದೆ. ಕ್ಷೇತ್ರದ ನಾಡಿಮಿಡಿತವನ್ನು ಚೆನ್ನಾಗಿಯೇ ಅರಿತಿರುವ ಯೋಗೇಶ್ವರ್ ಅವರು ಬಹಳ ಹಿಂದೆಯೇ ಕ್ಷೇತ್ರದಲ್ಲಿ ತೀವ್ರ ಪ್ರಚಾರ ಆರಂಭಿಸಿದ್ದರು.

ಕುಮಾರಸ್ವಾಮಿ ರಾಜ್ಯ ಪ್ರವಾಸದತ್ತ ಗಮನ ಹರಿಸಿದ್ದು, ಚುನಾವಣೆ ನಂತರ ರಾಷ್ಟ್ರೀಯ ಪಕ್ಷಗಳು ತಮ್ಮ ಮನೆ ಬಾಗಿಲಿಗೆ ಬರಬೇಕು ಎಂದು ಘೋಷಿಸಿದ್ದಾರೆ. ಯೋಗೇಶ್ವರ್ ಅವರು ಕುಮಾರಸ್ವಾಮಿ ವಿರುದ್ಧವೇ ಗೆಲ್ಲುವುದಾಗಿ ಘೋಷಣೆ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com