ಬಿಜೆಪಿ ಸ್ಪಷ್ಟ ಬಹುಮತ ಪಡೆಯುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಬಿಎಸ್ ಯಡಿಯೂರಪ್ಪ (ಸಂದರ್ಶನ)

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪಕ್ಷದಿಂದ ಹೊರಹೋಗಿದ್ದರೂ ಕೂಡ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಬಿಜೆಪಿಯ ಲಿಂಗಾಯತ ಪ್ರಬಲ ನಾಯಕ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಪಾದಿಸಿದ್ದಾರೆ. 
ಮಾಜಿ ಸಿಎಂ ಯಡಿಯೂರಪ್ಪ. (Photo | Nagaraja Gadekal, EPS)
ಮಾಜಿ ಸಿಎಂ ಯಡಿಯೂರಪ್ಪ. (Photo | Nagaraja Gadekal, EPS)

ಬೆಂಗಳೂರು: ಮೇ 10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಲಿಂಗಾಯತ ಸಮುದಾಯವು ಬಿಜೆಪಿಯನ್ನು ತೊರೆದು ಕಾಂಗ್ರೆಸ್‌ಗೆ ಬೆಂಬಲ ನೀಡಲಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಹೇಳಿಕೊಂಡಿದೆ. ಆದರೆ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪಕ್ಷದಿಂದ ಹೊರಹೋಗಿದ್ದರೂ ಕೂಡ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಬಿಜೆಪಿಯ ಲಿಂಗಾಯತ ಪ್ರಬಲ ನಾಯಕ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಪ್ರತಿಪಾದಿಸಿದ್ದಾರೆ. 

ಪಕ್ಷವು ಟಿಕೆಟ್ ಘೋಷಿಸಿದ ನಂತರ ಭುಗಿಲೆದ್ದ ಬಂಡಾಯವನ್ನು ಶಮನಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಹಿರಿಯ ನಾಯಕ, ಮೇ 10ರಂದು ನಡೆಯಲಿರುವ ಚುನಾವಣೆಯಲ್ಲಿ ಪಕ್ಷದ ಭವಿಷ್ಯದ ಬಗ್ಗೆ ಟಿಎನ್ಐಇ ಜೊತೆಗೆ ಮಾತನಾಡಿದ್ದಾರೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿರುವುದು ಬಿಜೆಪಿ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆಯೇ?

ಜಗದೀಶ್ ಶೆಟ್ಟರ್‌ಗೆ ಪಕ್ಷ ಎಲ್ಲ ಹುದ್ದೆ, ಸ್ಥಾನಮಾನ ನೀಡಿತ್ತು. ಅವರನ್ನು ಸಿಎಂ, ವಿರೋಧ ಪಕ್ಷದ ನಾಯಕ, ವಿಧಾನಸಭೆಯ ಸ್ಪೀಕರ್ ಆಗಿ ಮಾಡಲಾಗಿತ್ತು. ಈಗಂತೂ ಅವರಿಗೆ ರಾಜ್ಯಸಭಾ ಸ್ಥಾನ ಹಾಗೂ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗಿತ್ತು. ಅವರ ಪತ್ನಿಗೆ (ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ನಿಂದ ಸ್ಪರ್ಧಿಸಲು) ಟಿಕೆಟ್ ನೀಡುವುದಾಗಿ ಹೇಳಿದ್ದೆವು. ನಾನು ಅವರೊಂದಿಗೆ ಮಾತನಾಡಿದೆ. ನಮ್ಮ ಕೇಂದ್ರ ನಾಯಕರು ಸಹ ಅವರೊಂದಿಗೆ ಮಾತನಾಡಿದ್ದಾರೆ. ಅದೆಲ್ಲವನ್ನೂ ಲೆಕ್ಕಿಸದೆ ಹಠ ಹಿಡಿದು ಕಾಂಗ್ರೆಸ್‌ಗೆ ಹೋಗಿದ್ದಾರೆ. ಆ ಪ್ರದೇಶದ ಜನರು ಬಹಳ ಜಾಗೃತರಾಗಿದ್ದಾರೆ ಮತ್ತು ಅಂತಹ ನಿರ್ಧಾರವನ್ನು ಬೆಂಬಲಿಸುವುದಿಲ್ಲ. ಎರಡು ದಿನಗಳ ನಂತರ ನಾನು ಅಲ್ಲಿಂದಲೇ ನನ್ನ ಪ್ರವಾಸವನ್ನು ಪ್ರಾರಂಭಿಸಿ ಜನರಿಗೆ ವಾಸ್ತವವನ್ನು ವಿವರಿಸುತ್ತೇನೆ. ಇದು (ಶೆಟ್ಟರ್ ಮತ್ತು ಸವದಿ ಅವರ ನಿರ್ಗಮನ) ನಮ್ಮ ಭವಿಷ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನಾನು ಭಾವಿಸುತ್ತೇನೆ.

ಸವದಿ ಮತ್ತು ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ನಂತರ ಲಿಂಗಾಯತ ಮತದಾರರ ಒಂದು ವರ್ಗ ಕಾಂಗ್ರೆಸ್‌ ಅನ್ನು ಬೆಂಬಲಿಸುತ್ತಾರೆ ಎಂದು ನಿಮಗೆ ಅನಿಸುವುದಿಲ್ಲವೇ?

ಸವದಿ ಎಂಎಲ್‌ಸಿಯಾಗಿ ಇನ್ನೂ ಐದು ವರ್ಷ ಎರಡು ತಿಂಗಳ ಅಧಿಕಾರಾವಧಿ ಹೊಂದಿದ್ದರು. ಅವರು ಚುನಾವಣೆಯಲ್ಲಿ (2018 ರಲ್ಲಿ) ಸೋತಾಗ ಪಕ್ಷವು ಅವರನ್ನು ಎಂಎಲ್‌ಸಿ ಮತ್ತು ಸಚಿವರನ್ನಾಗಿ ಮಾಡಿತ್ತು. ಈಗಲೂ ಸಹ ಪಕ್ಷದಲ್ಲಿ ಅವರನ್ನು ನಿರ್ಲಕ್ಷಿಸದೆ ಮತ್ತೊಮ್ಮೆ ಸಚಿವರನ್ನಾಗಿ ಮಾಡುತ್ತಿದ್ದೆವು. ಆದರೂ, ಪಕ್ಷ ತೊರೆದು ಪಕ್ಷಕ್ಕೆ ಹಾಗೂ ವಿಶ್ವಾಸಕ್ಕೆ ದ್ರೋಹ ಬಗೆದಿದ್ದಾರೆ. ಜನರು ಅವರನ್ನು ಕ್ಷಮಿಸುವುದಿಲ್ಲ. ಶೆಟ್ಟರ್ ಮತ್ತು ಸವದಿ ಯಾಕೆ ಇಂತಹ ನಿರ್ಧಾರ ಕೈಗೊಂಡರು ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ. ನಾಳೆ (ಮಂಗಳವಾರ) ನಮ್ಮ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾಜಿ ಹುಬ್ಬಳ್ಳಿಗೆ ಬರುತ್ತಿದ್ದಾರೆ.

ಅಧಿಕಾರಕ್ಕಾಗಿಯೇ ಇಂತಹ ನಿರ್ಧಾರ ಕೈಗೊಂಡಿದ್ದಾರೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ. ಶೆಟ್ಟರ್ ಅವರು ತಮ್ಮ ಚುನಾವಣೆಯಲ್ಲಿ ಗೆಲ್ಲುವುದು ತುಂಬಾ ಕಷ್ಟಕರವಾಗಬಹುದು.

ಲಿಂಗಾಯತ ಸಮುದಾಯದ ಬೆಂಬಲವನ್ನು ಕ್ರೋಢೀಕರಿಸಲು ನೀವು ಏನು ಮಾಡುತ್ತೀರಿ?

ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇನೆ. ತಪ್ಪು ಕಲ್ಪನೆಗಳಿದ್ದರೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇವೆ. ಸಮುದಾಯಕ್ಕೆ ಅನ್ಯಾಯ ಮಾಡಿಲ್ಲ, ಸಮುದಾಯದ ಮುಖಂಡರಿಗೂ ಅತಿ ಹೆಚ್ಚು ಸ್ಥಾನ ನೀಡಿದ್ದೇವೆ.

ಈಗಿನ ಪರಿಸ್ಥಿತಿಯ ನಿಮ್ಮ ವಾಸ್ತವಿಕ ಮೌಲ್ಯಮಾಪನ ಏನು?

ಸಂಪೂರ್ಣ ಬಹುಮತ ಪಡೆದು ಸರ್ಕಾರ ರಚಿಸುತ್ತೇವೆ. ಕಾಂಗ್ರೆಸ್‌ ಪರವಾಗಿ ಅಲೆಯಿದೆ ಎನ್ನುವುದು ಕೇವಲ ಗ್ರಹಿಕೆಯಷ್ಟೇ ಮತ್ತು ಅದು ಮುರಿದ ನಮ್ಮ ಪರವೇ ಜನಾದೇಶವಾಗಲಿದೆ. ನಾವು ಸುಮಾರು 125 ಸ್ಥಾನಗಳನ್ನು ಗೆದ್ದು ಸರ್ಕಾರ ರಚಿಸುತ್ತೇವೆ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಈಗಿನ ವಾತಾವರಣ ಬೇರೇ ರೀತಿಯಾಗಿದ್ದು, ನಮ್ಮ ರಾಷ್ಟ್ರೀಯ ನಾಯಕರ ರಾಜ್ಯ ಪ್ರವಾಸದ ನಂತರ ಮುಂದಿನ 10-12 ದಿನಗಳಲ್ಲಿ ಅದು ಬಿಜೆಪಿಯ ಪರವಾಗಿ ಮತ್ತಷ್ಟು ಬದಲಾಗಲಿದೆ.

ಆ ವಿಶ್ವಾಸಕ್ಕೆ ಆಧಾರವೇನು? ನಿಮ್ಮ ಪ್ರಕಾರ ನಮ್ಮ ಮೈನಸ್ ಪಾಯಿಂಟ್‌ಗಳು ಯಾವುವು?

ಎರಡು-ಮೂರು ಜನ ಬಿಜೆಪಿ ಬಿಟ್ಟಿದ್ದು ಬಿಟ್ಟರೆ ನಮ್ಮ ಪಕ್ಷದ ಕಾರ್ಯಕರ್ತರು ನಮ್ಮನ್ನು ಬಿಟ್ಟಿಲ್ಲ. ಹುಬ್ಬಳ್ಳಿಯಲ್ಲೂ ಶೆಟ್ಟರ್ ಜೊತೆ ನಾಯಕರು ಹೋಗಿಲ್ಲ. ಇದು ಸ್ವಲ್ಪ ಪರಿಣಾಮ ಬೀರಬಹುದು, ಆದರೆ ನಾವು ಜನರಿಗೆ ಮನವರಿಕೆ ಮಾಡಲು ಪ್ರಯತ್ನಿಸುತ್ತೇವೆ.

ಈಗ ಚುನಾವಣೆಗೆ ಕೇವಲ 22 ದಿನ ಬಾಕಿ ಇರುವಾಗ ಬಿಜೆಪಿ ಮುಂದಿರುವ ಸವಾಲುಗಳೇನು?

ಯಾವುದೇ ಸವಾಲಿನ ಪ್ರಶ್ನೆಯೇ ಇಲ್ಲ. ಒಂದಿಬ್ಬರು ಹೊರತುಪಡಿಸಿ ನಮ್ಮ ಎಲ್ಲಾ ಶಾಸಕರು ಚುನಾವಣೆಯಲ್ಲಿ ಗೆಲ್ಲುತ್ತಾರೆ. ನಾವು ಇನ್ನೂ 30 ರಿಂದ 40 ಸ್ಥಾನಗಳ ಮೇಲೆ ಕೇಂದ್ರೀಕರಿಸುತ್ತಿದ್ದೇವೆ. ನಮಗೆ ಸ್ಪಷ್ಟ ಬಹುಮತ ಸಿಗಲಿದ್ದು, ಇದರಲ್ಲಿ ಯಾವುದೇ ಅನುಮಾನವಿಲ್ಲ.

ಕೊನೆಯ ಹಂತದ ಪ್ರಚಾರದಲ್ಲಿ ಹಿಂದುತ್ವ ಸಮಸ್ಯೆಯಾಗಲಿದೆಯೇ?

ಹಿಂದೂ, ಮುಸ್ಲಿಂ, ಕ್ರೈಸ್ತರು ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಸೌಹಾರ್ದತೆಯಿಂದ ಬಾಳಬೇಕು. ನಾನು ಮುಸ್ಲಿಮರ ವಿರುದ್ಧ ಒಂದು ಮಾತನ್ನೂ ಆಡಿಲ್ಲ ಮತ್ತು ಅವರು ನಮ್ಮೊಂದಿಗೆ ಸಹಕರಿಸುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ. ಅವರ ಶೇಕಡಾವಾರು (ಮುಸ್ಲಿಂ) ಮತಗಳನ್ನು ಪಡೆಯಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ನಾವು ತಾರತಮ್ಯ ಮಾಡುವುದಿಲ್ಲ...

ಹಿಜಾಬ್, ಹಲಾಲ್ ಮತ್ತು ಅಂತಹ ಇತರ ವಿಷಯಗಳ ಬಗ್ಗೆ ನಿಮ್ಮ ಅಭಿಪ್ರಾಯಗಳು?

ಅಂತಹ ಯಾವುದೇ ವಿಷಯವನ್ನು ನಾನು ಬೆಂಬಲಿಸುವುದಿಲ್ಲ.

ಟಿಕೆಟ್ ಹಂಚಿಕೆಯನ್ನು ನಿಭಾಯಿಸುವಲ್ಲಿ ಬಿಜೆಪಿಯಿಂದ ತಪ್ಪಾಗಿದೆ ಮತ್ತು ಅದನ್ನು ಚೆನ್ನಾಗಿ ನಿಭಾಯಿಸಬಹುದಿತ್ತು ಎಂದು ನೀವು ಭಾವಿಸುತ್ತೀರಾ?

ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದರಿಂದ ಸಹಜವಾಗಿಯೇ ನಮ್ಮಲ್ಲಿ ಆಕಾಂಕ್ಷಿಗಳಿದ್ದಾರೆ. ಮೂರ್ನಾಲ್ಕು ಕ್ಷೇತ್ರಗಳಲ್ಲಿ ಕೆಲ ಸಮಸ್ಯೆಗಳಿದ್ದು, ನಾಯಕರ ಜತೆ ಪ್ರತ್ಯೇಕವಾಗಿ ಮಾತನಾಡುತ್ತಿದ್ದು, ಎಲ್ಲ ಸರಿ ಹೋಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com