ಬೆಳಗಾವಿ: ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಒಬ್ಬ ಮೋಸಗಾರ, ಅವರು ಬಿಜೆಪಿ ಹಾಗೂ ಪಕ್ಷದ ನಾಯಕರಿಬ್ಬರಿಗೂ ಮೋಸ ಮಾಡಿದ್ದಾರೆ’ ಎಂದು ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರು ಶುಕ್ರವಾರ ಆರೋಪಿಸಿದ್ದಾರೆ.
ಅಥಣಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು. ಈ ಚುನಾವಣೆ ಸವದಿ ಅವರ ರಾಜಕೀಯ ಜೀವನದ ಅಂತ್ಯವಾಗಲಿದೆ ಎಂದು ಹೇಳಿದರು.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. ಅಧಿಕಾರಕ್ಕೆ ಬಂದ ಬಳಿಕ ನಾವು ಮಾಡುವ ಮೊದಲ ಕೆಲಸವೆಂದರೆ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ ಬ್ಯಾಂಕ್) ಅನ್ನು ರದ್ದುಪಡಿಸುವುದು ಮತ್ತು ಮರುಚುನಾವಣೆ ನಡೆಸುವುದಾಗಿದೆ ಎಂದು ತಿಳಿಸಿದರು.
ಕಳೆದ 20 ವರ್ಷಗಳಿಂದ ಸವದಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಡಿಸಿಸಿ ಬ್ಯಾಂಕ್ ಮರುಚುನಾವಣೆಯಿಂದ ಅವರನ್ನು ಅದರ ನಿರ್ದೇಶಕ ಸ್ಥಾನದಿಂದ ತೆಗೆದುಹಾಕಲಾಗುತ್ತದೆ. ಇದರಿಂದ ರಾಜಕೀಯ ಜೀವನ ನಾಶವಾಗುತ್ತದೆ ಎಂದರು.
ಜಿಲ್ಲೆಯ ಕೆಲವು ಹಿರಿಯ ಲಿಂಗಾಯತ ಮುಖಂಡರನ್ನೂ ಸವದಿ ವಂಚಿಸಿದ್ದಾರೆ. ಇದೀಗ ಅವರೂ ಕೂಡ ಸವದಿ ಅವರನ್ನು ದ್ವೇಷಿಸುತ್ತಿದ್ದಾರೆ. ಅಥಣಿ ಕ್ಷೇತ್ರದ ಚುನಾವಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ ಅವರು ಭಾರಿ ಅಂತರದಿಂದ ವಿಜಯ ಸಾಧಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕಕ್ಕೆ ಕೃಷ್ಣಾ ನದಿ ಮೂಲಕ ನೀರು ಬಿಡಲು ಮಹಾರಾಷ್ಟ್ರ ಒಪ್ಪಿಗೆ ನೀಡಲು ನನ್ನ ಪ್ರಯತ್ನವೇ ಪ್ರಮುಖ ಕಾರಣ ಎಂಬ ಎಂಎಲ್ಸಿ ಪ್ರಕಾಶ್ ಹುಕ್ಕೇರಿ ಹೇಳಿಕೆಗೆ ಪ್ರತಿಕ್ರಿಯಿಸಿ, ಇದು ನಿಜವಲ್ಲ. ಕರ್ನಾಟಕಕ್ಕೆ ನೀರು ಬಿಡುವಂತೆ ಮಹಾರಾಷ್ಟ್ರಕ್ಕೆ ಮನವರಿಕೆ ಮಾಡಿದ್ದು ನನ್ನ ಪ್ರಯತ್ನವೇ ಹೊರತು ಅವರದ್ದಲ್ಲ ಎಂದು ಹೇಳಿದರು.
ಈ ಸಂದರ್ಭಧಲ್ಲಿ ಶಾಸಕ ಮಹೇಶ ಕುಮಟಳ್ಳಿ, ಕಾಗವಾಡ ಶಾಸಕ ಶ್ರೀಮಂತ ಪಾಟೀಲ್, ಗಿರೀಶ ಗುಠಾಳೆ, ಆರ್.ಎಸ್. ಪೂಜಾರಿ ಇತರರು ಉಪಸ್ಥಿತರಿದ್ದರು.
Advertisement