ಪ್ರಜಾಪ್ರಭುತ್ವ ಉಳಿಯಬೇಕಾದರೆ ಬಿಜೆಪಿ ಅಧಿಕಾರದಿಂದ ಹೋಗಬೇಕು: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕೇಂದ್ರ ಮತ್ತು ಕರ್ನಾಟಕದಲ್ಲಿನ ಬಿಜೆಪಿ ನೇತೃತ್ವದ ಭ್ರಷ್ಟ ಸರ್ಕಾರವನ್ನು ಅಧಿಕಾರದಿಂದ ಹೊರಹಾಕಿದರೆ ಮಾತ್ರ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲು ಅವಕಾಶವಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಮಂಗಳೂರು: ಕೇಂದ್ರ ಮತ್ತು ಕರ್ನಾಟಕದಲ್ಲಿನ ಬಿಜೆಪಿ ನೇತೃತ್ವದ ಭ್ರಷ್ಟ ಸರ್ಕಾರವನ್ನು ಅಧಿಕಾರದಿಂದ ಹೊರಹಾಕಿದರೆ ಮಾತ್ರ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಲು ಅವಕಾಶವಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮ್ಮ ನೇತೃತ್ವದ ಸರ್ಕಾರಗಳಲ್ಲಿನ (ಬಿಜೆಪಿ ಆಡಳಿತವಿರುವ ರಾಜ್ಯಗಳು) ಭ್ರಷ್ಟಾಚಾರದ ಬಗ್ಗೆ ಮೌನವಾಗಿದ್ದಾರೆ. ವಿರೋಧ ಪಕ್ಷದ ನಾಯಕರ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಮತ್ತು ಕೇಂದ್ರ ತನಿಖಾ ದಳ (ಸಿಬಿಐ) ಸೇರಿದಂತೆ ತನಿಖಾ ಸಂಸ್ಥೆಗಳನ್ನು ಬಳಸುತ್ತಿದ್ದಾರೆ ಎಂದು ದೂರಿದರು.

ವಿರೋಧ ಪಕ್ಷದ ನಾಯಕರ ವಿರುದ್ಧದ ವಿಷಯ ಬಂದಾಗ ಮಾತ್ರ ಮೋದಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ದೇಶದಲ್ಲಿ ಹಲವಾರು ಯೋಜನೆಗಳೊಂದಿಗೆ ಕಾಂಗ್ರೆಸ್ ಯಾವಾಗಲೂ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಮೋದಿ ಪ್ರಶ್ನಿಸುತ್ತಾರೆ. ಆದರೆ, ಅವರು ಬಿಜೆಪಿಯ ಅವಧಿಯನ್ನು ಮರೆತಿದ್ದಾರೆ. ಕಳೆದ ಒಂಬತ್ತು ವರ್ಷಗಳಲ್ಲಿ ದೇಶ ಮತ್ತು ಕರ್ನಾಟಕದಲ್ಲಿ ಡಬಲ್ ಎಂಜಿನ್ ಸರ್ಕಾರ ಏನು ಮಾಡಿದೆ? ಎಂದು ಪ್ರಶ್ನಿಸಿದರು. 

ಎಂಜಿನ್ ಹಳಿ ತಪ್ಪಿದೆ. ಸಿಂಗಲ್ ಇಂಜಿನ್ ಎಂದರೆ ಶೇ 40 ಕಮಿಷನ್, ಡಬಲ್ ಇಂಜಿನ್ ಶೇ 80ರಷ್ಟು ಕಮಿಷನ್ ಅನ್ನು ಹೊರತೆಗೆಯುತ್ತಿದೆ ಎಂದರ್ಥವೇ?. ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ಸಾರ್ವಜನಿಕರು ಸೇರಿದಂತೆ ಎಲ್ಲರಿಗೂ ಅತ್ಯಂತ ಮಹತ್ವದ್ದಾಗಿದೆ ಎಂದು ಖರ್ಗೆ ಹೇಳಿದರು.

ಬಿಜೆಪಿಯ ಅಡಿಯಲ್ಲಿ ಪ್ರಜಾಪ್ರಭುತ್ವ ಉಳಿಯುವುದು ಮತ್ತು ಸಾಂವಿಧಾನಿಕ ತತ್ವಗಳನ್ನು ಅನುಸರಿಸುವುದು ನಡೆಯುತ್ತಿಲ್ಲ. 224 ಸದಸ್ಯ ಬಲದ ವಿಧಾನಸಭೆಯಲ್ಲಿ ಜನರು 150 ಸ್ಥಾನಗಳನ್ನು ನೀಡುವ ಮೂಲಕ ಕಾಂಗ್ರೆಸ್‌ಗೆ ಬಹುಮತ ನೀಡಬೇಕು ಎಂದು ಮತದಾರರನ್ನು ಒತ್ತಾಯಿಸಿದ ಖರ್ಗೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಲು ಜನರು ಮುಂದಾಗಬೇಕು ಎಂದು ಹೇಳಿದರು.

ನಾವು ಕರ್ನಾಟಕದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು, ಆಡಳಿತ ಮತ್ತು ರಾಜ್ಯದಲ್ಲಿ ಆಗಿರುವ ಅಭಿವೃದ್ಧಿಯ ಬಗ್ಗೆ ಮಾತನಾಡಬೇಕು. ರಾಜ್ಯದಲ್ಲಿ ಈಗ ಕಮಿಷನ್ ಇಲ್ಲದೆ ಯಾವುದೇ ಕೆಲಸ ಸಾಧ್ಯವಿಲ್ಲ. ಸಮರ್ಥ ಆಡಳಿತ, ಅಭಿವೃದ್ಧಿ ಮತ್ತು ಬಂಡವಾಳ ಹೂಡಿಕೆಗೆ ಹೆಸರಾಗಿದ್ದ ಕರ್ನಾಟಕ, ಬಿಜೆಪಿ ಸರ್ಕಾರದ ದುರಾಡಳಿತದಿಂದ ಎಲ್ಲ ಖ್ಯಾತಿಯನ್ನು ಕಳೆದುಕೊಳ್ಳುತ್ತಿದೆ. ಬಿಜೆಪಿ ಸರ್ಕಾರ ಶಿಕ್ಷಣ ಮತ್ತು ಬಂಡವಾಳ ಹೂಡಿಕೆಯನ್ನು ನಿರ್ಲಕ್ಷಿಸಿ ನೇರವಾಗಿ ಭ್ರಷ್ಟಾಚಾರದಲ್ಲಿ ತೊಡಗಿದೆ. ದೇಶದಲ್ಲಿ ನಿರುದ್ಯೋಗ ಯುವಕರ ಮುಖ ನೋಡುತ್ತಿದೆ ಎಂದು ಖರ್ಗೆ ಹೇಳಿದರು.

ರಾಜ್ಯವನ್ನು ‘ಎಟಿಎಂ’ ಮಾಡಲು ಕಾಂಗ್ರೆಸ್ ಬಯಸುತ್ತಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಖರ್ಗೆ, 'ಬಿಜೆಪಿ ಹಣ ಮತ್ತು ಬಲವನ್ನು ಬಳಸುತ್ತಿದೆ, ರಾಜಕೀಯ ಲಾಭಕ್ಕಾಗಿ ಸರ್ಕಾರಿ ಯಂತ್ರವನ್ನು ಬಳಸುತ್ತಿದೆ' ಎಂದು ದೂರಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಹಾಲಿ ಶಾಸಕ ಯುಟಿ ಖಾದರ್, ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ ಆರ್ ಲೋಬೋ, ಬಂಟ್ವಾಳ ಅಭ್ಯರ್ಥಿ ಬಿ ರಮಾನಾಥ್ ರೈ, ಎಂಎಲ್‌ಸಿ ಮಂಜುನಾಥ್ ಭಂಡಾರಿ, ಮಾಜಿ ಎಂಎಲ್‌ಸಿ ಐವನ್ ಡಿಸೋಜಾ ಉಪಸ್ಥಿತರಿದ್ದರು.

ಕರ್ನಾಟಕದಲ್ಲಿ ಮೇ 10 ರಂದು ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com