ಬಿಜೆಪಿ-ಜೆಡಿಎಸ್‌ ನಡುವೆ ಒಳ ಒಪ್ಪಂದ: ಪ್ರೀತಂಗೌಡ ವಿರುದ್ಧ ಅಶ್ವತ್ಥ್ ನಾರಾಯಣ್‌ ಕಿಡಿ

ಬಿಜೆಪಿ-ಜೆಡಿಎಸ್‌ ನಡುವೆ ಒಳ ಒಪ್ಪಂದವಾಗಿದೆ ಎಂದು ಶಾಸಕ ಪ್ರೀತಂ ಗೌಡ ಅವರು ಹೇಳಿದ್ದು, ಈ ಹೇಳಿಕೆ ವಿರುದ್ಧ ಅಶ್ವತ್ಥ್ ನಾರಾಯಣ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.
ಅಶ್ವತ್ಥ್ ನಾರಾಯಣ್ ಮತ್ತು ಪ್ರೀತಂ ಗೌಡ.
ಅಶ್ವತ್ಥ್ ನಾರಾಯಣ್ ಮತ್ತು ಪ್ರೀತಂ ಗೌಡ.

ಬೆಂಗಳೂರು: ಬಿಜೆಪಿ-ಜೆಡಿಎಸ್‌ ನಡುವೆ ಒಳ ಒಪ್ಪಂದವಾಗಿದೆ ಎಂದು ಶಾಸಕ ಪ್ರೀತಂ ಗೌಡ ಅವರು ಹೇಳಿದ್ದು, ಈ ಹೇಳಿಕೆ ವಿರುದ್ಧ ಅಶ್ವತ್ಥ್ ನಾರಾಯಣ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೂ ಇಂತಹ ಹೇಳಿಕೆಗಳನ್ನ ನೀಡಬಾರದು. ಇದು ತಪ್ಪು ಸಂದೇಶವನ್ನು ರವಾನಿಸುತ್ತದೆ. ಜೆಡಿಎಸ್ ಅಥವಾ ಕಾಂಗ್ರೆಸ್ ಇಬ್ಬರೂ ಸಹ ಬಿಜೆಪಿ ಪ್ರತಿಸ್ಪರ್ಧಿಗಳು. ಮೋದಿ ಹೆಸರು ಹೇಳಿಕೊಂಡು ಈ ರೀತಿಯ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ಕುರಿತು ಮಾತನಾಡಿ, ಚುನಾವಣೆ ಪ್ರಜಾಪ್ರಭುತ್ವದ ಹಬ್ಬ. ಜನರ ಬೇಡಿಕೆ, ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಚುನಾವಣೆ ನಡೆಯುತ್ತೆ. ಇದರಲ್ಲಿ ಎಲ್ಲರೂ ಭಾಗಿಯಾಗುತ್ತಾರೆ. ನಾವು ಮಾಡಿರುವ ಅಭಿವೃದ್ಧಿ ಕೆಲಸಗಳ ಬಗ್ಗೆ ಜನತೆಗೆ ತಿಳಿಸುತ್ತೇವೆ. ಕಾಂಗ್ರೆಸ್ ಪಕ್ಷದ ಶಕ್ತಿ ಎಲ್ಲಿದೆ ಎಂಬ ಬಗ್ಗೆ ಅಧ್ಯಕ್ಷರಿಗೆ ತಿಳುವಳಿಕೆ ಇಲ್ಲ. 21 ಶತಮಾನ ಜ್ಞಾನ ಆಧಾರಿತ ಶತಮಾನ ಅನ್ನೋದು ಗೊತ್ತಿಲ್ಲ. ಮಾಹಿತಿ ತಂತ್ರಜ್ಞಾನ, ಶಿಕ್ಷಣ, ಬ್ಯಾಂಕಿಂಗ್ ಬಗ್ಗೆ ಏನೂ ಗೊತ್ತಿಲ್ಲ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.

ಹಾಸನ ಕ್ಷೇತ್ರದಲ್ಲಿ ನಿನ್ನೆ ಪ್ರಚಾರದ ವೇಳೆ ಮಾತನಾಡಿದ್ದ ಬಿಜೆಪಿ ಶಾಸಕ ಪ್ರೀತಂ ಗೌಡ, ಜೆಡಿಎಸ್‌ ಪಕ್ಷಕ್ಕೆ ಯಾವುದೇ ಕಾರಣಕ್ಕೂ ಬಹುಮತ ಬರುವುದಿಲ್ಲ. ಈಗಾಗಲೇ ದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಹೇಬ್ರು ಹಾಗೂ ದೇವೇಗೌಡ್ರು ಇಬ್ಬರೂ ಒಪ್ಪಂದ ಮಾಡಿಕೊಂಡಿದ್ದಾರೆ. ಹಾಗಾಗಿ ನೀವು ಜೆಡಿಎಸ್‌ಗೆ ಮತ ಹಾಕಿದರೂ ಬಿಜೆಪಿಗೆ ಹಾಕಿದಂತೆ ಎಂದು ಹೇಳಿದ್ದರು.

ನೀವು ಹಾಸನದಿಂದ ಬೆಂಗಳೂರಿಗೆ ಹೋಗುವುದಾದರೆ ಬೆಳ್ಳೂರು ಕ್ರಾಸ್‌ ಮೇಲೆಯೇ ಹೋಗಬೇಕು. ಅದನ್ನು ಬಿಟ್ಟು ಮೈಸೂರು ಸುತ್ತಿಕೊಂಡು ಹೋಗುತ್ತೇನೆ ಎಂದರೆ ನಾನೇನು ಮಾಡಲು ಆಗಲ್ಲ. ಎಲ್ಲಾ ಹಳ್ಳದ ನೀರು ಹರಿದು ಸಮುದ್ರಕ್ಕೇ ಬರೋದು. ಹಾಗಾಗಿ ನೀವು ಸುತ್ತಾಡಿಕೊಂಡು ನನ್ನ ಬಳಿ ಬರುವುದಕ್ಕಿಂತ ನೇರವಾಗಿ ಬನ್ನಿ. ಜೆಡಿಎಸ್‌ ಗೆ ಮತ ಹಾಕದಾರೆ ಬಿಜೆಪಿಗೆ ಮತ ಹಾಕಿದಂತೆ ಎಂದು ತಿಳಿಸಿದ್ದರು.

ಮಾತು ಕೊಡಿ ದೇವಸ್ಥಾನ ‌ಕಟ್ಟಿಸಿಕೊಡುತ್ತೇನೆ; ಮತದಾರರಿರೆ ಪ್ರೀತಂ ಗೌಡ ಆಮಿಷ
ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದು, ಬಿಜೆಪಿ ಅಭ್ಯರ್ಥಿ ಪ್ರೀತಂ ಗೌಡ ಅವರು ಮತದಾರರಿಗೆ ಆಮಿಷವೊಡ್ಡಿದ್ದಾರೆಂಬ ಆರೋಪಗಳು ಕೇಳಿ ಬಂದಿದೆ.

ಹಾಸನ ತಾಲೂಕಿನ ಸಾಲಗಾಮೆ ಹೋಬಳಿಯ ಮಲ್ಲನಾಯಕನಹಳ್ಳಿಯಲ್ಲಿ ಬುಧವಾರ ನಡೆದ ಬಿಜೆಪಿ ರೋಡ್‌ ಶೋನಲ್ಲಿ ಪ್ರೀತಂ ಗೌಡ ಮುಂದೆ ಗ್ರಾಮಸ್ಥರು ದೇವಸ್ಥಾನ ‌ಕಟ್ಟಿಸಿಕೊಡಿ ಎಂದು ಬೇಡಿಕೆ‌ ಇಟ್ಟಿದ್ದು, ಈ ವೇಳೆ ಪ್ರೀತಂ ಅವರು,'ಊರಲ್ಲಿ ಎಷ್ಟು ಓಟು ಇದೆಯಣ್ಣ, ನಿಮ್ಮೂರಿನಲ್ಲಿ ಹೇಳಿ ಬೂತ್‌ನಲ್ಲಿ ಬೇಡ' ಎಂದಿದ್ದಾರೆ. ಈ ವೇಳೆ ಯುವಕನೊಬ್ಬ 150 ಮತ ಇದೆ ಎಂದಿದ್ದಾನೆ.

ಬಳಿಕ ಮಾತು ಮುಂದುವರಿಸಿದ ಪ್ರೀತಂ ಗೌಡ, 150 ಮತಗಳಲ್ಲಿ ಓಟಿಂಗ್ ಆಗೋದು 120, 130 ಅಲ್ವೇನಣ್ಣ, 120, 130ಕ್ಕೆ ಎಷ್ಟು ಓಟು ಹಾಕ್ತಿರಾ ಹೇಳಿ, ಒಂದು ಲೆಕ್ಕಾ ಇರಲಿ. 65- 70 ಓಟು ಹಾಕುತ್ತೇವೆ ಎಂದು ನಮ್ಮ ಹಿರಿಯರು, ನಮ್ಮ ತಾಯಂದಿರು ಎಲ್ಲಾ ಸೇರಿ ಹೇಳುತ್ತಿದ್ದಾರೆ. ದೇವಸ್ಥಾನದ ವಿಚಾರದಲ್ಲಿ ಯಾರು ಸುಳ್ಳು ಹೇಳುವುದಿಲ್ಲ. 70 ಜನ ಯಾರು, ಯಾರು ಮತ ಹಾಕುವವರು ಬಂದು ದೇವಸ್ಥಾನದ ಮುಂದೆ ಮಂಗಳಾರತಿ ಮಾಡಿಸಿ, ಗುದ್ದಲಿ ಪೂಜೆ ಮಾಡಿ ಕೆಲಸ ಪ್ರಾರಂಭ ಮಾಡಿಸಿ, ದೇವಸ್ಥಾನ ಮಾಡಿಕೊಡುವುದು ನನ್ನ ಜವಾಬ್ದಾರಿ ಎಂದಿದ್ದಾರೆ.

ಆ ಎಪ್ಪತ್ತು ಜನ ಬಂದು ಪೂಜೆ ಮಾಡಿಸಿ ಪ್ರೀತಂ ಗೌಡರ ಜೊತೆ ಇರುತ್ತೇವೆ. ಓಟು ಹಾಕುತ್ತೇವೆ ಎಂದು ಮಾತು ಕೊಡಿ. ಉಳಿದಿದ್ದು ಕೆಲಸ ನಾನು ಮಾಡುತ್ತೇನೆ. ಎಪ್ಪತ್ತಕ್ಕಿಂತ ಕಡಿಮೆ ಓಟು ಬಂದರೆ ಚುನಾವಣೆ ಆದ ಮೇಲೆ ಮಾತಾಡುತ್ತೇನೆ. ಯಾರು ಎಪ್ಪತ್ತು ಜನ ಅಂತ ಈಗ ಕರೆದು ಪೂಜೆ ಮಾಡಿಸಿ. ಏಕೆಂದರೆ ನನಗೆ ನೆಂಟಸ್ಥನದ್ದು ಕಾಟ ಜಾಸ್ತಿ ನನಗೆ ಎಂದಿದ್ದಾರೆಂದು ತಿಳಿದುಬಂದಿದೆ.

ಹಾಸನದಲ್ಲಿ ಇರುತ್ತಾರೆ ಚುನಾವಣೆ ಬಂದ ಕೂಡಲೇ ಇಲ್ಲಿ ಬಂದು ನೆಂಟಸ್ಥನ ಮಾಡಿಕೊಂಡು, ನಮ್ಮ ಅಣ್ಣ, ತಮ್ಮ, ಅವರು ನನಗೆ ನೆಂಟರು, ಇವರು ನನಗೆ ನೆಂಟರು ಎಂದು ಬೇರೆ ಪಕ್ಷದ ಕಡೆಗೆ ಮುಖ ಮಾಡಿದರೆ. ನಾನು ಮಾಡಿದ ಕೆಲಸಕ್ಕೆ ಕೂಲಿ ಕೊಡುವುದು ಯಾರು ಎಂದು ಪ್ರಶ್ನಿಸಿದ್ದಾರೆ.

ನಿಮಗೆ ಕೈ ಮುಗಿದು ಕೇಳಿಕೊಳ್ಳುತ್ತೇನೆ. ಎಪ್ಪತ್ತು ಜನನು ಮಂಗಳಾರತಿ ಮಾಡಿ. ಪ್ರೀತಂ ಗೌಡಂಗೆ ಓಟು ಹಾಕುತ್ತೇವೆ ಅಂತ ತೀರ್ಮಾನ ಮಾಡಿ ಕೆಲಸ ಮಾಡಿಕೊಡುವುದು ನನ್ನ ಜವಾಬ್ದಾರಿ ಎಂದು ಮತದಾರರಿಗೆ ಆಮಿಷವೊಡ್ಡಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com