ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜ್ಯದಲ್ಲಿ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದು, ದ್ವೇಷ ಹರಡಲು ಪ್ರಯತ್ನ ನಡೆಸುತ್ತಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ನಾಯಕರು ನಗರದ ಪೊಲೀಸರಿಗೆ ಗುರುವಾರ ದೂರು ನೀಡಿದೆ. ಆದರೆ, ಕರ್ನಾಟಕ ಬಿಜೆಪಿ ಇದನ್ನು ತಳ್ಳಿಹಾಕಿದೆ.
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮಾತನಾಡಿ, ರಾಜ್ಯದಲ್ಲಿ ಅಮಿತ್ ಶಾ ಅವರ ಕಾರ್ಯಕ್ರಮಗಳನ್ನು ಬಹಿಷ್ಕರಿಸಬೇಕೆಂಬ ಕಾಂಗ್ರೆಸ್‌ನ ಬೇಡಿಕೆಯನ್ನು ಚುನಾವಣಾ ಆಯೋಗ ಪರಿಶೀಲಿಸಲಿದೆ. 'ನಾವು ಅಮಿತ್ ಶಾ ಬದಲಿಗೆ ಒಸಾಮಾ ಬಿನ್ ಲಾಡೆನ್‌ನನ್ನು ಕರೆತರಬೇಕೇ?' ಎಂದು ವ್ಯಂಗ್ಯವಾಡಿದ್ದಾರೆ.
ಈ ಜನರಿಗೆ (ಕಾಂಗ್ರೆಸ್ ಪಕ್ಷದ ನಾಯಕರು) ಮದನಿ (ಅಬ್ದುಲ್ ನಾಸರ್ ಮದನಿ), ಲಾಡೆನ್ ಮತ್ತು ದಾವೂದ್ ಇಬ್ರಾಹಿಂ ಬೇಕು. ಅವರಿಗೆ ದೇಶಭಕ್ತ ಅಮಿತ್ ಶಾ ಬೇಡವೇ? ಎಂದು ರವಿ ಪ್ರಶ್ನಿಸಿದರು.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗ್ಯಾಂಗ್ (ಬೆಂಗಳೂರಿನ ಹಿಂಸಾಚಾರದ ಆರೋಪಿಗಳು) ತಮ್ಮ ಸಹೋದರರು ಎಂದು ಹೇಳಿಕೆ ನೀಡಿದ್ದರು. ಬೆಂಗಳೂರಿನ ಪಾದರಾಯನಪುರ ಹಿಂಸಾಚಾರದ ವೇಳೆ ಆರೋಪಿಗಳ ಜತೆ ನಿಂತಿದ್ದರು. ರಾಜ್ಯದಲ್ಲಿ ಈ ತಾಲಿಬಾನ್ ಗ್ಯಾಂಗ್ ಮುನ್ನೆಲೆಗೆ ಬರುತ್ತಿದೆ. ಕಾಂಗ್ರೆಸ್ ಆಡಳಿತ ಎಂದರೆ ತಾಲಿಬಾನ್ ಮಾದರಿಯ ಆಡಳಿತ. ಕಾಂಗ್ರೆಸ್ ಆಡಳಿತದಲ್ಲಿ ಕೋಮು ಘರ್ಷಣೆ ಗ್ಯಾರಂಟಿ. ಕೋಮುಗಲಭೆ ಸೃಷ್ಟಿಸುವವರೆಲ್ಲ ಆ ಪಕ್ಷದ ಜೊತೆ ಕೈಜೋಡಿಸಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಕೋಮುಗಲಭೆ ನಡೆಯುತ್ತದೆ ಎಂಬ ಅಮಿತ್ ಶಾ ಹೇಳಿಕೆ ಸರಿಯಾಗಿದೆ. 'ಒಂದು ವಿಷಯ ಸ್ಪಷ್ಟವಾಗಿದೆ, ಅದೇನೆಂದರೆ ಕಾಂಗ್ರೆಸ್ ಪಕ್ಷವು ಪಿಎಫ್‌ಐ ಮತ್ತು ಎಸ್‌ಡಿಪಿಐ ಜೊತೆ ಕೈಜೋಡಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಾಲಿಬಾನಿ ಶಕ್ತಿಗಳು ಅಭಿವೃದ್ಧಿ ಹೊಂದುತ್ತವೆ ಮತ್ತು ಡಿಜೆ ಹಳ್ಳಿ-ಕೆಜಿ ಹಳ್ಳಿ ಗ್ಯಾಂಗ್‌ಗಳು ಸಕ್ರಿಯಗೊಳ್ಳುತ್ತವೆ ಎಂದು ಹೇಳಿದರು.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿ, ಕಾಂಗ್ರೆಸ್ ಆಡಳಿತದಲ್ಲಿ ಕೋಮುಗಲಭೆಗಳು ನಡೆದಿದ್ದವು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅವು ನಿಂತು ಹೋಗಿದ್ದವು. ಅಮಿತ್ ಶಾ ಅವರು ದೇಶದಲ್ಲಿ ಕೋಮುಗಲಭೆ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ನಿಲ್ಲಿಸಿದರು. ಅವರು ದಿವಂಗತ ಸರ್ದಾರ್ ಪಟೇಲ್ ನಂತರ ಅತ್ಯಂತ ಸಮರ್ಥ ಗೃಹ ಸಚಿವರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
Advertisement