'ಹೈಕಮಾಂಡ್ ನಿಂದ ಕರೆ ಬಂದಿದೆ, ಹಾಗಾಗಿ ಹೋಗ್ತಿದ್ದೀವಿ': ಸಿಎಂ ಸಿದ್ದರಾಮಯ್ಯ, ಸಂಪುಟ ಸಚಿವರು ದೆಹಲಿಗೆ ಪ್ರಯಾಣ

ಲೋಕಸಭೆ ಚುನಾವಣೆಗೆ ಸಿದ್ಧತೆ, ರಾಜ್ಯ ಕಾಂಗ್ರೆಸ್ ನಲ್ಲಿ ಶಾಸಕರು ಮತ್ತು ಕೆಲ ನಾಯಕರ ಅಸಮಾಧಾನ ಬೆನ್ನಲ್ಲೇ ಹೈಕಮಾಂಡ್ ದೆಹಲಿಯಲ್ಲಿ ಇಂದು ಬುಧವಾರ ಸಭೆ ಕರೆದಿದ್ದು ಈಗಾಗಲೇ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅವರ ಸಂಪುಟದ ಸಚಿವರು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ದೆಹಲಿಗೆ ಪ್ರಯಾಣಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ಮತ್ತು ಅವರ ಸಂಪುಟ ಸಚಿವರು
ಸಿಎಂ ಸಿದ್ದರಾಮಯ್ಯ ಮತ್ತು ಅವರ ಸಂಪುಟ ಸಚಿವರು

ಬೆಂಗಳೂರು: ಲೋಕಸಭೆ ಚುನಾವಣೆಗೆ ಸಿದ್ಧತೆ, ರಾಜ್ಯ ಕಾಂಗ್ರೆಸ್ ನಲ್ಲಿ ಶಾಸಕರು ಮತ್ತು ಕೆಲ ನಾಯಕರ ಅಸಮಾಧಾನ ಬೆನ್ನಲ್ಲೇ ಹೈಕಮಾಂಡ್ ದೆಹಲಿಯಲ್ಲಿ ಇಂದು ಬುಧವಾರ ಸಭೆ ಕರೆದಿದ್ದು ಈಗಾಗಲೇ ಸಿಎಂ ಸಿದ್ದರಾಮಯ್ಯ ಸೇರಿದಂತೆ ಅವರ ಸಂಪುಟದ ಸಚಿವರು ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ದೆಹಲಿಗೆ ಪ್ರಯಾಣಿಸಿದ್ದಾರೆ.

ದೆಹಲಿಯಲ್ಲಿ ಇಂದು ಕಾಂಗ್ರೆಸ್​ ಹೈಕಮಾಂಡ್​ ಸಭೆ ಹಿನ್ನೆಲೆ ಬೆಳಗ್ಗೆ 9:45ರ ವಿಮಾನದಲ್ಲಿ ಸಿಎಂ, ಸಚಿವರು ಸೇರಿ ಕೆಂಪೇಗೌಡ ಏರ್​ಪೋರ್ಟ್​ನಿಂದ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.

ದೆಹಲಿಯಲ್ಲಿ ಹೈಕಮಾಂಡ್‌ ಜೊತೆ ನಡೆಯಲಿರುವ ಹೈವೋಲ್ಟೇಜ್ ಮೀಟಿಂಗ್‌ನಲ್ಲಿ ಭಾಗಿಯಾಗಲು ಸಿಎಂ ಸಿದ್ದರಾಮಯ್ಯ ತೆರಳಿದರು. ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳಿದ ಸಿದ್ದರಾಮಯ್ಯ, ವರಿಷ್ಠರ ಜೊತೆಗೆ ಸಭೆ ನಡೆಸುವುದರ ಜೊತೆಗೆ ಕೇಂದ್ರ ಸಚಿವರ ಜೊತೆಗೂ ಸಭೆಯನ್ನು ನಡೆಸಲಿದ್ದಾರೆ.

ಲೋಕಸಭಾ ಚುನಾವಣೆ ಸಿದ್ದತೆ ಹಾಗೂ ಪಕ್ಷದ ಸಂಘಟನೆಯ ದೃಷ್ಟಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಸೇರಿದಂತೆ ರಾಷ್ಟ್ರೀಯ ನಾಯಕರ ಜೊತೆಗೆ ಮೊದಲು ಸಭೆ ನಡೆಯಲಿದೆ. ಈ ಸಭೆಯಲ್ಲಿ ಚುನಾವಣೆಯ ಸಿದ್ದತೆಗಳ ಕುರಿತಾಗಿ ಚರ್ಚೆ ನಡೆಯಲಿದೆ.

ಈಗಾಗಲೇ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ರಾಹುಲ್ ಗಾಂಧಿಯ ಜೊತೆಗೆ ಸಚಿವರ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಬಹುತೇಕ ಸಚಿವರು ದೆಹಲಿಗೆ ತೆರಳಿದ್ದಾರೆ.

ಸಚಿವರ ಜೊತೆಗೂ ಸಭೆ: ಇದೇ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಜೊತೆಗೆ ಸಚಿವರ ಸಭೆಯನ್ನು ಕರೆಯಲಾಗಿದೆ. ಸಂಜೆ 5.30 ಕ್ಕೆ ಸಚಿವರ ಸಭೆ ನಡೆಯಲಿದ್ದು, ನೂತನ ಸಚಿವರಿಗೆ ರಾಹುಲ್ ಗಾಂಧಿ ಕೆಲವು ಸಲಹೆ ಸೂಚನೆಗಳನ್ನು ನೀಡಲಿದ್ದಾರೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಮುಂದಿನ ಐದು ವರ್ಷಗಳ ಕಾಲ ಹೇಗೆ ಜನ ಪರವಾದ ಆಡಳಿತ ನೀಡಬೇಕು ಎಂಬ ನಿಟ್ಟಿನಲ್ಲಿ ಕೆಲವೊಂದು ಸಲಹೆಗಳನ್ನು ನೀಡುವ ಸಾಧ್ಯತೆ ಇದೆ.

ಭಿನ್ನಾಭಿಪ್ರಾಯಗಳ ಬಗ್ಗೆಯೂ ಚರ್ಚೆ: ದೆಹಲಿ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಭಿನ್ನಾಭಿಪ್ರಾಯಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಸಚಿವರ ಕಾರ್ಯವೈಖರಿಯ ಕುರಿತಾಗಿ ಕೆಲವು ಶಾಸಕರು ಸಿಎಂಗೆ ಪತ್ರವನ್ನು ಬರೆದಿದ್ದು, ರಾಜ್ಯ ಸರ್ಕಾರಕ್ಕೆ ಇದು ಮುಜುಗರ ತಂದೊಡ್ಡಿದೆ. ಈ ನಿಟ್ಟಿನಲ್ಲಿ ಹೈಕಮಾಂಡ್‌ ಕೆಲವೊಂದು ಸಲಹೆ ಸೂಚನೆಗಳನ್ನು ನೀಡುವ ಸಾಧ್ಯತೆ ಇದೆ.

ದೆಹಲಿಗೆ ಹೊರಟ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಪಕ್ಷದ ಆದೇಶದಂತೆ ದೆಹಲಿಗೆ ಹೋಗುತ್ತಿದ್ದೇವೆ. ಹೈಕಮಾಂಡ್ ಅಜೆಂಡಾ ಏನು, ಚರ್ಚೆ ಏನು ಮಾಡುತ್ತಾರೆ ಎಂದು ಗೊತ್ತಿಲ್ಲ ಎಂದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನ ಬೇರೆಯವರಿಗೆ,ಚೆನ್ನಾಗಿ ಕೆಲಸ ಮಾಡುವವರಿಗೆ ಕೊಟ್ಟರೆ ಸಂತೋಷ, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಬದಲಾವಣೆ ತಂದರೆ ನಾವು ಸ್ವಾಗತಿಸುತ್ತೇವೆ ಎಂದರು. 

ಹೈಕಮಾಂಡ್ ಬುಲಾವ್ ಹಿನ್ನೆಲೆಯಲ್ಲಿ ದೆಹಲಿಗೆ ಹೊರಟ ಸಚಿವ ಜಮೀರ್ ಅಹ್ಮದ್, ಎಲ್ಲಾ ಮಂತ್ರಿಗಳನ್ನು ಹೈಕಮಾಂಡ್ ಸಭೆಗೆ ಕರೆದಿದ್ದಾರೆ. ರಾಜ್ಯ ಕಾಂಗ್ರೆಸ್ ನಲ್ಲಿ ಶಾಸಕರು, ನಾಯಕರಿಗೆ ಯಾವುದೇ ಅಸಮಾಧಾನವಿಲ್ಲ. ಇತ್ತೀಚೆಗೆ ರಾಹುಲ್ ಗಾಂಧಿಯವರು ಬೆಂಗಳೂರಿಗೆ ಬಂದಿದ್ದಾಗಲೇ ಸಭೆ ನಡೆಸಬೇಕಾಗಿತ್ತು. ಯಾವುದೋ ಕಾರಣದಿಂದ ಸಭೆ ಕ್ಯಾನ್ಸಲ್ ಆಗಿತ್ತು, ಹಾಗಾಗಿ ಈಗ ದೆಹಲಿಗೆ ಎಲ್ಲಾ 34 ಸಚಿವರನ್ನು ಕರೆದಿದ್ದಾರೆ. ಹಾಗಾಗಿ ಹೋಗುತ್ತಿದ್ದೇವೆ, ಅದು ಬಿಟ್ಟರೆ ಬೇರೇನು ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

37 ನಾಯಕರಿಗೆ ಆಹ್ವಾನ: ಇಂದು ನಡೆಯಲಿರುವ ಮೊದಲ ಸಭೆಗೆ ರಾಜ್ಯ ಕಾಂಗ್ರೆಸ್‌ನ ಒಟ್ಟು 37 ನಾಯಕರಿಗೆ ಆಹ್ವಾನ ನೀಡಲಾಗಿದೆ. 37 ನಾಯಕರಲ್ಲಿ ಸಿಎಂ, ಡಿಸಿಎಂ ಸೇರಿದಂತೆ 19 ಸಚಿವರು ಭಾಗಿಯಾಗಲಿದ್ದಾರೆ. ಜೊತೆಗೆ ಸಂಸದರಾದ ಡಿ.ಕೆ‌ ಸುರೇಶ್, ಜಿ.ಸಿ‌ ಚಂದ್ರಶೇಖರ್, ಎಲ್‌. ಹನುಮಂತಯ್ಯ ಭಾಗಿಯಾಗಲಿದ್ದು ಸಭೆಗೆ ಹಿರಿಯ ಶಾಸಕರಿಗೂ ಆಹ್ವಾನ ನೀಡಲಾಗಿದೆ. ಲಕ್ಷ್ಮಣ ಸವದಿ, ಜಗದೀಶ್‌ ಶೆಟ್ಟರ್, ರಾಘವೇಂದ್ರ ಹಿಟ್ನಾಳ್, ತುಕಾರಾಂ, ವಿನಯ್ ಕುಲಕರ್ಣಿ‌ ಭಾಗಿಯಾಲಿದ್ದಾರೆ. ಅಷ್ಟೇ ಅಲ್ಲದೆ ರಮೇಶ್‌ ಕುಮಾರ್ ಹಾಗೂ ಆರ್.‌ವಿ ದೇಶಪಾಂಡೆ ಸಭೆಯಲ್ಲಿ‌ ಭಾಗಿಯಾಗಲಿದ್ದಾರೆ. ಇತ್ತೀಚೆಗೆ ಈಡಿಗರ ಸಮಾವೇಶದಲ್ಲಿ ಪರೋಕ್ಷವಾಗಿ ಪಕ್ಷದ. ನಾಯಕರ ವಿರುದ್ಧ ಅಸಮಧಾನ ಹೊರಹಾಕಿದ್ದ ಬಿ.ಕೆ ಹರಿಪ್ರಸಾದ್ ಅವರಿಗೂ ಆಹ್ವಾನ ನೀಡಲಾಗಿದೆ.

ಇನ್ನು ಎರಡನೇ ಸಭೆಯಲ್ಲಿ ಕೇವಲ ಸಚಿವರಷ್ಟೇ ಭಾಗಿಯಾಗಲಿದ್ದು, ಇಲ್ಲಿ ಪಕ್ಷದ ಹಿರಿಯ ನಾಯಕರು ಮತ್ತು ಸಚಿವರ ನಡುವೆ ಇರುವ ಮನಸ್ತಾಪ ಬಗೆಹರಿಸುವ ಕೆಲಸ ಹೈಕಮಾಂಡ್ ಮಾಡಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com