ನೈಸ್ ಹೆಸರಿನಲ್ಲಿ ಡಿಕೆ ಬ್ರದರ್ಸ್ ಕೊಳ್ಳೆ; ನಾಳೆ ಅಥವಾ ನಾಡಿದ್ದು ದಾಖಲೆ ಬಿಡುಗಡೆ: ಕುಮಾರಸ್ವಾಮಿ

ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರವಿದ್ದಾಗ 'ಜೋಡೆತ್ತು' ಎಂಬಂತೆ ಬಿಂಬಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾವು-ಮುಂಗುಸಿಯಂತಾಗಿದ್ದು, ಪರಸ್ಪರ ಆರೋಪ, ಪ್ರತ್ಯಾರೋಪ, ವಾಗ್ದಾಳಿಯಲ್ಲಿ ನಿರತರಾಗಿದ್ದಾರೆ. 
ಎಚ್. ಡಿ. ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಸಾಂದರ್ಭಿಕ ಚಿತ್ರ
ಎಚ್. ಡಿ. ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಸಾಂದರ್ಭಿಕ ಚಿತ್ರ

ರಾಮನಗರ: ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರವಿದ್ದಾಗ 'ಜೋಡೆತ್ತು' ಎಂಬಂತೆ ಬಿಂಬಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾವು-ಮುಂಗುಸಿಯಂತಾಗಿದ್ದು, ಪರಸ್ಪರ ಆರೋಪ, ಪ್ರತ್ಯಾರೋಪ, ವಾಗ್ದಾಳಿಯಲ್ಲಿ ನಿರತರಾಗಿದ್ದಾರೆ. 

ನೈಸ್ ಸಂಸ್ಥೆ ಕುರಿತು ತಮ್ಮ ವಿರುದ್ಧ ಡಿ.ಕೆ.ಸುರೇಶ್ ಹೇಳಿಕೆ ಕುರಿತು ಭಾನುವಾರ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನೈಸ್ ಸಂಸ್ಥೆ ಹೆಸರಿನಲ್ಲಿ ಡಿ.ಕೆ. ಸಹೋದರರು ಬಾಚಿರುವ ರೈತರ ಭೂಮಿ ಹಾಗೂ ಅಕ್ರಮಗಳ ದಾಖಲೆಯನ್ನು ನಾಳೆ ಅಥವಾ ನಾಡಿದ್ದು ಬಹಿರಂಗ ಮಾಡುವುದಾಗಿ ಹೇಳಿದರು. 

ಡಿಕೆ ಸುರೇಶ್ ಸಂಸದರಾಗುವುದಕ್ಕೂ ಮುಂಚೆ ಅವರ ಆಸ್ತಿ ಎಷ್ಟಿತ್ತು?ಈಗ ಎಷ್ಟಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಡಿಕೆ ಶಿವಕುಮಾರ್ 2004ರಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದು, ರಾಮನಗರ ಜಿಲ್ಲೆಯ ಉದ್ಧಾರಕ್ಕೂ ಅಥವಾ ನೈಸ್ ಕಂಪನಿ ಉದ್ಧಾರ ಮಾಡಿ ರೈತರ ಭೂಮಿ ಲೂಟಿ ಹೊಡೆಯುವುದಕ್ಕೂ ಎಂದು ಟೀಕಿಸಿದರು.

ಬೆಂಗಳೂರು ಸುತ್ತ ಉತ್ತಮ ರಸ್ತೆ ನಿರ್ಮಾಣವಾಗಿ ಜನರಿಗೆ ಅನುಕೂಲವಾಗಲಿ ಎಂದು ದೇವೇಗೌಡರು ನೈಸ್ ಯೋಜನೆಗೆ ಒಪ್ಪಿಗೆ ನೀಡಿದರು. ಆದರೆ ಈ ಲೂಟಿಕೋರರು ಬೆಂಗಳೂರು ಸುತ್ತಮುತ್ತ ರೈತರ ಭೂಮಿಯನ್ನು ಕೊಳ್ಳೆ ಹೊಡೆದರು ಎಂದು ಆರೋಪಿಸಿದರು. 

ರಾಮನಗರ ಜಿಲ್ಲೆಗೆ ಕುಮಾರಸ್ವಾಮಿ ಮಾಡಿರುವ ಎಲ್ಲಾ ಕೆಲಸಗಳಿಗೆ ಸಾಕ್ಷ್ಯದ ಗುಡ್ಡೆಗಳಿವೆ. ಅವರು ಬೆಟ್ಟಗುಡ್ಡಗಳನ್ನು ಹೊಡೆದು ಚೀನಾಗೆ ಸಾಗಿಸಿದ್ದರ ಬಗ್ಗೆ ಕರಗಿರುವ ಬೆಟ್ಟಗುಡ್ಡಗಳ ಸಾಕ್ಷಿ ಇದೆ. 2013 ರಿಂದ 2018ರವರೆಗೆ ಶಿವಕುಮಾರ್ ಸಚಿವರಾಗಿದ್ದಾಗ ರಾಮನಗರಕ್ಕೆ ಯಾಕೆ ನೀರು ಕೊಡಲಿಲ್ಲ? ಆಗ ಏನು ಮಾಡುತ್ತಿದ್ದರು? ಬಂಡೆ ಒಡೆಯುತ್ತಾ ಕುಳಿತಿದ್ರಾ ಎಂದು ಪ್ರಶ್ನಿಸಿದರು.

ದೊಡ್ಡಾಲಹಳ್ಳಿ ಮತ್ತು ಸಾತನೂರಿನಲ್ಲಿ ಟೆಂಟ್ ನಡೆಸುತ್ತಿದ್ದವರು ಇಂದು ಅಧಿಕೃತವಾಗಿ ರೂ.1,400 ಕೋಟಿ ಆಸ್ತಿ ಮಾಡಿದ್ದಾರೆ. ಅನಧಿಕೃತವಾಗಿ ಇನ್ನೆಷ್ಟು ಆಸ್ತಿ ಮಾಡಿರಬಹುದು ಎಂಬುದನ್ನು ಜನರೇ ಊಹಿಸಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.  50 ಕೋಟಿ ಇದ್ದ ತಮ್ಮ ಆಸ್ತಿಯನ್ನು 1,400 ಕೋಟಿಗೆ ಹೆಚ್ಚಿಸಿಕೊಂಡವರು ಜಿಲ್ಲೆಯ ಅಭಿವೃದ್ಧಿ ಮಾಡುತ್ತಾರೆಯೇ ಎಂದು ಟೀಕಾ ಪ್ರಹಾರ ನಡೆಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com