ಯಡಿಯೂರಪ್ಪ- ಸಂತೋಷ್ ಬಣ ರಾಜಕೀಯ: 100 ದಿನ ಕಳೆದರೂ ಎರಡೂ ಸದನದಲ್ಲಿ ವಿರೋಧ ಪಕ್ಷದ ನಾಯಕರಿಲ್ಲ!

ನೂರು ದಿನಗಳು ಕಳೆದರೂ ಬಿಜೆಪಿಗೆ ಇನ್ನೂ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ಆಯ್ಕೆ ಆಗಿಲ್ಲ. ವಿಧಾನಸಭೆ ಮತ್ತು  ಪರಿಷತ್ತಿನಲ್ಲಿ ಇಷ್ಟು ದಿನ ಚುನಾಯಿತ ವಿರೋಧ ಪಕ್ಷದ ನಾಯಕನ ನೇಮಕ ಮಾಡದ ಏಕೈಕ ಪಕ್ಷವಾಗಿ ಬಿಜೆಪಿ ಇತಿಹಾಸದ ಪುಸ್ತಕ ಪ್ರವೇಶಿಸಲಿದೆ.
ಯಡಿಯೂರಪ್ಪ ಮತ್ತು ಬಿ.ಎಲ್ ಸಂತೋಷ್
ಯಡಿಯೂರಪ್ಪ ಮತ್ತು ಬಿ.ಎಲ್ ಸಂತೋಷ್

ಬೆಂಗಳೂರು: ನೂರು ದಿನಗಳು ಕಳೆದರೂ ಬಿಜೆಪಿಗೆ ಇನ್ನೂ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ಆಯ್ಕೆ ಆಗಿಲ್ಲ. ವಿಧಾನಸಭೆ ಮತ್ತು  ಪರಿಷತ್ತಿನಲ್ಲಿ ಇಷ್ಟು ದಿನ ಚುನಾಯಿತ ವಿರೋಧ ಪಕ್ಷದ ನಾಯಕನ ನೇಮಕ ಮಾಡದ ಏಕೈಕ ಪಕ್ಷವಾಗಿ ಬಿಜೆಪಿ ಇತಿಹಾಸದ ಪುಸ್ತಕ ಪ್ರವೇಶಿಸಲಿದೆ.

ಸದನದಲ್ಲಿ ಪ್ರತಿಪಕ್ಷದ ನಾಯಕನಿಗೆ ಅನೇಕ ಸವಲತ್ತುಗಳಿವೆ, ವಿಶೇಷವಾಗಿ ಅಧಿವೇಶನ ನಡೆಯುತ್ತಿದ್ದಾಗ ವಿಶೇಷ ಸವಲತ್ತುಗಳಿರುತ್ತವೆ. ಎರಡೂ ಸದನಗಳಲ್ಲಿ ನಾಯಕರನ್ನು ನೇಮಿಸದಿದ್ದರೆ ಪಕ್ಷವು ಈ ಸವಲತ್ತುಗಳನ್ನು ಕಳೆದುಕೊಳ್ಳುತ್ತದೆ ಎಂದು ಬಿಜೆಪಿಯ ಮಾಜಿ ಸಚಿವರೊಬ್ಬರು ಹೇಳಿದ್ದಾರೆ.

ಯಡಿಯೂರಪ್ಪ ಮತ್ತು ಬಿಎಲ್ ಸಂತೋಷ್ ಬಣಗಳ ನಡುವಿನ ವಿಶ್ವಾಸದ ಕೊರತೆಯಿಂದಾಗಿ ಪ್ರತಿಪಕ್ಷ ನಾಯಕರ ನೇಮಕ ನಡೆದಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಸೋಮವಾರ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಒಗ್ಗಟ್ಟಿನಿಂದ ಪಕ್ಷವನ್ನು ರಾಜ್ಯದಲ್ಲಿ ಪುನರುತ್ಥಾನಗೊಳಿಸಬಹುದೆಂಬ ನಿರೀಕ್ಷೆಯ ವಾತಾವರಣವಿತ್ತು, ಆದರೆ ಅದು ನಡೆಯಲಿಲ್ಲ ಎಂದು ಮೂಲಗಳು ತಿಳಿಸಿವೆ.

ವಿರೋಧ ಪಕ್ಷದ ನಾಯಕರ ನೇಮಕ ನಿರ್ಧಾರ ಕೇಂದ್ರ ನಾಯಕರ ಮೇಲಿದ್ದು, ಇದುವರೆಗೂ ಆಗದಿರುವುದು ಪಕ್ಷದ ಸ್ಥಳೀಯ ಮುಖಂಡರಲ್ಲಿ ಅಚ್ಚರಿ ಮೂಡಿಸಿದೆ ಎಂದು ಬಿಜೆಪಿ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿವೆ.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್  ಆಪ್ತರಾದ  ಸಿ.ಟಿ.ರವಿ  ಬಿಜೆಪಿ ಅಧ್ಯಕ್ಷ ಮತ್ತು ಬಸನಗೌಡ ಯತ್ನಾಳ್ ವಿರೋಧ ಪಕ್ಷದ ನಾಯಕರನ್ನಾಗಿ  ನೇಮಕ ಮಾಡಲಾಗುವುದು ಎಂದು ಹೇಳಲಾಗಿತ್ತು, ಆದರೆ  ಇದಕ್ಕೆ  ಬಿಜೆಪಿ ಹೈಕಮಾಂಡ್ ಒಪ್ಪಲಿಲ್ಲ ಎಂದು ತಿಳಿದು ಬಂದಿದೆ.

ಪ್ರಜಾಪ್ರಭುತ್ವದಲ್ಲಿ, ಪ್ರಮುಖ ವಿರೋಧ ಪಕ್ಷವು ಎರಡೂ ಸದನಗಳಲ್ಲಿ ಪ್ರತಿಪಕ್ಷ ನಾಯಕನನ್ನು ನೇಮಿಸದಿರುವುದು ಅತ್ಯಂತ ದುರದೃಷ್ಟಕರ ಎಂದು ಕಾಂಗ್ರೆಸ್ ಕಾರ್ಯಾಧ್ಯಕ್ಷ ಮತ್ತು ಮುಖ್ಯ ಸಚೇತಕ ಎಂಎಲ್‌ಸಿ ಸಲೀಂ ಅಹ್ಮದ್ ಹೇಳಿದ್ದಾರೆ. 

ಇದು ಬಿಜೆಪಿಯ ಆಂತರಿಕ ವಿಚಾರವಾಗಿದ್ದರೂ ವಿಧಾನಸಭೆ ಅಥವಾ ಪರಿಷತ್ತಿನಲ್ಲಿ ಪ್ರತಿಪಕ್ಷ ನಾಯಕರನ್ನು ನೇಮಿಸಲು ಸಾಧ್ಯವಾಗದಿರುವುದು ಆತಂಕಕಾರಿ ವಿಚಾರ. ಇದು ಪಕ್ಷದ ವ್ಯವಹಾರಗಳ ಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.  ಭಾರತೀಯ ಶಾಸಕಾಂಗ ವ್ಯವಸ್ಥೆಯಲ್ಲಿ ವಿಪಕ್ಷ ನಾಯಕನಿಗೂ ಮುಖ್ಯಮಂತ್ರಿ ಹುದ್ದೆಯಷ್ಚೇ ಮಹತ್ವವಿದೆ ಎಂದು ಹೇಳಲಾಗುತ್ತದೆ. ವಿರೋಧ ಪಕ್ಷದ ನಾಯಕನ ನೇಮಕ ಮಾಡದಿರುವುದು ವಿರೋಧ ಪಕ್ಷದಲ್ಲಿ ಸಮರ್ಥ ನಾಯಕನ ಕೊರತೆಯಿದೆ ಎಂಬುದನ್ನು ಎತ್ತಿ ತೋರಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com