ಚುನಾವಣೆಯತ್ತ ಕಾಂಗ್ರೆಸ್ ಚಿತ್ತ: ಬಿಬಿಎಂಪಿ ಕಾರ್ಪೊರೇಟರ್ ಗಳನ್ನು ಸೆಳೆಯುವ ಯತ್ನದಲ್ಲಿ 'ಕೈ' ನಿರತ!

2019 ರಲ್ಲಿ ಬಿಜೆಪಿಗೆ ಪಕ್ಷಾಂತರಗೊಂಡ ಬೆಂಗಳೂರಿನ ಒಂದು ಕಾಲದ ನಿಷ್ಠಾವಂತ ಶಾಸಕರಿಗೆ ಕಾಂಗ್ರೆಸ್ ಬಲವಾದ ಸಂದೇಶವನ್ನು ರವಾನಿಸುತ್ತಿದ್ದು, ಬಿಜೆಪಿ ನಾಯಕರನ್ನು ದೊಡ್ಡ ಮಟ್ಟದಲ್ಲಿ ಸೇರಿಸಿಕೊಳ್ಳುತ್ತಿದೆ.
ಬಿಬಿಎಂಪಿ ಕೇಂದ್ರ ಕಚೇರಿಯ ಸಂಗ್ರಹ ಚಿತ್ರ
ಬಿಬಿಎಂಪಿ ಕೇಂದ್ರ ಕಚೇರಿಯ ಸಂಗ್ರಹ ಚಿತ್ರ
Updated on

ಬೆಂಗಳೂರು: 2019 ರಲ್ಲಿ ಬಿಜೆಪಿಗೆ ಪಕ್ಷಾಂತರಗೊಂಡ ಬೆಂಗಳೂರಿನ ಒಂದು ಕಾಲದ ನಿಷ್ಠಾವಂತ ಶಾಸಕರಿಗೆ ಕಾಂಗ್ರೆಸ್ ಬಲವಾದ ಸಂದೇಶವನ್ನು ರವಾನಿಸುತ್ತಿದ್ದು, ಬಿಜೆಪಿ ನಾಯಕರನ್ನು ದೊಡ್ಡ ಮಟ್ಟದಲ್ಲಿ ಸೇರಿಸಿಕೊಳ್ಳುತ್ತಿದೆ. ಶಾಸಕ ಭೈರತಿ ಬಸವರಾಜ್ ಆಪ್ತರಾಗಿರುವ ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಗಳು ಕಾಂಗ್ರೆಸ್ ನ ಟಾರ್ಗೆಟ್ ಲಿಸ್ಟ್ ನಲ್ಲಿದ್ದು, ಕಾರ್ಪೋರೇಟರ್ ಗಳಾದ ಬಂಡೆ ರಾಜು ಮತ್ತು ಪದ್ಮಾವತಿ ಶ್ರೀನಿವಾಸ್ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸೇರಲಿದ್ದಾರೆ.

ಈ ವಿಷಯವನ್ನು ದೃಢಪಡಿಸಿದ ಕೆಆರ್ ಪುರಂ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಡಿ.ಕೆ.ಮೋಹನ್, 'ವಿಜಿನಾಪುರ ವಾರ್ಡ್‌ನ ಬಂಡೆರಾಜು, ರಾಮಮೂರ್ತಿ ವಾರ್ಡ್‌ನಿಂದ ಪದ್ಮಾವತಿ ಶ್ರೀನಿವಾಸ್ ಮತ್ತು ಕೆಆರ್ ಪುರಂನ ವೀರಣ್ಣ ಇತ್ತೀಚೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು, ಕೆಲವೇ ದಿನಗಳಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ. ಅವರನ್ನು ಪಕ್ಷಕ್ಕೆ ಸೇರ್ಪ ಡೆ ಮಾಡುವ ಕಾರ್ಯಕ್ರಮ ನಡೆಯಲಿದೆ ಎಂದಿದ್ದಾರೆ.

ಬಂಡೆ ರಾಜು ಕೂಡ ಈ ವಿಷಯವನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಗೆ ಖಚಿತಪಡಿಸಿದ್ದಾರೆ. ನಾನು ನಿಷ್ಠಾವಂತ ಬಿಜೆಪಿ ಕಾರ್ಯಕರ್ತನಾಗಿದ್ದೆ, ಆದರೆ ಬೈರತಿ ಬಸವರಾಜ್ ಬಿಜೆಪಿ ಸೇರಿದ ನಂತರ ನನ್ನನ್ನು ಕಡೆಗಣಿಸಲಾಗುತ್ತಿದೆ. ನಾನು ನನ್ನ ಬೆಂಬಲಿಗರೊಂದಿಗೆ ಸಭೆ ನಡೆಸಿದ್ದೇನೆ. ಅವರು ನನ್ನನ್ನು ಕಾಂಗ್ರೆಸ್ ಸೇರಲು ಕೇಳುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಹಾಗೂ ಇತರ ನಾಯಕರನ್ನು ಭೇಟಿ ಮಾಡಿ ಕಾಂಗ್ರೆಸ್ ಸೇವೆ ಮಾಡುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದೇನೆ ಎಂದು ರಾಜು ಹೇಳಿದರು.

ಬಸವನಪುರ ವಾರ್ಡ್‌ನ ಮಾಜಿ ಕಾರ್ಪೊರೇಟರ್ ಮತ್ತು ಬೈರತಿ ಬಸವರಾಜ್ ಅವರ ಆಪ್ತರಾಗಿರುವ ಬಿಎನ್ ಜಯಪ್ರಕಾಶ್ ಅವರನ್ನೂ ಸಂಪರ್ಕಿಸಲಾಗಿದ್ದು, ಮಾತುಕತೆ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ. ಇದಲ್ಲದೇ ಕೆಆರ್ ಪುರಂನ ಮಾಜಿ ಶಾಸಕ ನಂದೀಶ್ ರೆಡ್ಡಿ ಜತೆಗಿನ ಹಲವು ಮುಖಂಡರು ಕೂಡ ಕಾಂಗ್ರೆಸ್ ಗೆ ತೆರಳಲಿದ್ದಾರೆ.

ಕೆಆರ್ ಪುರಂ, ಯಶವಂತಪುರ ಮತ್ತು ಆರ್‌ಆರ್‌ನಗರದಲ್ಲಿ ಹಲವು ಬಿಬಿಎಂಪಿ ವಾರ್ಡ್‌ಗಳಿದ್ದು, ಗೆಲ್ಲಬಹುದಾದ ನಾಯಕರನ್ನು ಕಣಕ್ಕಿಳಿಸುವುದು ಕಾಂಗ್ರೆಸ್‌ಗೆ ಬಿಬಿಎಂಪಿ ಕೌನ್ಸಿಲ್ ರಚನೆಯ ಅವಕಾಶಗಳನ್ನು ಹೆಚ್ಚಿಸುತ್ತದೆ. ಅಲ್ಲದೆ, ಬಿಜೆಪಿ ಸೇರಿದ ಹಲವು ಕಾರ್ಪೊರೇಟರ್‌ಗಳು ಈ ಬಾರಿ ಮತ ಗಳಿಸಲು ಸಾಧ್ಯವಾಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಇದರ ಹಿಂದೆ ಸಾರಿಗೆ ಸಚಿವ ಆರ್ ರಾಮಲಿಂಗಾ ರೆಡ್ಡಿ ಅವರ ಯೋಜನೆಯಿದ್ದು, ಬಿಬಿಎಂಪಿ ಮತ್ತು ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ ಎಂದು ಹೇಳಲಾಗುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com