ರಾಜ್ಯದಲ್ಲಿ ಮತ್ತೆ ಭುಗಿಲೆದ್ದ ಹಿಜಾಬ್ ವಿವಾದ: ಸಿಎಂ ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದ ಕೇಸರಿ ಕಲಿಗಳು, ಪ್ರತಿಭಟನೆಗೆ ಸಿದ್ಧತೆ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೊಳ್ಳಲಾದ ಹಿಜಾಬ್ ನಿಷೇಧ ತೀರ್ಮಾನವನ್ನು ವಾಪಸ್ ತೆಗೆದುಕೊಳ್ಳಲಾಗುವುದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ನಿರ್ಧಾರದಿಂದ ಹಿಂದಕ್ಕೆ ಸರಿಯದಿದ್ದಲ್ಲಿ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದೆ.
ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೈಗೊಳ್ಳಲಾದ ಹಿಜಾಬ್ ನಿಷೇಧ ತೀರ್ಮಾನವನ್ನು ವಾಪಸ್ ತೆಗೆದುಕೊಳ್ಳಲಾಗುವುದು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದ್ದು, ನಿರ್ಧಾರದಿಂದ ಹಿಂದಕ್ಕೆ ಸರಿಯದಿದ್ದಲ್ಲಿ ಹೋರಾಟ ನಡೆಸುವ ಎಚ್ಚರಿಕೆಯನ್ನು ನೀಡಿದೆ.
    
ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಬಿವೈ ವಿಜಯೇಂದ್ರ, ಆರ್.ಅಶೋಕ್. ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ನಾಯಕರು ಈ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಶಾಲಾ ಮಕ್ಕಳ ನಡುವೆ ಯಾವುದೇ ತಾರತಮ್ಯ ಇರಬಾರದು ಎಂಬ ಕಾರಣಕ್ಕೆ ಸಮವಸ್ತ್ರ ಜಾರಿಗೆ ತರಲಾಗಿದೆ. ಆದರೆ, ಕೆಲವ ಅಲ್ಪಸಂಖ್ಯಾತರನ್ನು ತೃಪ್ತಿಪಡಿಸಲು ಹಿಜಾಬ್ ನಿಷೇಧ ನಿರ್ಧಾರವನ್ನು ವಾಪಸ್ ಪಡೆಯುವ ತೀರ್ಮಾನವನ್ನು ಸಿದ್ದರಾಮಯ್ಯ ತೆಗೆದುಕೊಂಡಿದ್ದಾರೆ. ಕೂಡಲೇ ಸಿದ್ದರಾಮಯ್ಯ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಾತನಾಡಿ, ಆಡಳಿತ ವೈಫಲ್ಯವನ್ನು ಮರೆಮಾಚಿ ಜನರ ದಾರಿ ತಪ್ಪಿಸಲು ಮತ್ತು ರಾಜಕೀಯ ಲಾಭಕ್ಕಾಗಿ ಸಿದ್ದರಾಮಯ್ಯ ಅವರು ಮತ್ತೆ ಹಿಜಾಬ್ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ರಾಜ್ಯದಲ್ಲಿ ಎಲ್ಲೆಡೆ ಹಿಜಾಬ್ ನಿಷೇಧ ಆಗಿಯೇ ಇಲ್ಲ. ಯಾವ ಶಾಲೆಯಲ್ಲಿ ವಸ್ತ್ರಸಂಹಿತೆ ಇದೆ ಅಲ್ಲಿ ಮಾತ್ರ ನಿಷೇಧ ಇದೆ ಎಂದು ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕ ಆರ್.ಅಶೋಕ ಮಾತನಾಡಿ, ಸರ್ಕಾರ ತನ್ನ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ. ಬೆಳಗಾವಿಯಲ್ಲಿ ಮಹಿಳೆ ಬೆತ್ತಲೆ, ಹಲ್ಲೆ ಹಾಗೂ ಶಾಲಾ ಮಕ್ಕಳಿಂದ ಶೌಚ ಗುಂಡಿ ಸ್ವಚ್ಛಗೊಳಿಸಿದ್ದ ಪ್ರಕರಣದಿಂದ ಸರ್ಕಾರ ಮುಜುಗರಕ್ಕೊಳಗಾಗಿದೆ. ಇದರಿಂದ ಪಾರಾಗಲು ಜನರ ಗಮನ ಬೇರೆಡೆಗೆ ಸೆಳೆಯಲು ಸಿದ್ದರಾಮಯ್ಯ ಯತ್ನಿಸಿದ್ದಾರೆ. ಸಿದ್ದರಾಮಯ್ಯನವರು ಟಿಪ್ಪು ಸುಲ್ತಾನ್‌ ಮನಸ್ಥಿತಿ ಹೊಂದಿದ್ದು, ಸಮಾಜವನ್ನು ಒಡೆಯುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಇದು ಅವರ ರಕ್ತದಲ್ಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮಾತನಾಡಿ, ಯುವಕರನ್ನು ಧರ್ಮದ ಆಧಾರದಲ್ಲಿ ಒಡೆಯಲು ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಜೆಪಿಯ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಕರ್ನಾಟಕದ ಎಲ್ಲ ಹಿಂದೂ ಬಾಂಧವರಲ್ಲಿ ವಿನಂತಿ. ಮುಸ್ಲಿಮರು ಹಿಜಾಬ್ ಧರಿಸಿ ಬರಲು ಅನುಮತಿ ಇದೆ ಎಂದಾದರೆ ಹಿಂದೂಗಳು ಕಡ್ಡಾಯವಾಗಿ ಕೇಸರಿ ಬಣ್ಣದ ವಸ್ತ್ರ ಧರಿಸಿ ಶಾಲಾ ಕಾಲೇಜು ಗಳಿಗೆ ಬರಬೇಕು. ಸಿದ್ದರಾಮಯ್ಯನವರು ಹಿಜಾಬ್ ಧರಿಸಬಹುದು ಎಂದು ಹೇಳುತ್ತಾ ಯಾರು ಯಾವ ಬಟ್ಟೆಯಾದರೂ ಧರಿಸಲು ಅವಕಾಶವಿದೆ ಎಂದು ಹೇಳಿದ್ದಾರೆ. ರಾಜ್ಯಾದ್ಯಂತ ಶಾಲಾ ಕಾಲೇಜುಗಳಲ್ಲಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗಳಲ್ಲಿ ಭಾಗವಹಿಸಲು ನಾನು ಕರೆ ಕೊಡುತ್ತಿದ್ದೇನೆ. ಅವರಿಗಿಲ್ಲದ ಸಮವಸ್ತ್ರ ನೀತಿ ಹಿಂದೂಗಳಿಗೂ ಇಲ್ಲ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯನವರಿಗೆ ಮಾಹಿತಿಯ ಕೊರತೆ ಇದೆ, ರಾಜ್ಯದಲ್ಲಿ ಹಿಜಾಬ್ ನಿಷೇಧಿಸಿ ಯಾವ ಆದೇಶವೂ ಇಲ್ಲ, ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರ ನೀತಿಯನ್ನು ಜಾರಿ ಮಾಡಿದ್ದು ಸ್ಥಳೀಯ ಕಾಲೇಜುಗಳು ನಿರ್ಧಾರ ಮಾಡಬಹುದು ಎಂದು ಕರ್ನಾಟಕ ಉಚ್ಚ ನ್ಯಾಯಾಲಯ ಹೇಳಿದ್ದರೂ, ರಾಜಕಾರಣಕ್ಕಾಗಿ ಶಾಲಾ ಕಾಲೇಜುಗಳ ಸಮವಸ್ತ್ರ ನೀತಿಯನ್ನೂ ಅಮಾನತು ಮಾಡುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ.

ಓಲೈಕೆ ರಾಜಕಾರಣಕ್ಕೇನಾದರೂ ಮತ್ತೊಂದು ಹೆಸರು ಇದ್ದರೇ ಅದು ಕಾಂಗ್ರೆಸ್ ಪಕ್ಷ. ರಾಜ್ಯಾದ್ಯಂತ ಹಿಂದೂ ವಿದ್ಯಾರ್ಥಿಗಳೂ ಯಾವ ಬಟ್ಟೆಯಾದರೂ ಧರಿಸಿ ಕೇಸರಿ ಶಾಲು ಸಮೇತ ತರಗತಿಗಳಲ್ಲಿ ಭಾಗವಹಿಸುತ್ತಾರೆ, ಅವರಿಗೆ ಯಾವ ಕಿರುಕುಳ ನೀಡಬಾರದು ಎಂದು ಆಗ್ರಹಿಸುತ್ತಿದ್ದೇನೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com