ಪಕ್ಷದ ಪ್ರಮುಖ ನಾಯಕರೊಂದಿಗೆ ಬಿ ವೈ ವಿಜಯೇಂದ್ರ ಸಭೆ: ಯತ್ನಾಳ್, ಸೋಮಣ್ಣ ಗೈರು

2024ರ ಲೋಕಸಭೆ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ. ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ತಮ್ಮದೇ ಆದ ರಾಜಕೀಯ ತಂತ್ರಗಾರಿಕೆಯನ್ನು ಆರಂಭಿಸಿವೆ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಬಿ.ವೈ.ವಿಜಯೇಂದ್ರ ಅವರು ನಿನ್ನೆ ಗುರುವಾರ ಪಕ್ಷದ ಪ್ರಮುಖ 25 ನಾಯಕರ ಜೊತೆ ಸಭೆ ನಡೆಸಿ ತಮ್ಮ ಮುಂದಿನ ಧ್ಯೇಯೋದ್ದೇಶ,
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪಕ್ಷದ ಮುಖಂಡರಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ, ಗೋವಿಂದ್ ಕಾರಜೋಳ ಅವರೊಂದಿಗೆ
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪಕ್ಷದ ಮುಖಂಡರಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ, ಗೋವಿಂದ್ ಕಾರಜೋಳ ಅವರೊಂದಿಗೆ

ಬೆಂಗಳೂರು: 2024ರ ಲೋಕಸಭೆ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ. ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷಗಳು ತಮ್ಮದೇ ಆದ ರಾಜಕೀಯ ತಂತ್ರಗಾರಿಕೆಯನ್ನು ಆರಂಭಿಸಿವೆ. ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಬಿ.ವೈ.ವಿಜಯೇಂದ್ರ ಅವರು ನಿನ್ನೆ ಗುರುವಾರ ಪಕ್ಷದ ಪ್ರಮುಖ 25 ನಾಯಕರ ಜೊತೆ ಸಭೆ ನಡೆಸಿ ತಮ್ಮ ಮುಂದಿನ ಧ್ಯೇಯೋದ್ದೇಶ, ಗುರಿ ಹಾಗೂ ಮುಂದಿನ ದಿನಗಳಲ್ಲಿ ಪಕ್ಷವನ್ನು ಮುನ್ನಡೆಸುವ ಬಗ್ಗೆ ಮಾತನಾಡಿದರು. ಹಿರಿಯ ನಾಯಕರ ಸಲಹೆ-ಸೂಚನೆ, ಸಹಕಾರವನ್ನು ಸಹ ಕೋರಿದರು. 

ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಡಿವಿ ಸದಾನಂದಗೌಡ, ಬಸವರಾಜ ಬೊಮ್ಮಾಯಿ, ಮಾಜಿ ಸಚಿವರಾದ ಕೆಎಸ್ ಈಶ್ವರಪ್ಪ, ಸಿಟಿ ರವಿ ಸೇರಿದಂತೆ ಬಹುತೇಕ ಹಿರಿಯರು ಹಾಜರಿದ್ದರು. ವಿಜಯೇಂದ್ರ ಅವರು ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ವರಿಷ್ಠರಿಗೆ ಸಂದೇಶ ರವಾನಿಸುವ ಪ್ರಯತ್ನ ಮಾಡಿದರು.  

ಯತ್ನಾಳ್, ಸೋಮಣ್ಣ ಅನುಪಸ್ಥಿತಿ: ಹಿಂದಿನಿಂದಲೂ ಯಡಿಯೂರಪ್ಪ ಮತ್ತು ಅವರ ಕುಟುಂಬಸ್ಥರನ್ನು ಕಟುವಾಗಿ ಬಹಿರಂಗವಾಗಿಯೇ ಟೀಕಿಸುತ್ತಾ ಬಂದಿರುವ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಒಲ್ಲದ ಮನಸ್ಸಿನಿಂದ ಬಿಜೆಪಿಯಲ್ಲಿ ಇರುವಂತೆ ಕಾಣುತ್ತಿರುವ ಮಾಜಿ ಸಚಿವ ವಿ.ಸೋಮಣ್ಣ ಸಭೆಗೆ ಹಾಜರಾಗಿರಲಿಲ್ಲ. ಯತ್ನಾಳ್ ಅವರು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಮೇಲೆ ಆಗಾಗ ಹರಿಹಾಯುತ್ತಲೇ ಇರುತ್ತಾರೆ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಸೋಮಣ್ಣ ಅವರು ಸಹ ಅಸಮಾಧಾನ ಹೊಂದಿದ್ದಾರೆ. ಬಿ ಎಸ್ ಯಡಿಯೂರಪ್ಪ ನೇತೃತ್ವದ ಹಿಂದಿನ ಬಿಜೆಪಿ ಸರ್ಕಾರವು ಕೋವಿಡ್ -19 ಸಾಂಕ್ರಾಮಿಕ ಹೆಚ್ಚಾಗಿದ್ದ ವೇಳೆ 40 ಸಾವಿರ ಕೋಟಿ ರೂಪಾಯಿ ಹಗರಣ ಮಾಡಿತ್ತು ಎಂದು ಯತ್ನಾಳ್ ಇತ್ತೀಚೆಗೆ ಆರೋಪಿಸಿದ್ದರು. 

ನಿನ್ನೆ ಸಭೆಯ ಬಳಿಕ ಸುದ್ದಿಗಾರರು ಯತ್ನಾಳ್ ಆರೋಪದ ಬಗ್ಗೆ ಕೇಳಿದಾಗ ಮಾಜಿ ಸಚಿವ ಈಶ್ವರಪ್ಪ ಕೆಂಡಮಂಡಲರಾದರು. ಪಕ್ಷಕ್ಕೆ ಹಾನಿಯಾಗದಂತೆ ಯತ್ನಾಳ್ ಅವರಿಗೆ ಹೈಕಮಾಂಡ್ ನಿರ್ದೇಶನ ನೀಡಬೇಕು ಎಂದು ಸಭೆಯಲ್ಲಿ ಈಶ್ವರಪ್ಪ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಎಲ್ಲಾ ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕೆಂಬುದು ನಮ್ಮ ಗುರಿ. ವಿಜಯೇಂದ್ರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಲಾಗಿದೆ' ಎಂದು ಸಭೆಯ ನಂತರ ಈಶ್ವರಪ್ಪ ಹೇಳಿದರು.

ಮಾಜಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಮಾತನಾಡಿ, ಯತ್ನಾಳ್ ವಿಚಾರದ ಬಗ್ಗೆಯೂ ಚರ್ಚೆ ನಡೆಸಲಾಗಿದ್ದು, ಪಕ್ಷಕ್ಕೆ ಧಕ್ಕೆ ತರುವಂತಹ ಹೇಳಿಕೆ ನೀಡದಂತೆ ಹೈಕಮಾಂಡ್ ನಿಂದ ಸೂಚನೆ ಪಡೆಯಲು ನಿರ್ಧರಿಸಲಾಗಿದೆ ಎಂದರು. ನಾವು ಎಲ್ಲಾ 28 ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕಾಗಿರುವುದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಸಿ ಟಿ ರವಿ ಮಾತನಾಡಿ, ರಾಜ್ಯದ ಎಲ್ಲಾ ಲೋಕಸಭಾ ಸ್ಥಾನಗಳನ್ನು ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡು ಗೆಲ್ಲುವ ಕಾರ್ಯತಂತ್ರದ ಕುರಿತು ಚರ್ಚಿಸಲಾಯಿತು. ಎರಡು ಪದವೀಧರ ಕ್ಷೇತ್ರಗಳು ಮತ್ತು ನಾಲ್ಕು ಶಿಕ್ಷಕರ ಕ್ಷೇತ್ರಗಳು ಸೇರಿದಂತೆ ಆರು ಎಂಎಲ್‌ಸಿ ಸ್ಥಾನಗಳಿಗೆ ಮುಂಬರುವ ಚುನಾವಣೆಯ ಬಗ್ಗೆಯೂ ಚರ್ಚೆ ನಡೆಸಲಾಯಿತು. ವಿಧಾನಸಭೆ ಚುನಾವಣೆಯಲ್ಲಿನ ಸೋಲಿನ ಸೇಡು ತೀರಿಸಿಕೊಳ್ಳಲು ಎಲ್ಲಾ 28 ಲೋಕಸಭಾ ಸ್ಥಾನಗಳನ್ನು ಗೆಲ್ಲಲು ಬಿಜೆಪಿಯನ್ನು ಸಂಘಟಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಹೇಳಿದರು.

ವಿಜಯೇಂದ್ರ ಅವರು ಪಕ್ಷವನ್ನು ಬಲಪಡಿಸಲು ವರಿಷ್ಠರ ಮಾರ್ಗದರ್ಶನ ಕೋರಿದರು. ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಯಡಿಯೂರಪ್ಪ, ಸದಾನಂದಗೌಡ, ಈಶ್ವರಪ್ಪ, ಸಿ.ಟಿ.ರವಿ, ಬಸವರಾಜ ಬೊಮ್ಮಾಯಿ ಮುಂತಾದವರ ಕೊಡುಗೆಯನ್ನು ಶ್ಲಾಘಿಸಿದರು.

ನಾವು ಈಗ ನೋಡುತ್ತಿರುವುದು ಬಿಜೆಪಿಯ ಬೃಹತ್ ಕಟ್ಟಡ ಮಾತ್ರ. ಕಟ್ಟಡದ ಅಡಿಪಾಯ ನಮಗೆ ಕಾಣಿಸುತ್ತಿಲ್ಲ. ಬಿಜೆಪಿಗೆ ಭದ್ರ ಬುನಾದಿ ಹಾಕಿದ ವರಿಷ್ಠರು ನನಗೆ ಈ ಜವಾಬ್ದಾರಿ ನೀಡಿದ್ದಾರೆ. ರಾಷ್ಟ್ರಮಟ್ಟದಲ್ಲಿ ಪಕ್ಷದ ಹಿರಿಯರ ಆಶೀರ್ವಾದದಿಂದ ಈ ಜವಾಬ್ದಾರಿ ನನ್ನ ಹೆಗಲ ಮೇಲಿದೆ ಎಂದು ವಿಜಯೇಂದ್ರ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com