

ಮೈಸೂರು: ಹೆಚ್.ಡಿ.ರೇವಣ್ಣ ಹೊಳೆನರಸೀಪುರದ ಮಹಾರಾಜ. ಅವರು ಕೆ.ಆರ್.ಪೇಟೆ ಕ್ಷೇತ್ರದಿಂದ ಸ್ಪರ್ಧಿಸುವ ಪ್ರಶ್ನೆಯೇ ಇಲ್ಲ. ರೇವಣ್ಣ ಹೊಳೆನರಸೀಪುರದಲ್ಲೇ ಸ್ಪರ್ಧೆ ಮಾಡುತ್ತಾರೆ ಎಂದು ಶಾಸಕ ಪುಟ್ಟರಾಜು ಹೇಳಿದ್ದಾರೆ.
ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿಯಿಂದ ಮಂಗಳವಾರ ಇಲ್ಲಿ ನಡೆದ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ರೇವಣ್ಣ ತಮ್ಮ ತವರು ಕ್ಷೇತ್ರ ಹೊಳೆನರಸೀಪುರದಿಂದ ಸ್ಪರ್ಧಿಸಲಿದ್ದು, ಭಾರಿ ಅಂತರದಿಂದ ಗೆಲುವು ಸಾಧಿಸಲಿದ್ದಾರೆಂದು ವಿಶ್ವಾಸ ವ್ಯಕ್ತಪಡಿಸಿದರು.
ಹೆಚ್.ಡಿ.ರೇವಣ್ಣ ಕೆ.ಆರ್.ಪೇಟೆಗೆ ಬರುವ ಪ್ರಶ್ನೆಯೇ ಇಲ್ಲ. ಅವರು ಹೊಳೆನರಸೀಪುರದ ಮಹಾರಾಜ. ಅಲ್ಲಿಯೇ ನಿಂತು ಹೆಚ್ಚು ಭಾರೀ ಅಂತರಿಂದ ಗೆಲವು ಸಾಧಿಸಲಿದ್ದಾರೆ. ಭವಾನಿ ರೇವಣ್ಣ ಅವರು ಹಾಸನಕ್ಕೆ ಆಕಾಂಕ್ಷಿತರಾಗಿದ್ದಾರೆ. ದೇವೇಗೌಡರ ಮಾರ್ಗದರ್ಶನದಲ್ಲಿ ಕುಮಾರಸ್ವಾಮಿ, ರೇವಣ್ಣ ಅವರು ನಿರ್ಧಾರ ಕೈಗೊಳ್ಳಲಿದ್ದಾರೆಂದು ಹೇಳಿದರು.
ಬಳಿಕ ಕುಟುಂಬ ರಾಜಕಾರಣ ವಿಚಾರ ಕುರಿತು ಮಾತನಾಡಿ,ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಕುಟುಂಬ ರಾಜಕಾರಣ ಇದ್ದೇ ಇದೆ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಇಬ್ಬರು ಪುತ್ರರು ರಾಜಕೀಯದಲ್ಲಿದ್ದಾರೆ ಮತ್ತು ಅವರ ಪುತ್ರಿ ಇದೀಗ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ವರುಣಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ ಹೇಳಿ? ದೇವೇಗೌಡರ ನೇತೃತ್ವದಲ್ಲಿ ಅವರ ಕುಟುಂಬದ ಸದಸ್ಯರು ರಾಜ್ಯದಲ್ಲಿ ಕೆಲಸ ಮಾಡಿದ್ದಕ್ಕೆ ಪ್ರಾದೇಶಿಕ ಪಕ್ಷ ಇದೆ ಎಂದು ತಿಳಿಸಿದರು.
ಇದೇ ವೇಳೆ ಜೆಡಿಎಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬ ಊಹಾಪೋಹಗಳನ್ನು ಪುಟ್ಟರಾಜು ಅವರು ತಳ್ಳಿಹಾಕಿದರು.
ದೇವರಾಜು ಅವರಿಗೆ ಕಳೆದ ಉಪ ಚುನಾವಣೆಯೇ ಟಿಕೆಟ್ ಕೊನೆ ಎಂದು ಹೇಳಲಾಗಿತ್ತು. ಹೀಗಾಗಿಯೇ ಕೆ.ಆರ್.ಪೇಟೆಯಲ್ಲಿ ಮಂಜುಗೆ ವರಿಷ್ಠರು ಟಿಕೆಟ್ ನೀಡಿದ್ದಾರೆಂದು ಹೇಳಿದರು.
ಇದೇ ವೇಳೆ ಮಂಡ್ಯ ಜಿಲ್ಲೆಯ ಎಲ್ಲಾ ಎಳು ಸ್ಥಾನಗಳಲ್ಲೂ ಜೆಡಿಎಸ್ ಜಯಭೇರಿ ಬಾರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement