ಬ್ರಿಗೇಡ್ ಗ್ರೂಪ್ ಗೆ ಭೂಮಿ ಹಂಚಿಕೆಯಲ್ಲಿ ಅವ್ಯವಹಾರ: ತನಿಖೆ ನಡೆಸಲು ಜೆಡಿಎಸ್ ಎಂಎಲ್ ಸಿ ಮರಿತಿಬ್ಬೇಗೌಡ ಆಗ್ರಹ

ದೇವನಹಳ್ಳಿಯ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ ನಲ್ಲಿ ಬಡವರಿಗೆ ಮನೆ ನಿರ್ಮಿಸಲು ಬ್ರಿಗೇಡ್ ರಿಯಲ್ ಎಸ್ಟೇಟ್ ಸಮೂಹಕ್ಕೆ 10 ಎಕರೆ ಜಮೀನು ಮಂಜೂರು ಮಾಡಿರುವ ಕುರಿತು ಎರಡು ಹಂತಗಳಲ್ಲಿ ತನಿಖೆ ನಡೆಸಬೇಕು.
ಮರಿತಿಬ್ಬೇಗೌಡ
ಮರಿತಿಬ್ಬೇಗೌಡ
Updated on

ಬೆಂಗಳೂರು: ದೇವನಹಳ್ಳಿಯ ಹೈಟೆಕ್ ಡಿಫೆನ್ಸ್ ಏರೋಸ್ಪೇಸ್ ಪಾರ್ಕ್ ನಲ್ಲಿ ಬಡವರಿಗೆ ಮನೆ ನಿರ್ಮಿಸಲು ಬ್ರಿಗೇಡ್ ರಿಯಲ್ ಎಸ್ಟೇಟ್ ಸಮೂಹಕ್ಕೆ 10 ಎಕರೆ ಜಮೀನು ಮಂಜೂರು ಮಾಡಿರುವ ಕುರಿತು ಎರಡು ಹಂತಗಳಲ್ಲಿ ತನಿಖೆ ನಡೆಸಬೇಕು ಎಂದು ಜೆಡಿಎಸ್ ಎಂಎಲ್ ಸಿ ಮರಿತಿಬ್ಬೇಗೌಡ ಒತ್ತಾಯಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ವಿಷಯ ಪ್ರಸ್ತಾಪಿಸಿದ ಗೌಡರು, ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ) ಮಿಷನ್ ಅಡಿಯಲ್ಲಿ ಭೂಮಿಯನ್ನು ಬ್ರಿಗೇಡ್ ಗ್ರೂಪ್ ಗೆ ನೀಡುವಾಗ ನಿಯಮಗಳನ್ನು ಪಾಲಿಸಿಲ್ಲ ಎಂದು ಆರೋಪಿಸಿದ್ದಾರೆ. ಅದರಲ್ಲಿ ಬಡವರಿಗೆ ಮನೆ ಕಟ್ಟಿಕೊಡುವುದಾಗಿ ಹೇಳಲಾಗಿತ್ತು. ಆದರೆ, ನಿಯಮ ಪಾಲನೆ ಆಗದಿರುವುದರಿಂದ ಸರ್ಕಾರಕ್ಕೆ ನಷ್ಟವಾಗಿದೆ’ ಎಂದು ಮರಿತಿಬ್ಬೇಗೌಡ ದೂರಿದರು.

‘ಕೈಗಾರಿಕಾದ್ಯಮಿಗಳಿಗೆ ಭೂಮಿ ಹಂಚಿಕೆ ಮಾಡುವಾಗ ಉದ್ಯಮ ಹಾಗೂ ಕೈಗಾರಿಕೆಗಳಲ್ಲಿ ಕೆಲಸ ಮಾಡುವವರು ಹತ್ತಿರದಲ್ಲೇ ವಾಸ ಮಾಡಲು ಅನುಕೂಲ ಮಾಡಿ ವಸತಿ ನಿರ್ಮಿಸಲು, ಅದಕ್ಕೆ ಪೂರಕವಾಗಿ ಆಸ್ಪತ್ರೆ, ಶಿಕ್ಷಣ ಸಂಸ್ಥೆ ಸೇರಿದಂತೆ ಇತರ ಅನೇಕ ಜೀವನಾವಶ್ಯಕ ಸೌಲಭ್ಯಗಳನ್ನು ಕಲ್ಪಿಸಲು ಮಂಜೂರಾದ ಭೂಮಿಯಲ್ಲಿ ಶೇ.15ರಷ್ಟು ಬಳಕೆ ಮಾಡಿಕೊಳ್ಳಲು ಅವಕಾಶವಿದೆ’ ಎಂದು ಹೇಳಿದರು.

ಅದಕ್ಕೆ ಉತ್ತರಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕ ಸಚಿವ ಮುರುಗೇಶ್ ಆರ್ ನಿರಾಣಿ ‘ಕೆಐಎಡಿಬಿ ಭೂ ಸ್ವಾಧೀನ ಮಾಡಿಕೊಳ್ಳುವ ಜಾಗದಲ್ಲಿ ಶೇ.15 ರಷ್ಟು ಭೂಮಿಯನ್ನು ಆಸ್ಪತ್ರೆ, ಶಾಲೆ, ವಸತಿ ಸೇರಿದಂತೆ ಇನ್ನಿತರೆ ಮೂಲ ಸೌಕರ್ಯಕ್ಕೆ ಬಳಸಲಾಗುತ್ತಿದೆ’ ಎಂದು ಹೇಳಿದ್ದಾರೆ.

‘ಅದೇ ರೀತಿ ಬ್ರಿಗೇಡ್ ಸಂಸ್ಥೆಗೆ ತಲಾ 25 ಎಕರೆಯಂತೆ ಎರಡು ಬಾರಿ ಭೂಮಿ ನೀಡಲಾಗಿದೆ. 2002ರಲ್ಲಿ ಭೂಮಿ ನೀಡಲಾಗಿತ್ತು. ಅದರಲ್ಲಿ ಶೇ.15ರಷ್ಟು ಭೂಮಿಯನ್ನು ವಸತಿ, ಆಸ್ಪತ್ರೆ, ಶಾಲೆ ಕಟ್ಟಲು ಬಳಕೆ ಮಾಡಿಕೊಳ್ಳುತ್ತಿದ್ದು, 11 ಟವರ್ ನಿರ್ಮಿಸುವ ಗುರಿ ಇದೆ. ಈಗಾಗಲೇ ಏಳು ಟವರ್ ನಿರ್ಮಿಸಲಾಗಿದ್ದು ಉಳಿದ ಟವರ್​ಗಳ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಆ ಭೂಮಿಯಲ್ಲಿ ಬಡವರಿಗೆ ಮನೆ ನಿರ್ಮಿಸಿ ಕೊಡಲಾಗುವುದು’ ಎಂದು ನಿರಾಣಿ ತಿಳಿಸಿದರು.

ಕೌಶಲ್ಯ ಅಭಿವೃದ್ಧಿಗೆ ಖಾಸಗಿ ಸಹಭಾಗಿತ್ವದಲ್ಲಿ ಸಂಸ್ಥೆ ಸ್ಥಾಪಿಸಲು ಬ್ರಿಗೇಡ್ ಗ್ರೂಪ್​ಗೆ ಭೂಮಿ ನೀಡಲಾಗಿದೆ. ಅದನ್ನು ಉಚಿತವಾಗಿ ನೀಡಿಲ್ಲ. ಭೂಮಿಯಿಂದ ಸರ್ಕಾರಕ್ಕೆ ಬರಬೇಕಾದ ಹಣ ಪಡೆಯಲಾಗಿದೆ. ಇದರಲ್ಲಿ ಯಾವುದೇ ನಿಯಮ ಉಲ್ಲಂಘನೆಯಾಗಿಲ್ಲ ಎಂದು ನಿರಾಣಿ ಸ್ಪಷ್ಟನೆ ನೀಡಿದರು.

ಉತ್ತರದಿಂದ ಸಮಾಧಾನಗೊಳ್ಳದ ಮರಿತಿಬ್ಬೇಗೌಡ, ‘ಮಂತ್ರಿಗಳು ರಾಜ್ಯವನ್ನು ಹರಾಜು ಹಾಕುತ್ತಾರೆ’ ಎಂದರು. ಅದಕ್ಕೆ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿಯ ವೈ.ಎ. ನಾರಾಯಣಸ್ವಾಮಿ, ತೇಜಸ್ವಿನಿ ಗೌಡ ಆಕ್ಷೇಪ ವ್ಯಕ್ತಪಡಿಸಿದರು.

‘ಈ ಬಗ್ಗೆ ಚರ್ಚೆಗೆ ಹೆಚ್ಚಿನ ಕಾಲಾವಕಾಶ ನೀಡಬೇಕು. ಅಲ್ಲದೆ, ಸದನ ಸಮಿತಿಯಿಂದ ತನಿಖೆ ನಡೆಸಬೇಕು’ ಎಂದು ಮರಿತಿಬ್ಬೇಗೌಡ ಪಟ್ಟುಹಿಡಿದರು. ಈ ಬಗ್ಗೆ ಪರಿಶೀಲಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಸಭಾಪತಿ ಬಸವರಾಜ ಹೊರಟ್ಟಿ ಸಮಾಧಾನಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com