ಬೆಂಗಳೂರು: ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮಂಡ್ಯ ಉಸ್ತುವಾರಿ ನೇಮಕ ತೀವ್ರ ಕುತೂಹಲಕ್ಕೂ ಕಾರಣವಾಗಿತ್ತು. ಆದರೆ ಈಗ ಇನ್ನು ವಿಧಾನಸಭಾ ಚುನಾವಣೆಗೆ ಬೆರಣಿಕೆ ದಿನಗಳು ಉಳಿದಿರುವ ಹಿನ್ನೆಲೆ ಮಂಡ್ಯ ಉಸ್ತುವಾರಿಯನ್ನು ಯಾರಿಗೆ ನೀಡಬೇಕು ಎಂಬುದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ಗೊಂದಲ ಇನ್ನೂ ಮುಂದುವರಿದಿರುವ ಬೆನ್ನಲ್ಲೇ ಸಚಿವ ನಾರಾಯಣಗೌಡ ಅಸಮಾಧಾನ ಹೊರಹಾಕಿದ್ದು, ನಾನು ಮಂಡ್ಯ ಉಸ್ತುವಾರಿಯನ್ನು ಪಡೆದುಕೊಳ್ಳುವುದಿಲ್ಲ. ಮೂರು ಮೂರು ತಿಂಗಳಿಗೆ ಬದಲಾವಣೆ ಮಾಡುತ್ತಿದ್ದರೆ ನಾನು ಉಸ್ತುವಾರಿ ಹೊಣೆ ಹೊತ್ತುಕೊಳ್ಳಲು ಆಗುತ್ತಾ ಎಂದು ಪ್ರಶ್ನೆ ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ.
ಸಚಿವರಾದ ಆರ್. ಅಶೋಕ್, ಅಶ್ವತ್ಥ ನಾರಾಯಣ, ಕೆ.ಗೋಪಾಲಯ್ಯ ಅವರಲ್ಲಿಯೇ ಯಾರಾದರೂ ಒಬ್ಬರನ್ನು ಉಸ್ತುವಾರಿಯನ್ನಾಗಿ ಮಾಡಲಿ. ಅವರು ಚುನಾವಣೆಯನ್ನು ಗೆಲ್ಲಲು ಯಾವುದೇ ತೊಂದರೆ ಇಲ್ಲ. ಹೀಗಾಗಿ ಅವರಲ್ಲಿಯೇ ಒಬ್ಬರಿಗೆ ಹೊಣೆ ನೀಡಲಿ. ನಾನು ಅವರ ಜತೆ ಇರುತ್ತೇನೆ. ಗೋಪಾಲಯ್ಯಗೆ ಜವಾಬ್ದಾರಿ ಕೊಟ್ಟಾಗ ನಾನು ಅವರ ಜತೆ ನಿಂತು ಓಡಾಡಿದ್ದೇನೆ. ಮುಂದೆಯೂ ಉಸ್ತುವಾರಿಯಾದವರಿಗೆ ಕೈ ಜೋಡಿಸುತ್ತೇನೆ ಎಂದು ಹೇಳಿದರು.
ನನಗೆ ಶಿವಮೊಗ್ಗದ ಉಸ್ತುವಾರಿ ಹೊಣೆ ಕೊಟ್ಟಿದ್ದಾರೆ. ನನಗೆ ಈ ಹೊತ್ತಿನಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಹೊಣೆ ಕೊಟ್ಟರೆ ಒಪ್ಪಿಕೊಳ್ಳಲಾರೆ. ನಾನು ಶಿವಮೊಗ್ಗದಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿ ಕೆಲಸವನ್ನು ಅರ್ಧಕ್ಕೆ ಬಿಟ್ಟು, ಇಲ್ಲಿ ಅರ್ಧಕ್ಕೆ ಬಿಟ್ಟು ಕೆಲಸ ಮಾಡುವುದು ಕಷ್ಟ ಎಂದು ಹೇಳಿದರು.
ನಾರಾಯಣಗೌಡ ಮಂಡ್ಯದ ಕೆ.ಆರ್.ಪೇಟೆಯವರೇ ಆದ ಕಾರಣ ಸ್ಥಳೀಯ ಕಾರ್ಯಕರ್ತರ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಜೆಡಿಎಸ್ನಲ್ಲಿದ್ದ ಕಾರಣ ನಾರಾಯಣಗೌಡರಿಗೆ ದಳ ಕಾರ್ಯಕರ್ತರು ಮತ್ತು ನಾಯಕರ ಜೊತೆಗೆ ಒಡನಾಟ ಹೊಂದಿದ್ದಾರೆ. ಶಿವಮೊಗ್ಗ ಉಸ್ತುವಾರಿ ಕೊಟ್ಟ ಹಿನ್ನೆಲೆ ಅಸಮಾಧಾನಗೊಂಡಿರುವ ಕೆ.ಸಿ.ನಾರಾಯಣಗೌಡರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ತಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.
Advertisement