
ಬೆಂಗಳೂರು: ವಿರೋಧ ಪಕ್ಷ ಕಾಂಗ್ರೆಸ್ ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ರೂಪಿಸುತ್ತಿರುವ ಶೇ.40ರಷ್ಟು ಕಮಿಷನ್ ಹಾಗೂ ಭ್ರಷ್ಟಾಚಾರದ ಅಸ್ತ್ರಕ್ಕೆ ಪ್ರತಿಯಾಗಿ ಅರ್ಕಾವತಿ ಹಗರಣದ ಅಸ್ತ್ರ ಪ್ರಯೋಗಿಸಲು ಬಿಜೆಪಿ ಮುಂದಾಗಿದೆ ಎಂದು ತಿಳಿದುಬಂದಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗುರಿಯಾಗಿಟ್ಟುಕೊಂಡು ಕಾಂಗ್ರೆಸ್ ಕಾಲದ ಹಗರಣವನ್ನು ಒಂದೊಂದಾಗಿ ಹೊರಬಿಡಲು ಬಿಜೆಪಿ ಸಜ್ಜಾಗಿದೆ ಎನ್ನಲಾಗಿದೆ.
ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಈ ವಿಚಾರವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಮುಂದಿನ ಕ್ರಮದ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರು ಜೈಲಿಗೆ ಹೋಗುತ್ತಾರೆಂದು ಹೇಳಿದ್ದರು.
ನಿವೃತ್ತ ನ್ಯಾಯಮೂರ್ತಿ ಕೆಂಪಣ್ಣ ಆಯೋಗದ ವರದಿಯನ್ನ ಅಸ್ತ್ರವಾಗಿ ಮಾಡಿಕೊಳ್ಳುತ್ತಿರುವ ಬಿಜೆಪಿ ಪ್ರಚಾರದ ಸಂದರ್ಭದಲ್ಲಿ ಇದನ್ನು ಮತ್ತಷ್ಟು ಜನರಿಗೆ ಮನವರಿಕೆ ಮಾಡಿಕೊಟ್ಟು ಕಾಂಗ್ರೆಸ್ ಆಡಳಿತವೂ ಭ್ರಷ್ಟಾಚಾರಕ್ಕೆ ಹೊರತಾಗಿರಲಿಲ್ಲ ಎಂಬುದನ್ನು ಬಿಂಬಿಸಲಿದೆ.
ಇತ್ತೀಚೆಗೆ ವಿಧಾನಸಭೆಯಲ್ಲಿ ಬಜೆಟ್ ಮೇಲೆ ಉತ್ತರಿಸುವ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಾಲ ಗರ್ಭದಲ್ಲಿ ಅಡಗಿಹೋಗಿದ್ದ ಅರ್ಕಾವತಿ ಪ್ರಕರಣಕ್ಕೆ ಮರು ಜನ್ಮ ಕೊಟ್ಟಿದ್ದರು.
ರೀಡು ಹೆಸರಿನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ 800 ಕೋಟಿ ಹಗರಣವನ್ನು ನಡೆಸಿದ್ದರು ಎಂದು ಆರೋಪಿಸಿದ್ದರು. ಅಲ್ಲದೆ ಅವರ ಸುಳ್ಳಿನ ಒಂದೊಂದೇ ಹಗರಣಗಳು ಮತ್ತೆ ಬರಲಿವೆ ಎಂದು ಮುನ್ಸೂಚನೆ ನೀಡಿದರು.
ಇದರಂತೆ ಅರ್ಕಾವತಿ ಬಡಾವಣೆಯಲ್ಲಿ ಸುಮಾರು 858 ಎಕರೆ ಭೂ ಪ್ರದೇಶವನ್ನು ಡಿನೋಟಿಫೈ ಮಾಡಿರುವ ಬಗ್ಗೆ ಕೆಂಪಣ್ಣ ಆಯೋಗದ ವರದಿಯ ಅಂಶವನ್ನು ಸಿದ್ದರಾಮಯ್ಯ ವಿರುದ್ಧ ಬಳಸಲು ಬಿಜೆಪಿ ನಿರ್ಧರಿಸಿದೆ.
Advertisement