ಕಾಂಗ್ರೆಸ್'ಗೆ ಮತ ನೀಡಿದರೆ ಎರಡು ವರ್ಷದಲ್ಲಿ ಮಹದಾಯಿ ಯೋಜನೆ ಪೂರ್ಣ: ಸಿದ್ದರಾಮಯ್ಯ

ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದೇ ಆದರೆ, ಎರಡು ವರ್ಷದಲ್ಲಿ ಮಹದಾಯಿ ಯೋಜನೆ ಪೂರ್ಣಗೊಳಿಸುತ್ತೇವೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ.
ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡುತ್ತಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ.

ಹುಬ್ಬಳ್ಳಿ: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದೇ ಆದರೆ, ಎರಡು ವರ್ಷದಲ್ಲಿ ಮಹದಾಯಿ ಯೋಜನೆ ಪೂರ್ಣಗೊಳಿಸುತ್ತೇವೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.

ಮಹದಾಯಿ ಯೋಜನೆ ಕುರಿತು ಸೋಮವಾರ ಹುಬ್ಬಳ್ಳಿಯಲ್ಲಿ ನಡೆದ ಜಲಜನ ಸಮಾವೇಶಕ್ಕೆ ರಾಷ್ಟ್ರೀಯ ಹಾಗೂ ರಾಜ್ಯ ಕಾಂಗ್ರೆಸ್ ಮುಖಂಡರು ಆಗಮಿಸಿ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಕಿಡಿಕಾರಿದರು.

ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಬೊಮ್ಮಾಯಿ ಅವರು 'ಪ್ರಧಾನಿ ಮೋದಿ ಅವರ ಮುಂದೆ ಇಲಿಯಾಗಿರುವ ರಾಜ್ಯದ ಅತ್ಯಂತ ದುರ್ಬಲ ಸಿಎಂ' ಎಂದು ಬಣ್ಣಿಸಿದರು.

ಬಿಜೆಪಿಯು ಚುನಾವಣೆಯ ಮೊದಲು ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. 2018ರಲ್ಲಿ 1.50 ಲಕ್ಷ ಕೋಟಿ ನೀರಾವರಿಗೆ ನೀಡಲಾಗುವುದು ಎಂದು ಹೇಳಿದ್ದಿರಿ. ಇಲ್ಲಿಯವರೆಗೂ ಕೇವಲ 45 ಸಾವಿರ ಕೋಟಿ ಖರ್ಚು ಮಾಡಿದ್ದೀರಿ. ಇನ್ನು 1 ಲಕ್ಷ ಕೋಟಿ ಏನಾಯ್ತು? ಕಳಸಾ ಬಂಡೂರಿ ಯೋಜನೆ ಯಾಕೆ ಆರಂಭಿಸಲಿಲ್ಲ. ನಿಮ್ಮ ಪ್ರಣಾಳಿಕೆಯಲ್ಲಿ 600 ಭರವಸೆ ಕೊಟ್ಟಿದ್ದು ಅದಲ್ಲಿ ಶೇ.10ರಷ್ಟು ಜಾರಿ ಮಾಡಲು ಆಗಿಲ್ಲ ಎಂದು ಅವರು ಕಿಡಿಗಾರಿದರು.

ಇದೇ ವೇಳೆ ಮುಸ್ಲಿಂ ಸಮುದಾಯದ ಹಿತದೃಷ್ಟಿಯಿಂದ ಹುಬ್ಬಳ್ಳಿಯ ದರ್ಗಾ ಕೆಡವಲು ಮುಂದಾಗದಂತೆ ಬೊಮ್ಮಾಯಿ ಅವರಿಗೆ ಮನವಿ ಮಾಡಿರುವುದಾಗಿ ಹೇಳಿದರು.

''ಮುಸ್ಲಿಂ ಸಮುದಾಯದವರ ಜೊತೆ ಮಾತನಾಡುವಂತೆ ಸಿಎಂಗೆ ಹೇಳಿದ್ದೆ. ಆದರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಒತ್ತಡಕ್ಕೆ ಮಣಿದು ಬೊಮ್ಮಾಯಿ ದರ್ಗಾ ಕೆಡವಲು ಅನುಮತಿ ನೀಡಿದರು. ಇಂತಹ ದ್ವೇಷದ ರಾಜಕಾರಣವನ್ನು ಬಿಜೆಪಿ ಮುಂದಿನ ಕೆಲವು ತಿಂಗಳು ಮಾತ್ರ ಮಾಡಬಹುದು. ಈ ಸರ್ಕಾರವನ್ನು ಬೀಳಿಸಲು ರಾಜ್ಯದ ಜನತೆ ಕಾಯುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಾತನಾಡಿ, ಬಿಜೆಪಿ ಸರ್ಕಾರವು ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಸಚಿವಾಲಯದಿಂದ ಅಗತ್ಯ ಅನುಮತಿಗಳನ್ನು ತೆಗೆದುಕೊಂಡಿಲ್ಲ. ರಾಜ್ಯ ಚುನಾವಣೆಯತ್ತ ಸಾಗುತ್ತಿರುವಾಗ ಬಿಜೆಪಿ ಯೋಜನಾ ವರದಿಯನ್ನು ತಂದಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿವೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು, ಬಿಜೆಪಿ ಸರ್ಕಾರ ತನ್ನ ಕೊನೆಯ ದಿನಗಳನ್ನು ಎಣಿಸುತ್ತಿದೆ. “ಮಹದಾಯಿಗಾಗಿ ಅನೇಕ ರೈತರು ಮತ್ತು ಕಲಾವಿದರು ಹೋರಾಟ ಮಾಡಿದ್ದಾರೆ. ಇದೇ ಅವರು ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳದಿರಲು ಪ್ರಮುಖ ಕಾರಣ. ಪ್ರಸ್ತುತ ಬಿಜೆಪಿ ಸರ್ಕಾರದ ಸುಳ್ಳುಗಳಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದ ಎರಡು ವರ್ಷದಲ್ಲಿ ಮಹದಾಯಿ ಯೋಜನೆ ಪೂರ್ಣಗೊಳಿಸುತ್ತೇವೆ. ಈ ಯೋಜನೆಗೆ 1,000 ಕೋಟಿ ರೂ.ಗಳನ್ನು ಮೀಸಲಿಡುತ್ತೇವೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com