ಕಾಂಗ್ರೆಸ್ ನಿಂದ ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆ; 'ನಾ ನಾಯಕಿ' ಸಮಾವೇಶಕ್ಕೆ ಪ್ರಿಯಾಂಕಾ ಗಾಂಧಿ ಆಗಮನ
ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನವರಿ 16 ರಂದು ನಡೆಯುವ 'ನಾ ನಾಯಕಿ' ಸಮಾವೇಶಕ್ಕೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಆಗಮಿಸಲಿದ್ದಾರೆ. ರಾಜ್ಯದ ಮಹಿಳೆಯರ ಸಬಲೀಕರಣಕ್ಕಾಗಿ ಕಾಂಗ್ರೆಸ್ ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುವ ಬಗ್ಗೆ ಯೋಜಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಸೋಮವಾರ ತಿಳಿಸಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ರಾಜ್ಯ ವಿಧಾನಸಭಾ ಚುನಾವಣೆಗೆ ಮುನ್ನ ಎಲ್ಲಾ ಮಹಿಳೆಯರ ಬೆಂಬಲ ಪಡೆಯುವ ಗುರಿಯನ್ನು ಪ್ರಿಯಾಂಕಾ ಗಾಂಧಿ ಅವರು ಹೊಂದಿದ್ದಾರೆ. ಏಪ್ರಿಲ್-ಮೇ ವೇಳೆಗೆ ನಡೆಯಲಿರುವ ಚುನಾವಣೆಗೆ ಮುಂಚಿತವಾಗಿ ಪಕ್ಷ ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡುವ ಬಗ್ಗೆ ಯೋಜಿಸುತ್ತಿದೆ ಎಂದರು.
ಹೆಣ್ಣು ಸಮಾಜದ ಶಕ್ತಿಯಾಗಿದ್ದು, ಅವರ ಸಬಲೀಕರಣಕ್ಕೆ ಈ ಸಮಾವೇಶ ಹಮ್ಮಿಕೊಂಡಿದ್ದೇವೆ. ಈ ಸಮಾವೇಶಕ್ಕೆ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಿದ್ದೇವೆ. ಈಗಾಗಲೇ ಸಾವಿರಾರು ಸಲಹೆಗಳು ಬಂದಿವೆ. ಅವುಗಳನ್ನು ಒಂದು ಸಮಿತಿ ಪರಿಶೀಲನೆ ನಡೆಸುತ್ತಿದೆ. ಮಹಿಳೆಯರಿಗೆ ಪಕ್ಷ ನೀಡುವ ಭರವಸೆಗಳನ್ನು ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ ಘೋಷಣೆ ಮಾಡಲಿದ್ದಾರೆ ಎಂದ ಅವರು ತಿಳಿಸಿದರು.
ಗ್ರಾಮ ಪಂಚಾಯಿತಿ, ಸಹಕಾರ ಸಂಘಗಳಲ್ಲಿ ಸ್ಪರ್ಧಿಸಿದ ಮಹಿಳಾ ನಾಯಕಿಯರು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಪ್ರತಿ ಬೂತ್, ಪಂಚಾಯಿತಿಗಳಿಂದ ಕನಿಷ್ಠ 3 ರಿಂದ 10 ಹೆಣ್ಣು ಮಕ್ಕಳು ಭಾಗವಹಿಸಬೇಕು ಎಂದು ಡಿಕೆಶಿ ಆಹ್ವಾನ ನೀಡಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ