ಒಬ್ಬ ವ್ಯಕ್ತಿಯನ್ನು ದೇವರನ್ನಾಗಿ ಮಾಡಿದರೆ ಅದು ಪ್ರಜಾಪ್ರಭುತ್ವವಾಗಲ್ಲ, ಸರ್ವಾಧಿಕಾರವಾಗುತ್ತದೆ: ಮಲ್ಲಿಕಾರ್ಜುನ ಖರ್ಗೆ

ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಯನ್ನು ದೇವರನ್ನಾಗಿ ಮಾಡಿದರೆ ಅದು ಪ್ರಜಾಪ್ರಭುತ್ವವಾಗುವುದಿಲ್ಲ, ಆದರೆ ಅದು ಸರ್ವಾಧಿಕಾರವಾಗುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಭಾನುವಾರ ಆಡಳಿತಾರೂಢ ಬಿಜೆಪಿ ಮತ್ತು ಪ್ರಧಾನಮಂದ್ರಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು.
ಸಮಾವೇಶದಲ್ಲಿ ಮಾತನಾಡುತ್ತಿರುವ ಮಲ್ಲಿಕಾರ್ಜುನ ಖರ್ಗೆ
ಸಮಾವೇಶದಲ್ಲಿ ಮಾತನಾಡುತ್ತಿರುವ ಮಲ್ಲಿಕಾರ್ಜುನ ಖರ್ಗೆ

ಚಿತ್ರದುರ್ಗ: ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಯನ್ನು ದೇವರನ್ನಾಗಿ ಮಾಡಿದರೆ ಅದು ಪ್ರಜಾಪ್ರಭುತ್ವವಾಗುವುದಿಲ್ಲ, ಆದರೆ ಅದು ಸರ್ವಾಧಿಕಾರವಾಗುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಭಾನುವಾರ ಆಡಳಿತಾರೂಢ ಬಿಜೆಪಿ ಮತ್ತು ಪ್ರಧಾನಮಂದ್ರಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದರು.

ಕೋಟೆನಾಡು ಚಿತ್ರದುರ್ಗದ ಮುರುಘಾ ರಾಜೇಂದ್ರ ಕ್ರೀಡಾಂಗಣದಲ್ಲಿ ಭಾನುವಾರ ಕಾಂಗ್ರೆಸ್ ಪಕ್ಷದ ಪರಿಶಿಷ್ಟ ಸಮುದಾಯಗಳ ಐಕ್ಯತಾ ಸಮಾವೇಶ ನಡೆಯಿತು.

ಈ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆಯವರು ಬಿಜೆಪಿ ಹಾಗೂ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದರು.

ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಸಮಾಜದ ಎಲ್ಲಾ ವರ್ಗಗಳು, ವಿಶೇಷವಾಗಿ ಎಸ್‌ಸಿ/ಎಸ್‌ಟಿ ಮತ್ತು ಇತರ ದುರ್ಬಲ ವರ್ಗಗಳು ಒಂದಾಗಬೇಕು ಎಂದು ಕರೆ ನೀಡಿದರು.

ಇದೇ ವೇಳೆ ಗುಜರಾತ್ ಚುನಾವಣೆಯ ಸಂದರ್ಭದಲ್ಲಿ ಮತ ಯಾಚಿಸುತ್ತಿದ್ದ ಮೋದಿಯವರು ತಮ್ಮ ಗುಜರಾತಿ ಗುರುತನ್ನು ಪ್ರದರ್ಶಿಸುತ್ತಿದ್ದನ್ನು ಜನರಿಗೆ ತಿಳಿಸಿ, ನಾನು ಕೂಡ ಇಲ್ಲಿನ ಮಣ್ಣಿನ ಮಗ. ನನ್ನನ್ನು ಇಲ್ಲಿನ ಜನರು ಬೆಂಬಲಿಸಬೇಕು. ಮುಂಬರುವ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಮತ ಹಾಕುವಂತೆ ಜನರನ್ನು ಒತ್ತಾಯಿಸಿದರು,

"ಪ್ರತಿಯೊಂದಕ್ಕೂ ಮೋದಿ ಎನ್ನಲಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಒಬ್ಬ ವ್ಯಕ್ತಿಯನ್ನು ದೇವರನ್ನಾಗಿ ಮಾಡಿದರೆ ಅದು ಪ್ರಜಾಪ್ರಭುತ್ವವಾಗುವುದಿಲ್ಲ. ಅದು ನಿರಂಕುಶಾಧಿಕಾರ, ಸರ್ವಾಧಿಕಾರಕ್ಕೆ ಕಾರಣವಾಗುತ್ತದೆ. ನಿಮ್ಮ ಹಕ್ಕುಗಳನ್ನು ನೀವು ತಿಳಿದುಕೊಳ್ಳಬೇಕು ಮತ್ತು ಅದನ್ನು ಪಡೆಯಲು ನೀವು ಹೋರಾಡಬೇಕು.

ನಿಮ್ಮಲ್ಲಿ ಶಕ್ತಿ ಇದ್ದರೆ ಒಗ್ಗಟ್ಟಾಗಿದ್ದರೆ ಬೆಲೆ ಸಿಗುತ್ತದೆ. ಒಗ್ಗಟ್ಟಿಲ್ಲದಿದ್ದರೆ ಬ್ರಿಟಿಷರು ಬಳಸಿದ ಮತ್ತು ಈಗ ಮೋದಿ ಬಳಸುತ್ತಿರುವ ಒಡೆದು ಆಳುವ ತತ್ವವನ್ನು ನಿಮ್ಮ ಮೇಲೆ ಎಲ್ಲರೂ ಹೇರುದ್ದಾರೆ. ಇದನ್ನು ನೆನಪಿನಲ್ಲಿಡಿ."

ದೇಶದಲ್ಲಿ ಪ್ರಜಾಪ್ರಭುತ್ವ ರಕ್ಷಣೆ, ಸಂವಿಧಾನದ ರಕ್ಷಣೆಯೇ ಗುರಿಯಾಗಬೇಕು, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಇದ್ದರೆ ಮೀಸಲಾತಿ, ಬಡ್ತಿ ಕೇಳಿ ಶಾಸಕರಾಗಬಹುದು, ಸಚಿವರಾಗಬಹುದು ಎಂದು ತಿಳಿಸಿದರು.

ಎಐಸಿಸಿ ಮುಖ್ಯಸ್ಥರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ "ಭಾರತ್ ಜೋಡೋ ಯಾತ್ರಾ" ರಾಷ್ಟ್ರವ್ಯಾಪಿ ಮೆರವಣಿಗೆಯಲ್ಲಿ ಲಕ್ಷಾಂತರ ಜನರು ಸೇರುತ್ತಿದ್ದಾರೆ, ಏಕೆಂದರೆ ಇದು ನಿರುದ್ಯೋಗ, ಬೆಲೆ ಏರಿಕೆ ಮತ್ತು ಇತರ ವಿಷಯಗಳ ಮೇಲೆ ಕೇಂದ್ರೀಕರಿಸುತ್ತಿದೆ. ಸರ್ಕಾರಿ ವಲಯದಲ್ಲಿ 30 ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ, ಮೋದಿಯವರು ಭರ್ತಿ ಮಾಡುತ್ತಿಲ್ಲ, ಏಕೆ? ಅದನ್ನು ಭರ್ತಿ ಮಾಡುವಂತೆ ಪ್ರಶ್ನಿಸಿ ಒತ್ತಾಯಿಸಬೇಕಿದೆ. 30 ಲಕ್ಷದ ಪೈಕಿ 15 ಲಕ್ಷ ಎಸ್‌ಸಿ/ಎಸ್‌ಟಿ ಮತ್ತು ಒಬಿಸಿಗಳಿಗೆ ಇವುಗಳು ಉದ್ಯೋಗಗಳಾಗಿವೆ.

ಬಿಜೆಪಿ ಈ ಖಾಲಿ ಹುದ್ದೆಗಳನ್ನು ತುಂಬಲು ನೇಮಕಾತಿ ಮಾಡುತ್ತಿಲ್ಲ, ಏಕೆಂದರೆ, ಬಡವರಿಗೆ ಉದ್ಯೋಗ ಸಿಕ್ಕರೆ ಮತ್ತು ಅವರ ಕೈಗೆ ಹಣ ಸಿಕ್ಕರೆ, ಅವರ (ಬಿಜೆಪಿ) ಆಟ ಮುಗಿಯುತ್ತದೆ. ಆದ್ದರಿಂದ ಅವರು ದೈನಂದಿನ ವೇತನ ಮತ್ತು ಗುತ್ತಿಗೆ ಆಧಾರದ ಮೇಲೆ ಜನರನ್ನು ನೇಮಿಸಿಕೊಳ್ಳುತ್ತಿದ್ದಾರೆಂದು ಹೇಳಿದರು.

ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿ ಮೌನವಾಗಿರುವ ಸರಕಾರವನ್ನು ಪ್ರಶ್ನಿಸಬೇಕು. ಈ ಬಗ್ಗೆ ಯಾರಾದ್ರೂ ಕೇಳಿದ್ದೀರಾ? ಇಲ್ಲ, ಮೋದಿ ಬಂದಾಗ ಮೋದಿ, ಮೋದಿ ಘೋಷಣೆಗಳು ಪ್ರತಿಧ್ವನಿಸುತ್ತವೆ ಮತ್ತು ಅಮಿತ್ ಶಾ ಬಂದಾಗ ಶಾ, ಶಾ ಘೋಷಣೆಗಳು ಪ್ರತಿಧ್ವನಿಸುತ್ತವೆ. ಉದ್ಯೋಗಗಳ ಬಗ್ಗೆ ಅವರನ್ನು ಕೇಳಿ ಎಂದರು.

ಇದೇ ವೇಳೆ ನಿರುದ್ಯೋಗ, ರೈತರ ಸಮಸ್ಯೆಗಳ ಕುರಿತು ದನಿ ಎತ್ತಿದ ಅವರು, ಇಷ್ಟೆಲ್ಲ ಇದ್ದರೂ ಎಸ್‌ಸಿ/ಎಸ್‌ಟಿ ಸಮುದಾಯದವರೂ ಏಕೆ ಸುಮ್ಮನಿದ್ದಾರೆ? ನೀವು ಯಾಕೆ ಹೋರಾಟ ಮಾಡಲಿಲ್ಲ? ಇದು ಸಂವಿಧಾನದಡಿ ಒದಗಿಸಿರುವ ನಿಮ್ಮ ಮೂಲಭೂತ ಹಕ್ಕು. ಬಡವರ ಪರ ಅಥವಾ ಆಡಳಿತ ವ್ಯವಸ್ಥೆ ಮತ್ತು ಅದರ ನೀತಿಗಳ ವಿರುದ್ಧ ಬರೆಯುವ ಪ್ರಗತಿಪರ ಚಿಂತಕರು ಮತ್ತು ಬರಹಗಾರರನ್ನು ನೇರವಾಗಿ ಜೈಲಿಗೆ ಕಳುಹಿಸಲಾಗುತ್ತದೆ ಮತ್ತು ಅವರಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲದಂತೆ ಮಾಡಲಾಗುತ್ತಿದೆ, ಮಾಧ್ಯಮಗಳು ಮೋದಿಯನ್ನು ಮಾತ್ರ ತೋರಿಸುತ್ತಿವೆ ಎಂದು ಆರೋಪಿಸಿದರು.

ನಾನು ಗುಜರಾತ್‌ನಲ್ಲಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದೆ, ಮೋದಿ ಹೋದಲ್ಲೆಲ್ಲಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು - ನಾನು ಬಡವನ ಮಗ, ಮಣ್ಣಿನ ಮಗ, ಗುಜರಾತಿನವರೇ, ದಯವಿಟ್ಟು ನನ್ನನ್ನು ಕೈ ಹಿಡಿದು ಬೆಳೆಸಿ, ಗುಜರಾತ್‌ನಲ್ಲಿ ಜನರು ಮೋದಿಯವರ ಕೈ ಹಿಡಿದು ಬೆಳೆಸಿದಾಗ, ನೀವು ಇಲ್ಲಿ ಕರ್ನಾಟಕದಲ್ಲಿ ನನಗೂ ಅದೇ ರೀತಿ ಮಾಡಬೇಕು.

ಮೋದಿಯವರು ಗುಜರಾತಿನ ಗುರುತನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದರು, ''ಇಲ್ಲಿ ನಾವೆಲ್ಲ ಕರ್ನಾಟಕದವರು, ಸಿದ್ದರಾಮಯ್ಯ, ಶಿವಕುಮಾರ್, ಮುನಿಯಪ್ಪ (ಮಾಜಿ ಕೇಂದ್ರ ಸಚಿವ), ಪರಮೇಶ್ವರ (ಮಾಜಿ ಉಪ ಮುಖ್ಯಮಂತ್ರಿ) ಮತ್ತು ನಾನು ಕರ್ನಾಟಕದವರು. ಹಾಗಾಗಿ ನಾವೂ ಈ ಮಣ್ಣಿನ ಮಕ್ಕಳು, ನಮ್ಮನ್ನು ಆಯ್ಕೆ ಮಾಡಿ ಸರ್ಕಾರ ರಚನೆ ಮಾಡುವಂತೆ ಒತ್ತಾಯಿಸುತ್ತೇವೆ.

ಪ್ರಗತಿಪರ ರಾಜ್ಯವಾಗಿದ್ದ ಕರ್ನಾಟಕ ಬಿಜೆಪಿ ಆಡಳಿತದಲ್ಲಿ ಪಾಳು ಬಿದ್ದಿದೆ. ಧರ್ಮ, ಜಾತಿಯ ಹೆಸರಿನಲ್ಲಿ ಜನರ ನಡುವೆ ಜಗಳ ಸೃಷ್ಟಿಸಿದ್ದಾರೆ, ಅದಕ್ಕೆ ಬಿಜೆಪಿಯೇ ಹೊಣೆ. ಬಿಜೆಪಿ ಆಡಳಿತದಲ್ಲಿ ಯಾವುದೇ ಕೆಲಸ ನಡೆಯುತ್ತಿಲ್ಲ, ಎಲ್ಲೆಡೆ ಹಣದ ಬೇಡಿಕೆ ಇದೆ.

ಎಲ್ಲ ಹಂತದಲ್ಲೂ ಹಣ ಮುಖ್ಯ ಎನ್ನುತ್ತಾರೆ ಅಧಿಕಾರಿಗಳು, ಇಲ್ಲಿ ಇಂತಹ ಸರ್ಕಾರವಿದೆ, ಇಲ್ಲಿ ಇಂತಹ ಸರ್ಕಾರ ಬೇಕಾ? ಅಂತಹ ಸರ್ಕಾರ ಹೋಗಬೇಕಾದರೆ ನೀವು ಒಟ್ಟಾಗಿ ಕಾಂಗ್ರೆಸ್ ಗೆಲ್ಲಿಸಲು ಶ್ರಮಿಸಬೇಕು ಎಂದರು.

ಬಳಿಕ ಇತ್ತೀಚೆಗೆ ಕರ್ನಾಟಕಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ಅವರು ತಮ್ಮ ತವರು ರಾಜ್ಯವಾದ ಹಿಮಾಚಲ ಪ್ರದೇಶದಲ್ಲಿ ಸೋತರು. ಇಲ್ಲಿಗೆ ಬಂದು  ಮತ ಕೇಳುತ್ತಿದ್ದಾರೆ ಎಂದರು.

ಸಮಾವೇಶದಲ್ಲಿ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಡಿ ಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ಪಕ್ಷದ ಮುಖಂಡರು ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com